ಉಡುಪಿ : ಕೃಷ್ಣನನ್ನು ಕೇವಲ ರೇಖಾ ವಿನ್ಯಾಸಗಳಲ್ಲಿ ಮಾತ್ರವಲ್ಲ `ವಿಶಿಷ್ಟವರ್ಣ’ಗಳಿಂದಲೂ ಸಮರ್ಥವಾಗಿ ಕಲಾಕೃತಿಗಳನ್ನು ರಚಿಸಲು ಸಾಧ್ಯವೆಂಬುದನ್ನು ನಿರೂಪಿಸಲು ಕಲಾವಿದೆ ಪ್ರವೀಣಾ ಮೋಹನ್ ಪ್ರಯತ್ನಿಸಿದ್ದು ಇದರ ಪ್ರದಶನವು ಡಿ. 23 ರಿಂದ ಡಿ. 27ರವರೆಗೆ ಕುಂಜಿಬೆಟ್ಟುವಿನ ಗ್ಯಾಲರಿ ಅದಿತಿಯಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಅದಿತಿ ಟ್ರಸ್ಟ್‍ನ ವ್ಯವಸ್ಥಾಪಕ ವಿಶ್ವಸ್ಥರಾದ ಡಾ| ಕಿರಣ್ ಆಚಾರ್ಯ ಅವರು ಡಿ. 20ರಂದು ಇಲ್ಲಿ ಜರಗಿದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಕಲಾಕೃತಿಗಳನ್ನು ಆಸ್ವಾದಿಸಲು ಪರಿಪೂರ್ಣ ಗಾಳಿ, ಬೆಳಕುಗಳ ವ್ಯವಸ್ಥೆ ಅತಿ ಅಗತ್ಯವಾಗಿ ಬೇಕು. ಕಲಾಸಕ್ತರು ಕಲಾಕೃತಿಗಳನ್ನು ವೀಕ್ಷಿಸಲು ವೈಜ್ಞಾನಿಕ ಅಂತರವೂ ಅವಶ್ಯವಾಗಿ ಬೇಕು. ಇದರೊಂದಿಗೆ ಸುಶ್ರಾವ್ಯವಾದ ನಿನಾದ ಕಲಾಕೃತಿಗಳ ವೀಕ್ಷಣೆಗೆ ಹೆಚ್ಚು ಆಸಕ್ತಿಯನ್ನು ಪೂರೈಸುತ್ತದೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಗ್ಯಾಲರಿ ಅದಿತಿ ಸಿದ್ದಗೊಂಡಿದೆ. ಇದರಿಂದ ಅನೇಕ ಕಲಾವಿದರಿಗೆ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಹೊಸ ಅವಕಾಶವನ್ನು ಮಾಡಿಕೊಟ್ಟಿದೆ ಎಂದು ಅವರು ಮಾಹಿತಿ ನೀಡಿದರು.
22 ಆ್ಯಕ್ರಿಲಿಕ್, 4 ರೇಖಾಚಿತ್ರ ಮತ್ತು 1ಉಬ್ಬು ಶಿಲ್ಪ ಹೀಗೆ ಒಟ್ಟು 27 ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಬಾರಿ ಕೃಷ್ಣ ಅಪರೂಪದ ಬಣ್ಣಗಳೊಂದಿಗೆ ಕಂಗೊಳಿಸಲಿದ್ದಾನೆ ಎಂದು ಕಲಾವಿದೆ ಪ್ರವೀಣಾ ಮೋಹನ್ ತಿಳಿಸಿದರು.
ಕಲಾ ಪ್ರದರ್ಶನವು ಡಿ. 23ರಂದು ಸಂಜೆ 6 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಶ್ರೀ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಅನುಗ್ರಹಿಸಲಿದ್ದಾರೆ. ಮಣಿಪಾಲ ಗ್ರೂಪ್‍ನ ಆಡಳಿತ ನಿರ್ದೇಶಕ ಶ್ರೀ ಟಿ. ಗೌತಮ್ ಪೈ ಉದ್ಘಾಟಿಸಲಿದ್ದಾರೆ. ಕಲಾಪ್ರದರ್ಶನವನ್ನು ಡಿ. 24 ರಿಂದ ಡಿ. 27ರವರೆಗೆ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.