ಉಡುಪಿ: ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆ ಸಂತೆಕಟ್ಟೆ ಕಲ್ಯಾಣಪುರ ಇಲ್ಲಿನ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮತ್ತು ರಾಷ್ಟ್ರ ಮಟ್ಟದಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಶನಿವಾರ ಜರುಗಿತು.
ಸಭಾ ಕಾರ್ಯಕ್ರಮಕ್ಕೆ ಮೊದಲು ಸಂತೆಕಟ್ಟೆ ಬಸ್‍ನಿಲ್ದಾಣದಿಂದ ಕ್ರಿಡೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ತೆರೆದ ವಾಹನದಲ್ಲಿ ಕರೆತರಲಾಯಿತು. ರಸ್ತೆಯುದ್ದಕ್ಕೂ ಸಾರ್ವಜನಿಕರು, ಪೋಷಕರು, ಹಾಗೂ ಹಿತೈಷಿಗಳು ಹಾರ ತೊಡಿಸಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.
ಮೆರವಣಿಗೆ ಬಳಿಕ ಮೌಂಟ್ ರೋಸರಿ ಮಿಲೇನಿಯಮ್ ಹಾಲಿನಲ್ಲಿ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕ ಹಾಗೂ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಧರ್ಮಗುರುಗಳಾದ ವಂ ಫಿಲಿಪ್ ನೆರಿ ಆರಾನ್ಹಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನೂತನ ಜಿಲ್ಲಾಪಂಚಾಯತ್ ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ ವಿದ್ಯಾರ್ಥಿಗಳು ಸಾಧನೆ ಕೇವಲ ಅವರ ಶಾಲೆಗೆ ಕೀರ್ತಿ ತಂದಿರುವುದಲ್ಲ ಬದಲಾಗಿ ಇಡೀ ರಾಜ್ಯ ಹಾಗೂ ದೇಶಕ್ಕೆ ಆಗಿದ್ದು, ಇಂತಹ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ವಿದ್ಯಾರ್ಥಿಗಳ ಈ ಸಾಧನೆಗೆ ಸಮಾಜದ ಪ್ರೋತ್ಸಾಹದೊಂದಿಗೆ ಪೋಷಕರ ಸಹಕಾರ ಹಾಗೂ ಬೆಂಬಲ ಕೂಡ ಅಗತ್ಯವಿದ್ದು ಅದು ಲಭಿಸಿದಾಗ ಇನ್ನಷ್ಟು ಸಾಧನೆಯನ್ನು ತೋರಲು ಸಹಕಾರಿಯಾಗುತ್ತದೆ ಎಂದರು.
ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟದಲ್ಲಿ ಮೂರನೇ ಸ್ಥಾನ ಪಡೆದ ಮಹಿಮಾ ಶೇರೆಗಾರ್, ವಾಲಿಬಾಲ್ ಮತ್ತು 80 ಮೀ ಹರ್ಡಲ್ಸ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮನೋಜ್ ರಾವ್ ಮತ್ತು ದಶರಥ್ ಹಾಗೂ ಚೆಸ್ ತರಬೇತುದಾರ ಬಾಬು ಪೂಜಾರಿ ಇವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
ಬ್ರಹ್ಮಾವರ ಸ್ಪೋಟ್ರ್ಸ್ ಕ್ಲಬ್ ಇದರ ಅಧ್ಯಕ್ಷರಾದ ಚಂದ್ರಶೇಖರ್ ಹೆಗ್ಡೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುಜಂಗ ಶೆಟ್ಟಿ, ಬ್ರಹ್ಮಾವರ ವಲಯ ದೈಹಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಶಾಂತ್ ಸಾಮಂತ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಗ್ರೆಗರಿ ಡಿ’ಸಿಲ್ವಾ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ನಿತ್ಯಾನಂದ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಎಡ್ರಿಯನ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕ ಸುನಿಲ್ ಪೂಜಾರಿ ಸ್ವಾಗತಿಸಿ, ನಾಗರಾಜ್ ವಂದಿಸಿದರು.