Home Mangalorean News Kannada News ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಸಮಾಜ ಸೇವಾ ಅಂಗ `ಸಂಪದ’ ಸಂಸ್ಥೆಯ ಐದನೇ ವರ್ಷಾಚರಣೆ ಸಂಭ್ರಮ

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಸಮಾಜ ಸೇವಾ ಅಂಗ `ಸಂಪದ’ ಸಂಸ್ಥೆಯ ಐದನೇ ವರ್ಷಾಚರಣೆ ಸಂಭ್ರಮ

Spread the love

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಸಮಾಜ ಸೇವಾ ಅಂಗ `ಸಂಪದ’ ಸಂಸ್ಥೆಯ ಐದನೇ ವರ್ಷಾಚರಣೆ ಸಂಭ್ರಮ

ಉಡುಪಿ: 2014 ರಲ್ಲಿ ಸ್ಥಾಪಿಸಲ್ಪಟ್ಟ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ `ಸಂಪದ’ ಸಮಾಜ ಸೇವಾ ಸಂಸ್ಥೆಯು ದೀನ-ದಲಿತರಿಗೆ ತನ್ನ ಸಾರ್ಥಕ ಸೇವೆಯ ಐದು ವರ್ಷಗಳನ್ನು ಪೂರೈಸಿದೆ. ಐದನೇ ವರ್ಷಾಚರಣೆ ಸಮಾರಂಭವು ಉಡುಪಿ ಶೋಕಮಾತಾ ದೇವಾಲಯದ ಸಭಾಂಗಣದಲ್ಲಿ ಜೂನ್ 29 ರಂದು ಜರುಗಿತು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೆರಾಲ್ಡ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಮಾನವ ಕುಲದ ಹಾಗು ವಿಶೇಷವಾಗಿ ಬಡಬಗ್ಗರ ಏಳಿಗೆಗಾಗಿ ಸಂಪದ ಸಂಸ್ಥೆಯು ನೀಡುತ್ತಿರುವ ದೇಣಿಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಫಾದರ್ ಓಜ್ವಲ್ಡ್ ಮೊಂತೇರೊ, ಕರ್ನಾಟಕ ಪ್ರಾಂತೀಯ ಸಮಾಜ ಸೇವಾ ಸಂಸ್ಥೆಯ ಸಿಸ್ಟರ್ ಝೀಟಾ ಡಿ’ಸೋಜಾ, ಕೆನರಾ ವೆಲ್ಫೇರ್ ಅಸೋಶಿಯೇಶನ್‍ನ ಪ್ರತಿನಿಧಿ ಅನಿಲ್ ಫೆರ್ನಾಂಡಿಸ್, ಎಂಸಿಸಿ ಸಂಸ್ಥೆಯ ಪ್ರತಿನಿಧಿ ಪ್ರಕಾಶ್ ನೊರೋನ್ಹಾ, ಮಕ್ಕಳ ಸಮಗ್ರ ಕಲ್ಯಾಣ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ವೀರಾ ಮೊನಿಸ್ ಹಾಗೂ ಸಂಪದ ಸಂಸ್ಥೆಯ ನಿರ್ದೇಶಕ ಫಾದರ್ ರೆಜಿನಾಲ್ಡ್ ಪಿಂಟೊ ವೇದಿಕೆಯಲ್ಲಿದ್ದರು.

ನಿರ್ದೇಶಕರು ಸ್ವಾಗತಿಸಿ ಐದು ವರ್ಷಗಳ ವರದಿಯನ್ನು ವಾಚಿಸಿ, ಸಂಸ್ಥೆಯ ಸಾಧನೆಗಳ ಕಿರುಪರಿಚಯವನ್ನು ನೀಡಿದರು. ಮಹಿಳಾ ಸಬಲೀಕರಣ ಸಂಸ್ಥೆಯ ಮುಖ್ಯ ಆದ್ಯತೆಗಳಲ್ಲಿ ಒಂದಾಗಿದ್ದು, ಕಳೆದ ಐದು ವರ್ಷಗಳಲ್ಲಿ 431 ಸ್ವ-ಸಹಾಯ ಸಂಘಗಳಲ್ಲಿ 6,520 ಮಹಿಳೆಯರನ್ನು ಸಂಘಟಿಸಲಾಗಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ ಎಂದು ಅವರು ತಿಳಿಸಿದರು. ಮಹಿಳಾ ಸ್ವ-ಸಹಾಯ ಸಂಘಗಳ ಜೊತೆಗೆ 12 ಪುರುಷ ಸ್ವ-ಸಹಾಯ ಸಂಘಗಳನ್ನೂ ಸ್ಥಾಪಿಸಿದ್ದು ಇವುಗಳಲ್ಲಿ 173 ಸದಸ್ಯರು ಸಕ್ರಿಯರಾಗಿದ್ದಾರೆ ಎಂದರು. ಇದಲ್ಲದೇ, ಸಂಪದ ಸಂಸ್ಥೆಯು ಜಲ ಸಂರಕ್ಷಣೆ, ಹಸುರೀಕರಣ, ತರಕಾರಿ ಬೆಳೆಸುವಿಕೆ, ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯಹಸ್ತವನ್ನು ನೀಡುತ್ತಿದೆ.

ಈ ಸಮಾರಂಭದಲ್ಲಿ ಸಂಸ್ಥೆಯ ಐದು ವರ್ಷಗಳ ಸಾಧನೆಗಳ ಪರಿಚಯವನ್ನು ನೀಡುವ ‘ಸಂಪದದ ಹೆಜ್ಜೆಗಳು’ ಎಂಬ ಸ್ಮರಣಾ ಗ್ರಂಥವನ್ನು ಫಾದರ್ ಓಸ್ವಲ್ಡ್ ಬಿಡುಗಡೆಗೊಳಿಸಿದರು. ಅತ್ಯುತ್ತಮ ಸಾಧನೆಯನ್ನು ಮಾಡಿದ ಪ್ರೀತಿ, ದಿವ್ಯ, ರೋಸ್, ಚಿಗುರು ಮತ್ತು ಸ್ಮೈಲ್ ಸ್ವ-ಸಹಾಯ ಸಂಘಗಳಿಗೆ ಬಿಷಪ್ ಜೆರಾಲ್ಡ್ ಲೋಬೊರವರು ‘ಅತ್ಯುತ್ತಮ ಸ್ವ ಸಹಾಯ ಸಂಘ 2019 ಪ್ರಶಸ್ತಿ’ ಯನ್ನು ನೀಡಿ ಸನ್ಮಾನಿಸಿದರು. ಅಂತೆಯೇ ಕ್ಯಾರಲ್ ಫೆರ್ನಾಂಡಿಸ್, ಕಾರ್ಮಿಲ್ ಲುವಿಸ್ ಹಾಗೂ ಮರೀನಾ ಲುವಿಸ್ ಇವರಿಗೆ ‘ಅತ್ಯುತ್ತಮ ಸ್ತ್ರೀ ಸಾಧಕಿ 2019 ಪ್ರಶಸ್ತಿ’ ಯನ್ನು ನೀಡಿದರು.

ಲಿಲ್ಲಿ ಡಿ’ಸೋಜಾರವರು ವಂದನಾರ್ಪಣೆಗೈದರು. ಸಂಪದ ಸಂಸ್ಥೆಯ ಕಾರ್ಯಕರ್ತರಾದ ಸ್ಟೇನಿ ಫೆರ್ನಾಂಡಿಸ್ ಮತ್ತು ಜೆಸ್ವೀಟಾ ಸಿಕ್ವೇರಾರವರು ಕಾರ್ಯಕ್ರಮವನ್ನು ರೂಪಿಸಿದರು.


Spread the love

Exit mobile version