Home Mangalorean News Kannada News ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ದೇಶಕ್ಕೆ ಮಾದರಿಯಾಗಿಸುವುದು ನನ್ನ ಗುರಿ – ಪ್ರಮೋದ್ ಮಧ್ವರಾಜ್

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ದೇಶಕ್ಕೆ ಮಾದರಿಯಾಗಿಸುವುದು ನನ್ನ ಗುರಿ – ಪ್ರಮೋದ್ ಮಧ್ವರಾಜ್

Spread the love

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ದೇಶಕ್ಕೆ ಮಾದರಿಯಾಗಿಸುವುದು ನನ್ನ ಗುರಿ – ಪ್ರಮೋದ್ ಮಧ್ವರಾಜ್

ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ತನ್ನ ಭದ್ರಕೋಟೆಯನ್ನು ಕಾಂಗ್ರೆಸ್ ಮೈತ್ರಿಯ ಕಾರಣಕ್ಕೆ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರೇ ಈಗ ಜೆಡಿಎಸ್ ಚಿಹ್ನೆಯಡಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧಿಸುತಿದ್ದು, ಪ್ರಮೋದ್ ಅವರು ಕ್ಷೇತ್ರದ ಅಭಿವೃದ್ಧಿ ಮತ್ತು ರಾಜಕಾರಣದ ತಮ್ಮ ಮನದಾಳವನ್ನು ಮ್ಯಾಂಗಲೋರಿಯನ್ ಜೊತೆಗೆ ಹಂಚಿಕೊಂಡಿದ್ದಾರೆ.

1. ಕಾಂಗ್ರೆಸ್ ವ್ಯಕ್ತಿಯಾಗಿ ಜೆಡಿಎಸ್ ಚಿಹ್ನೆಯಡಿ ವೋಟು ಕೇಳುವಾಗ ಸಂದಿಗ್ಧತೆ ಉಂಟಾಗುವುದಿಲ್ಲವೇ? ಮತದಾರರು ನಿಮ್ಮನ್ನು ಹೇಗೆ ಸ್ವೀಕರಿಸಿದ್ದಾರೆ?
ಇದು ನನಗೆ ಯಾವುದೇ ರೀತಿಯಲ್ಲಿ ಸಂದಿಗ್ಘತೆತೆ ಅನಿಸುತ್ತಿಲ್ಲ ಕಳೆದ ಹಲವಾರು ದಿನಗಳಿಂದ ಎರಡು ಜಿಲ್ಲೆಗಳಲ್ಲಿ ಸಂಚರಿಸಿದಾಗ ಜನರು ನನ್ನನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ. ಕ್ಷೇತ್ರದಲ್ಲಿ ಶೋಭಾ ವಿರೋಧಿ ಅಲೆ ಇದೆ ಅದು ನನಗೆ ವರದಾನವಾಗಲಿದೆ.

2. ಕ್ಷೇತ್ರದ ಜನರ ಮುಂದೆ ಯಾವ ವಿಚಾರವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೀರಿ?
ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಹಿಂದಿನ ಸಂಸದರು ಅವುಗಳ ಬಗ್ಗೆ ಕನಿಷ್ಟ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಕೂಡ ಮಾಡಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಸ್ಕೂರಿ ರಂಗನ್ ವರದಿ ಜಾರಿಯಾಗುವ ಎಲ್ಲಾ ಲಕ್ಷಣಗಳಿವೆ. ಗೋರಕ್ ಸಿಂಗ್ ವರದಿ ಜಾರಿಗೆ ಬರದೆ ಅಡಿಕೆ ಬೆಳೆಗಾರರು ಕಂಗಲಾಗಿದ್ದಾರೆ. ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಸುಪ್ರೀಂ ಕೋರ್ಟ್ ಆದೇಶ ತಡೆಯುವಲ್ಲಿ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ಕೇಂದ್ರ ಸರಕಾರ ನಿಷೇಧಿಸಿದ್ದು ಸಿಆರ್ ಝಡ್ ಕಾಯಿದೆಯಲ್ಲಿ ತಿದ್ದುಪಡಿ ಮಾಡಿಸುವಲ್ಲಿ ಸಂಸದರು ಸಂಪೂರ್ಣ ಸೋತಿದ್ದಾರೆ. ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೇ ಅಪರೂಪ. ಒಬ್ಬ ಉತ್ತಮ ಸಂಸದರು ಇದ್ದಿದ್ದರೆ ಇದರಲ್ಲಿ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡಬಹುದಿತ್ತು. ಇನ್ನಾದರೂ ಜನತೆ ಜನರ ಜೊತೆಗೆ ಬೆರಯುವ ಕೆಲಸ ಮಾಡುವ ಆಸಕ್ತಿ ಇರುವ ಜನರ ಪರವಾಗಿ ದನಿ ಎತ್ತುವ ಸಂಸದರನ್ನು ಆಯ್ಕೆ ಮಾಡುವುದು ಜನರ ಹಿತದೃಷ್ಠಿಯಿಂದ ಅನಿವಾರ್ಯ. ಅಡಕೆ, ಕಾಳು ಮೆಣಸು, ಕಾಫಿ ದರ ಪಾತಳಕ್ಕೆ ಕುಸಿದಿದ್ದರೂ ಲೋಕಸಭೆಯಲ್ಲಿ ಮಾತನಾಡುವ ಕೆಲಸ ಶೋಭಾ ಕರಂದ್ಲಾಜೆ ಮಾಡಲಿಲ್ಲ. ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಸಂಸದೀಯ ಸಮಿತಿ ಸಭೆಯಲ್ಲಿ ಭಾಗವಹಿಸದೇ ಇರುವುದು ಅವರು ಕ್ಷೇತ್ರವನ್ನು ಯಾವ ರೀತಿಯಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವುದು ತೋರಿಸುತ್ತದೆ. ಈ ಎಲ್ಲಾ ವಿಚಾರಗಳನ್ನು ಮತದಾರರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.

3. ನಿಮಗೆ ಯಾಕೆ ಮತ ಹಾಕಬೇಕು?
ನನ್ನನ್ನು ಕಳೆದುಕೊಂಡು ಉಡುಪಿ ಕ್ಷೇತ್ರದಲ್ಲಿ ಯಾವ ದುಷ್ಪರಿಣಾಮಗಳು ಆಗಿವೆ ಎಂಬುದು ಜನರಿಗೆ ಮನವರಿಕೆಯಾಗಿದೆ. ಶಾಸಕನಾಗಿದ್ದಾಗ ದಿನಕ್ಕೆ 24 ಗಂಟೆ ವಿದ್ಯುತ್ ಕೊಡಲಾಗುತ್ತಿತ್ತು. ಕುಡಿಯುವ ನೀರಿನ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಸಿಕ್ಕಿತ್ತು. ಅಭಿವೃದ್ಧಿ ಕೆಲಸಗಳು ವೇಗವಾಗಿದ್ದವು. ಈಗಿನ ಪರಿಸ್ಥಿತಿಯ ಬಗ್ಗೆ ಜನರಿಗೆ ಅರಿವಾಗಿದೆ.

4. ಕ್ಷೇತ್ರದ 7 ಕಡೆಗಳಲ್ಲಿ ಬಿಜೆಪಿ ಶಾಸಕರಿದ್ದು ಚುನಾವಣೆಯ ತಂತ್ರಗಾರಿಕೆ ಯಾವ ರೀತಿಯಲ್ಲಿ ಮಾಡಿದ್ದೀರಿ?
ಈಗಾಗಲೇ 7 ಬಿಜೆಪಿ ಶಾಸಕರ ವಿರುದ್ದ ಜನತೆ ಸಿಟ್ಟಿಗೆದ್ದಿದ್ದಾರೆ. ಅಲ್ಲದೆ ಅವರದೇ ಪಕ್ಷದ ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನವನ್ನು ಶೋಭಾ ವಿರುದ್ದ ಮಾಡಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಶಾಸಕರಿದ್ದು, ಕಳೆದ 11 ತಿಂಗಳಲ್ಲಿ 300 ಕೋಟಿ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ. ಕಾಂಗ್ರೆಸ್ ಶಾಸಕರು ಯಾವತ್ತೂ ಕೆಲಸ ಮಾಡುವವರು ಆದರೆ ಬಿಜೆಪಿ ಶಾಸಕರೂ ಕೇವಲ ಭಾಷಣ ಬಿಗಿಯುವುದು ಬಿಟ್ಟರೆ ಕೆಲಸ ಮಾಡುವುದಿಲ್ಲ. ಅದೇ ರೀತಿಯಲ್ಲಿ ಶೋಭಾ ಕೂಡ ಕೆಲಸ ಮಾಡಲ್ಲ ಎಂಬ ಸಂದೇಶ ಜನತೆಗೆ ತಲುಪಿದೆ.

5. ಬಿಜೆಪಿಗರು ಹಿಂದುತ್ವ, ರಾಷ್ಟ್ರೀಯತೆ ವಿಚಾರ ಇಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದಾರೆ ನಿಮ್ಮ ಆದ್ಯತೆ ಯಾವುದು?
ನನ್ನದು ಕ್ಷೇತ್ರದ ಅಭಿವೃದ್ಧಿ ಮಾತ್ರ ಪ್ರಮುಖ ಆದ್ಯತೆ. ನನಗೆ ದೇಶವೂ ಮುಖ್ಯ ಕ್ಷೇತ್ರದ ಮತದಾರರು ಅಭಿವೃದ್ಧಿ ಕಂಡರೆ ದೇಶ ತನ್ನಿಂದ ತಾನೆ ಅಭಿವೃದ್ದಿ ಆಗುತ್ತದೆ. ರಾಷ್ಟ್ರೀಯತೆಯನ್ನು ಬಿಜೆಪಿಗರು ಗುತ್ತಿಗೆ ಪಡೆದುಕೊಂಡಿಲ್ಲ. ಹಿಂದುತ್ವ ಎಂದು ಹೇಳಿಕೊಂಡು ತಿರುಗುವ ಬಿಜೆಪಿ ಹಿಂದೂ ಕಾರ್ಯಕರ್ತರನ್ನು ಯಾವ ರೀತಿಯಲ್ಲಿ ನಡೆಸಿಕೊಂಡಿದೆ ಎನ್ನವುದು ಜಗಜ್ಜಾಹೀರಾಗಿದೆ. ಗೋಮಾತೆಯ ರಕ್ಷಣೆ ಎಂದು ಹೇಳಿಕೊಳ್ಳುವ ಬಿಜೆಪಿಗರು ಕೇವಲ ಪ್ರಚಾರಕ್ಕಾಗಿ ಹಾಗೆ ಹೇಳುತ್ತಿದ್ದಾರೆ ಆದರೆ ನಾನು ಕೃತಿಯಲ್ಲಿ ತೋರಿಸಿದ್ದೇನೆ. ‘ಬಿಜೆಪಿಯವರು ಗೋವನ್ನು ಮಾತೆ ಎಂದು ಬೊಬ್ಬಿಡುತ್ತಾರೆ. ಆದರೆ ಯಾವುದೇ ಬಿಜೆಪಿ ಮುಖಂಡ ಗೋ ಶಾಲೆ ಪ್ರಾರಂಭಿಸಿಲ್ಲ. ಗೋಶಾಲೆ ಪ್ರಾರಂಭಿಸಿರುವ ಬಿಜೆಪಿ ಮುಖಂಡ ಯಾರಾದರೂ ಇದ್ದರೆ ಸನ್ಮಾನ ಮಾಡಿ ಅವರ ಮನೆಗೆ ಹೋಗಿ ಬರುತ್ತೇನೆ, ನಾನು 25 ಗೋವುಗಳ ಗೋಶಾಲೆ ಆರಂಭಿಸಿದ್ದೇನೆ. ಎಲ್ಲಾ ತಳಿಯ ಗೋವುಗಳಿಗೂ ಆಶ್ರಯ ನೀಡಲಾಗಿದೆ. ಗೋವಿನಲ್ಲಿ 33 ಕೋಟಿ ದೇವತೆಗಳಿವೆ ಎಂದು ಹೇಳುವ ಬಿಜೆಪಿಯವರು ಗೋವಿಗೆ ಕೇಸರಿ ಬಣ್ಣ ಹಚ್ಚಿ ಅದಕ್ಕೆ ಕಮಲದ ಚಿತ್ರ ಬಿಡಿಸಿ ಹಿಂಸೆ ನೀಡಿ ಮತಯಾಚಿಸುತ್ತಿದ್ದಾರೆ’ಇವರ ದ್ವಂದ್ವ ನೀತಿ ಜನರಿಗೆ ಅರ್ಥವಾಗಿದೆ.

6. ಬಿಜೆಪಿ ಅಭ್ಯರ್ಥಿ ಮೋದಿ ಹೆಸರಲ್ಲಿ ತನ್ನನ್ನು ಗೆಲ್ಲಿಸಿ ಎನ್ನುತ್ತಿದ್ದಾರೆ. ಮೋದಿ ಅಲೆ ಕ್ಷೇತ್ರದಲ್ಲಿ ಇನ್ನೂ ಇದೆಯಾ?
ನರೇಂದ್ರ ಮೋದಿಯವರು ವಾರಾಣಾಸಿಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎನ್ನುವುದು ಜನರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಕ್ಷೇತ್ರದಲ್ಲಿ ಬಂದು ಮೋದಿ ಕೆಲಸ ಮಾಡುವುದಿಲ್ಲ ನಮ್ಮ ಕ್ಷೇತ್ರದ ಕೆಲಸ ಮೊದಲು ಆಗಬೇಕು ಅದಕ್ಕಾಗಿ ಸ್ಥಳೀಯವಾಗಿ ಜನರೊಂದಿಗೆ ಸದಾ ಇರುವ ಸ್ಥಳೀಯ ಸಂಸದರು ಅಗತ್ಯವಿದೆ ಕೇವಲ ಮೋದಿ ಮೋದಿ ಎಂದು ಕೂಗಿ ಕಣ್ಣು ಮುಚ್ಚಿ ಮೋದಿ ಹೆಸರಲ್ಲಿ ಶೋಭಾಗೆ ಮತ ಹಾಕುವ ಯುವಕರು ಇದನ್ನು ಗಮನಿಸಬೇಕು. ಸಂಸದರು ತಮ್ಮ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಮೋದಿ ನೋಡಿ ಮತಹಾಕಿ ಎನ್ನುತ್ತಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ನೀಡುವಂತೆ ಬಿಜೆಪಿ ಅಭ್ಯರ್ಥಿಗಳು ಮತ ಯಾಚಿಸುತ್ತಿದ್ದಾರೆ. ಅದು ಅಪ್ಪನ ಮುಖ ನೋಡಿ ಮಗನಿಗೆ ಹೆಣ್ಣು ನೀಡುವಂತೆ ಕೇಳಿದಂತಿದೆ. ಮೋದಿಗೆ ಮತ ಕೇಳುವವರು ವಾರಣಾಸಿಗೆ ಹೋಗಲಿ. ಅವರಿಗೆ ರೈಲ್ವೇ ಟಿಕೆಟ್ ಕೊಡಿಸುತ್ತೇನೆ. ಆದರೆ, ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಲು ಮೋದಿ ಬರುವುದಿಲ್ಲ. ಹಾಗಾಗಿ ಸ್ಥಳೀಯವಾಗಿ ಲಭ್ಯವಾಗುವ ಅಭ್ಯರ್ಥಿಗಳನ್ನೇ ಅವರು ಚುನಾವಣೆಯಲ್ಲಿ ಗೆಲ್ಲಿಸಬೇಕು.

7. ಬಿಜೆಪಿ ಅಭ್ಯರ್ಥಿ ಶೋಭಾ ನಿಮ್ಮನ್ನು ಸಾಂದರ್ಭಿಕ ಶಿಶು ಎಂದಿದ್ದಾರೆ ನಿಮ್ಮ ಅಭಿಪ್ರಾಯವೇನು?
‘ನಾನು ಮಲ್ಪೆ ಮಧ್ವರಾಜ್ ಹಾಗೂ ಮನೋರಮಾ ಮಧ್ವರಾಜ್ ಅವರ ಪುತ್ರನಾಗಿದ್ದು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದವನು. ನಾನು ಸಾಂದರ್ಭಿಕ ಶಿಶುವಲ್ಲ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಬೆಂಗಳೂರಿನ ಸ್ವಂತ ವಿಳಾಸವನ್ನು ನೀಡುತ್ತಾರೆ. ಈ ಲೋಕಸಭಾ ಕ್ಷೇತ್ರದ ಸಂಸದರಾಗಿ ಜನರ ಸಮಸ್ಯೆಗಳನ್ನು ಆಲಿಸಲು ಉಡುಪಿ ಅಥವಾ ಚಿಕ್ಕಮಗಳೂರಿನಲ್ಲಿ ಮನೆಯನ್ನು ಸಂಸದರು ಮಾಡಿಲ್ಲ’ ಎಂದು ದೂರಿದರು.
ಸಂಸದರು ತಮ್ಮ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳಲು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದರೆ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಜನರ ಋಣ ತೀರಿಸುತ್ತೇನೆ’

8. ನೀವು ಪ್ರಚಾರಕ್ಕೆ ಹೋದಲ್ಲೆಲ್ಲಾ ಬ್ಯಾಗೊಂದನ್ನು ಪ್ರದರ್ಶಿಸುತ್ತೀರಿ ಅದರಲ್ಲಿ ಸಮಸ್ಯೆಗಳಿಗೆ ಪರಿಹಾರವಿದೇಯೇ?
ನನ್ನ ಸಚಿವ ಸ್ಥಾನದ ಅವಧಿಯಲ್ಲಿ ಜನರಿಂದ ಬಂದ ಅಹವಾಲನ್ನು ನನಗೆ ನೀಡಿದ ಬ್ಯಾಗಿನ ಮೂಲಕ ಸರಕಾರಿ ಕಛೇರಿಗಳಿಗೆ ಅಲೆದು ಇಲಾಖಾವಾರು ಬೇಡಿಕೆಗಳ ಮನವಿಯೊಂದಿಗೆ ಕ್ಷೇತ್ರಕ್ಕೆ 2000 ಕೋಟಿ ಅನುದಾನವನ್ನು ತಂದು ಸಮಗ್ರ ಅಭಿವೃದ್ಧಿ ಪಡಿಸಿದ ಸಂತೃಪ್ತಿ ನನಗಿದೆ. ನನ್ನ ಅಧಿಕಾರಾವಧಿಯ ಕೊನೆಯಲ್ಲಿ ರಾಜ್ಯದ ಹೆಸರಾಂತ ಮಾಧ್ಯಮಗಳು ಮಾಡಿದ ಅಭಿವೃದ್ಧಿ ಸಮೀಕ್ಷೆಯಲ್ಲಿ ರಾಜ್ಯದ 224 ಶಾಸಕರ ಪೈಕಿ ನನ್ನ ಕ್ಷೇತ್ರಕ್ಕೆ ಪ್ರಥಮ ಪ್ರಶಸ್ತಿ ಲಭಿಸಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಗಳಿಗೆ ಕಾರ್ಯಕರ್ತರಿಂದ ಗೋಬ್ಯಾಕ್ ಚಳುವಳಿ ಆಗಿದ್ದರೆ ಅದು ಶೋಭಾರವರಿಗೆ ಮಾತ್ರ. ಈ ಹಿನ್ನಲೆಯಲ್ಲಿ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ ಎಂಬುವುದು ಜಗಜ್ಜಾಹೀರಾಗಿದೆ. ಬಡವರಿಗೆ ನ್ಯಾಯ ಒದಗಿಸಲು, ಸಮಸ್ಯೆಗಳನ್ನು ಪರಿಹರಿಸಲು ನಾನು ಬದ್ಧನಿದ್ದೇನೆ. ನನಗೆ ಬರುವ ಒಂದೊಂದು ದೂರವಾಣಿ ಕರೆ, ಒಂದೊಂದು ಅರ್ಜಿಯ ಹಿಂದೆ ಒಂದು ಜೀವ ಇದೆ ಎಂಬುದನ್ನು ಅರಿತಿದ್ದೇನೆ. ಎಲ್ಲಾ ಕೆಲಸ ಮಾಡಲು ಆಗುವುದಿಲ್ಲ ಾದರೆ ಯಾವುದೇ ಸಮಸ್ಯೆ ನನ್ನ ಗಮನಕ್ಕೆ ಬಂದಾಗ ಅದನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

9. ಮೀನುಗಾರರ ಕಣ್ಮರೆ ವಿಚಾರದಲ್ಲಿ ತಾವು ನೌಕಾ ಸೇನೆಯನ್ನು ಅವಹೇಳನ ಮಾಡಿದ್ದೀರಿ ಎಂದು ಬಿಜೆಪಿಗರು ಹೇಳುತ್ತಿದ್ದಾರೆ ನಿಮ್ಮ ಅಭಿಪ್ರಾಯವೇನು ?
ನಾನು ರಕ್ಷಣಾ ಸಚಿವರು ಮತ್ತು ಲೋಕಸಭಾ ಸದಸ್ಯೆ ಮೀನುಗಾರರ ಕಣ್ಮರೆಯಾದರೂ ಮೀನುಗಾರರನ್ನು ಹುಡುಕಿ ತರುವಲ್ಲಿ ವಿಫಲವಾಗಿದ್ದಾರೆ ಎಂದಿದ್ದೇನೆ ಕಾರಣ ಈ ವಿಚಾರದಲ್ಲಿ ಲೋಕಸಭಾ ಚುನಾವಣಾ ರಾಜಕೀಯ ನಡೆದಿದೆ. ‘ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ‘ಮೀನುಗಾರರು ನಾಪತ್ತೆಯಾಗಿ ಮೂರು ತಿಂಗಳು ಕಳೆದಿವೆ. ಅವರು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬುದೇ ತಿಳಿದಿಲ್ಲ. ಮೀನುಗಾರರಿಗೆ ನ್ಯಾಯ ಒದಗಿಸುವಲ್ಲಿ ಕೇಂದ್ರ ಸರ್ಕಾರ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ. ‘ನೌಕಾಪಡೆಯ ನೌಕೆಯು ಬೋಟ್ಗೆ ಡಿಕ್ಕಿ ಹೊಡೆದು ಅಪಘಾತ ಎಸಗಿರುವ ಬಗ್ಗೆ ಸಂಶಯವಿದೆ. ಈ ಬಗ್ಗೆ ನೌಕಾ ಪಡೆಯವರು ಮೀನುಗಾರರಲ್ಲಿ ಮಾಹಿತಿ ಕೂಡ ಪಡೆದಿದರುವುದು ತಿಳಿದು ಬಂದಿದೆ. ಆದರೂ ನೌಕಾಪಡೆ ಮೀನುಗಾ ರರನ್ನು ಹುಡುಕುವ ನಾಟಕ ಮಾಡಿದೆ. ಇದು ಲೋಕಸಭೆ ಚುನಾವಣೆಗಾಗಿ ಸತ್ಯ ಮರೆಮಾಚುವ ಪ್ರಯತ್ನವಾಗಿದೆ’ ಎಂದು ದೂರಿದರು. ನಿರ್ಮಲಾ ಸೀತಾರಾಮನ್ ನಾಪತ್ತೆಯಾದ ಮೀನುಗಾರ ಕುಟುಂಬದವರ ಮನೆಗೆ ಭೇಟಿ ನೀಡಿ, ಅವರ ನೋವಿಗೆ ಸ್ಪಂದಿಸಿಲ್ಲ. ಆದರೆ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸುವಾಗ ಬಂದು ಕೇವಲ ಪ್ರಮೋದ್ ಮಧ್ವರಾಜ್ ಅವರಿಗೆ ಅನುಭವದ ಕೊರತೆ ಇದೆ ಎಂದಿದ್ದು ಬಿಟ್ಟರೆ ಬೋಟ್ ಬಗ್ಗೆ ಯಾವುದೇ ಮಾಹಿತಿ ಅವರು ನೀಡಲಿಲ್ಲ. ‘ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಮೀನುಗಾರರು ಕಣ್ಮರೆಯಾಗಲು ನೌಕಾಪಡೆಯೇ ಕಾರಣ.

10. ಗೆದ್ದರೆ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಮುಂದಿರುವ ಯೋಜನೆಗಳೇನು?
ತಾನು ಗೆದ್ದಲ್ಲಿ ಸರ್ವ ಜನರನ್ನು ಸಮಾನವಾಗಿ ಸರ್ವಜನಾಂಗದ ಶಾಂತಿಯ ತೋಟವಾಗಿ ಕ್ಷೇತ್ರವನ್ನು ದೇಶದಲ್ಲಿ ಮಾದರಿಯಾಗಿಸುವುದು ನನ್ನ ಉದ್ದೇಶವಾಗಿದೆ. ಪ್ರವಾಸೋದ್ಯಮಕ್ಕೆ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದ್ದು ಈ ಮೂಲಕ ಯುವಜನರಿಗೆ ಸ್ವ ಉದ್ಯೋಗ ಕಲ್ಪಿಸುವ ಆದೆ ಹೊಂದಿದ್ದೇನೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ದೂರಸಂಪರ್ಕ, ಮೀನುಗಾರಿಕೆಯ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಒತ್ತು ಕೊಡಲಿದ್ದೇನೆ. ಮೀನುಗಾರರಿಗೆ ಕೃಷಿಕರಿಗೆ ಸಹಾಯ ಮಾಡುವುದರೊಂದಿಗೆ ಕಡಲ್ಕೊರೆತ, ನದಿದಂಡೆಗಳ ಕೊರೆತಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಕಷ್ಟು ಅನುದಾನ ಅಗತ್ಯವಿದೆ. ‘ನಾನು ಸಂಸದನಾಗಿ ಆಯ್ಕೆಯಾದರೆ ಚಿಕ್ಕಮಗಳೂರಿನಲ್ಲಿ ಮನೆ ಮಾಡುತ್ತೇನೆ. ಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಹೆಚ್ಚು ಅನುದಾನ ತರುತ್ತೇನೆ. ನಗರಸಭೆ ಸದಸ್ಯನ ರೀತಿಯಲ್ಲಿ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತೇನೆ.


Spread the love

Exit mobile version