ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅವಕಾಶ ನೀಡಲು ಜಿಲ್ಲಾ ಕಾಂಗ್ರೆಸ್ ಆಗ್ರಹ
ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಲು ಅವಕಾಶ ನೀಡುವಂತೆ ಪಕ್ಷದ ಹೈಕಮಾಂಡ್ ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ಈ ಕುರಿತು ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್. ಪಕ್ಷವು ಪಂಚಾಯತ್ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳನ್ನು ಹೊಂದಿಲ್ಲ. ಹಾಗೆಯೇ ಬ್ಲಾಕ್ ಮಟ್ಟದಲ್ಲಿಯೂ ಸಂಘಟನೆಯು ಕ್ರಿಯಾಶೀಲವಾಗಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿ ಕ್ರಿಯಾಶೀಲ ಮುಖಂಡರನ್ನು ಹೊಂದಿದ್ದು ಜಿಲ್ಲಾ ವ್ಯಾಪ್ತಿಯಲ್ಲಿ ಬಲಿಷ್ಠವಾಗಿದೆ. ಇದಕ್ಕೆ ಉದಾಹರಣೆ ಮಾರ್ಚ್ 10 ರಂದು ಉಡುಪಿ ಜಿಲ್ಲೆಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವುದೇ ಸಾಕ್ಷಿ.
ಕಾಂಗ್ರೆಸ್ ಪಕ್ಷವು ಜನ ಬೆಂಬಲದೊಂದಿಗೆ ನಿರ್ದಿಷ್ಟವಾದ ಮತದಾರರನ್ನು ಹೊಂದಿರುವುದರಿಂದ ಈ ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿ ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಅಲ್ಲದೆ ಪ್ರಸ್ತುತ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಚಿಸುತ್ತಿರುವ ಶೋಭಾ ಕರಂದ್ಲಾಜೆಗೆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿರುವುದರಿಂದ ಈ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಪಕ್ಷದ ಮುಖಂಡರು ತಮ್ಮ ನಿರ್ಧಾರವನ್ನು ಬದಲಿಸಿ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನೇ ನೀಡಬೇಕಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸರಸು ಡಿ. ಬಂಗೇರಾ, ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾದ ಯತೀಶ್ ಕರ್ಕೇರಾ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ ಪಾಂಗಳ, ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೇಖರ್ ಮಡಿವಾಳ ಕಾರ್ಕಳ, ಮಂಜುನಾಥ ಪೂಜಾರಿ ಹೆಬ್ರಿ, ಸತೀಶ್ ಅಮೀನ್ ಪಡುಕರೆ ಉಡುಪಿ, ಶಂಕರ್ ಕುಂದರ್ ಕೋಟ, ಮಲ್ಯಾಡಿ ಶಿವರಾಮ್ ಶೆಟ್ಟಿ ಕುಂದಾಪುರ, ನವೀನ್ಚಂದ್ರ ಸುವರ್ಣ ಕಾಪು, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಗೀತಾ ವಾಗ್ಳೆ, ಜನಾರ್ದನ ಭಂಡಾರ್ಕರ್, ರಮೇಶ್ ಕಾಂಚನ್, ವಿಘ್ನೇಶ್ ಕಿಣಿ, ಸತೀಶ್ ಪೂಜಾರಿ, ಚಂದ್ರಿಕಾ ಶೆಟ್ಟಿ ಉಪಸ್ಥಿತರಿದ್ದರು