Home Mangalorean News Kannada News ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ: 14 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆ- ಹೆಪ್ಸಿಬಾ ರಾಣಿ  

ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ: 14 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆ- ಹೆಪ್ಸಿಬಾ ರಾಣಿ  

Spread the love

ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ: 14 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆ- ಹೆಪ್ಸಿಬಾ ರಾಣಿ  

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ 14 ಅಭ್ಯರ್ಥಿ ಗಳಿಂದ ಒಟ್ಟು 26 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಜೆಪಿಯಿಂದ ಶೋಭಾ ಕರಂದ್ಲಾಜೆ, ಜೆಡಿಎಸ್‌ನಿಂದ ಪ್ರಮೋದ್‌ ಮಧ್ವರಾಜ್‌, ಪ್ರೌಟಿಸ್ಟ್‌ ಸರ್ವ ಸಮಾಜದಿಂದ ಎಂ.ಕೆ. ದಯಾನಂದ, ಉತ್ತಮ ಪ್ರಜಾಕೀಯ ಪಕ್ಷದಿಂದ ಸುರೇಶ್‌ ಕುಮದರ್‌, ಶಿವಸೇನೆಯಿಂದ ಪಿ. ಗೌತಮ್‌ ಪ್ರಭು, ಸಿಪಿಐ (ಎಂ.ಎಲ್‌) ರೆಡ್‌ ಸ್ಟಾರ್‌ನಿಂದ ವಿಜಯ ಕುಮಾರ್‌, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಕರ್ನಾಟಕ ಪಕ್ಷದಿಂದ ಶೇಖರ ಹಾವಂಜೆ ಹಾಗೂ ಪಿ. ಪರಮೇಶ್ವರ ಬಹುಜನ ಸಮಾಜ ಪಾರ್ಟಿಯಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ಉಳಿದಂತೆ ಎಂ.ಕೆ. ಗಣೇಶ್‌, ಗಣಪತಿ ಶೆಟ್ಟಿಗಾರ್‌, ಸುಧೀರ್‌ ಕಾಂಚನ್‌, ಕೆ.ಸಿ. ಪ್ರಕಾಶ್‌, ಅಮೃತ್‌ ಶೆಣೈ ಪಿ., ಅಬ್ದುಲ್‌ ರೆಹಮಾನ್‌ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದರು.

ಮಾರ್ಚ್‌ 27ರಂದು ಬೆಳಿಗ್ಗೆ 11 ಗಂಟೆಗೆ ಎಲ್ಲ ಉಮೇದುದಾರರ ಸಮಕ್ಷಮದಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ಸಿಂಧುವಾದ ನಾಮಪತ್ರಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನಾಮಪತ್ರ ಹಿಂಪಡೆಯಲು ಮಾರ್ಚ್‌ 29ರ ಮಧ್ಯಾಹ್ನ 3 ಗಂಟೆ ಕೊನೆಯ ದಿನವಾಗಿದೆ. ಅಂದು ಮಧ್ಯಾಹ್ನ 3 ಗಂಟೆಯ ಬಳಿಕ ಸ್ವತಂತ್ರ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ವಿತರಿಸಿ, ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1,111 ಮತಗಟ್ಟೆಗಳನ್ನು ತೆರೆಯಲಾಗಿದೆ. ಆ ಪೈಕಿ 856 ಸಾಮಾನ್ಯ ಮತಗಟ್ಟೆಗಳಿವೆ, 55 ನಕ್ಸಲ್‌ ಪ್ರದೇಶದ ಮತಗಟ್ಟೆಗಳು ಸಹಿತ 255 ಅತೀ ಸೂಕ್ಷ್ಮ ಮತಗಟ್ಟೆಗಳಿವೆ ಹಾಗೂ 126 ದುರ್ಬಲ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತದಾನಕ್ಕೆ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಕ್ಸಲ್‌ ಹಾಗೂ ಸೂಕ್ಷ್ಮ ಮತಗಟ್ಟೆಯ ಮತದಾರರಿಗೆ ನಿರ್ಭೀತಿಯಿಂದ ಮತದಾನ ಮಾಡಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ, ಅವರಲ್ಲಿ ಮತದಾನ ಮಾಡುವ ಬಗ್ಗೆ ವಿಶ್ವಾಸ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮತದಾರರಿಗೆ ಪ್ರಭಾವ ಬೀರಬಲ್ಲ ಹಾಗೂ ಭಯದ ವಾತಾವರಣ ಸೃಷ್ಟಿಸಬಹುದಾದ 1,660 ಮಂದಿಯ ಮೇಲೆ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಈಗಾಗಾಲೇ 1,112 ವ್ಯಕ್ತಿಗಳಿಂದ ಬಾಂಡ್‌ ಪಡೆದುಕೊಳ್ಳಲಾಗಿದೆ. ಜಿಲ್ಲೆಯ 1,738 ರೌಡಿ ಶೀಟರ್‌ಗಳ ಪೈಕಿ 1,401 ರೌಡಿಗಳ ಮೇಲೆ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 12 ಮಂದಿ ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡುವಂತೆ ಡಿಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರಲ್ಲಿ ಈಗಾಗಲೇ 8 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಇನ್ನು ಇಬ್ಬರ ಗಡಿಪಾರು ಪ್ರಸ್ತಾವನೆ ಪರೀಶಿಲನೆಯಲ್ಲಿದೆ ಎಂದು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.


Spread the love

Exit mobile version