ಉಡುಪಿ ಗ್ಯಾಂಗ್ ವಾರ್ ಪ್ರಕರಣ ರಾಜ್ಯದ ಗೃಹ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ : ಯಶ್ಪಾಲ್ ಸುವರ್ಣ ಆಕ್ರೋಶ
ಉಡುಪಿ: ಸುಸಂಸ್ಕೃತ, ಬುದ್ಧಿವಂತರ ಜಿಲ್ಲೆ ಉಡುಪಿ ಜಿಲ್ಲೆಯಲ್ಲಿ ನಡುರಾತ್ರಿಯಲ್ಲಿ ಉಡುಪಿಯ ಮುಖ್ಯರಸ್ತೆಯಲ್ಲಿ ರೌಡಿಗಳು ಮಾರಕಾಸ್ತ್ರ ಬಳಸಿ ಅಟ್ಟಹಾಸ ಮೆರೆದಿರುವ ಗ್ಯಾಂಗ್ ವಾರ್ ಘಟನೆ ರಾಜ್ಯದಲ್ಲಿ ಗೃಹ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದ್ದು, ಕಾಂಗ್ರೆಸ್ ಸರಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಉಡುಪಿಯ ಪಾಲಿಗೆ ಕಪ್ಪುಚುಕ್ಕೆಯಾಗಿದ್ದು, ಶಾಂತಿಪ್ರಿಯ ಜನತೆ ಆತಂಕಕ್ಕೀಡಾಗಿದ್ದಾರೆ. ನಡುಬೀದಿಯಲ್ಲಿ ತಲವಾರು ಹಿಡಿದು ಗ್ಯಾಂಗ್ ವಾರ್ ನಡೆಸಿರುವ ರೌಡಿಗಳನ್ನು ಪೊಲೀಸ್ ಇಲಾಖೆ ತಕ್ಷಣ ಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು.
ಪೋಲಿಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೌಡಿಗಳ ಹೆಡೆಮುರಿ ಕಟ್ಟಿ ಇಂತಹ ಪ್ರಕರಣ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಉತ್ತೇಜನ ನೀಡುತ್ತಿರುವ ಡ್ರಗ್ಸ್ ದಂಧೆಯನ್ನು ನಿಯಂತ್ರಿಸಬೇಕು.
ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ಧಾರ್ಮಿಕ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಉಡುಪಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು ತಕ್ಷಣ ಗೃಹ ಸಚಿವರು ಜಿಲ್ಲೆಗೆ ಭೇಟಿ ಪರಿಸ್ಥಿತಿ ಅವಲೋಕನ ಮಾಡುವಂತೆ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.