Home Mangalorean News Kannada News ಉಡುಪಿ ಚಿತ್ತರಂಜನ್ ಸರ್ಕಲ್: ಪ್ರತಿಭಟನೆ, ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಉಡುಪಿ ಚಿತ್ತರಂಜನ್ ಸರ್ಕಲ್: ಪ್ರತಿಭಟನೆ, ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

Spread the love

ಉಡುಪಿ ಚಿತ್ತರಂಜನ್ ಸರ್ಕಲ್: ಪ್ರತಿಭಟನೆ, ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಉಡುಪಿ: ಉಡುಪಿ ಜಿಲ್ಲೆಯ ಟ್ರಾಫಿಕ್ ಸಮಸ್ಯೆಯ ಕುರಿತು ಜೂನ್ 20 ರಂದು ಸಭೆ ನಡೆದಿದ್ದು, ಸದ್ರಿ ಸಭೆಯಲ್ಲಿ ಉಡುಪಿ ತಾಲೂಕು ಚಿತ್ತರಂಜನ್ ಸರ್ಕಲ್ನಲ್ಲಿ ಸಾರ್ವಜನಿಕ ಪ್ರತಿಭಟನೆ/ ಸಭೆ/ ಸಮಾರಂಭಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

ಚಿತ್ತರಂಜನ್ ಸರ್ಕಲ್ ಉಡುಪಿ ನಗರದ ಹೃದಯ ಭಾಗದಲ್ಲಿದ್ದು, ಮೆಸ್ಕಾಂ ಕಚೇರಿ, ಉಡುಪಿ ಮುಖ್ಯ ಅಂಚೆ ಕಚೇರಿ, ಸರಕಾರಿ ಮಹಿಳಾ ಆಸ್ಪತ್ರೆ, ಗಾಂಧಿ ಆಸ್ಪತ್ರೆ, ಕೃಷ್ಣ ಮಠ ಹಾಗೂ ಮಣಿಪಾಲ ಕಡೆಗೆ ಇದೇ ಮಾರ್ಗದ ಮೂಲಕ ಹಾದು ಹೋಗ ಬೇಕಾಗಿರುವುದರಿಂದ ಹಾಗೂ ಚಿತ್ತರಂಜನ್ ಸರ್ಕಲ್ ವಠಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಣಿಜ್ಯ ಸಂಕೀರ್ಣಗಳಿದ್ದು, ಇಲ್ಲಿಗೆ ಬರುವ ಗ್ರಾಹಕರು ಮತ್ತು ವಾಹನಗಳಿಂದ ಚಿತ್ತರಂಜನ್ ಸರ್ಕಲ್ ಸದಾ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಪ್ರಸ್ತುತ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಅನುಮತಿ ಪಡೆದು ಸಭೆ, ಪ್ರತಿಭಟನೆ, ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಆ ಸಮಯದಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಓಡಾಡಲು ತೊಂದರೆಯಾಗುತ್ತಿರುತ್ತದೆ. ಇದರಿಂದ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಸಾರ್ವಜನಿಕರಿಗೆ ಹಾಗೂ ತುರ್ತು ಸೇವೆಗಳಿಗೆ ಅಡ್ಡಿಯಾಗುತ್ತಿರುತ್ತದೆ. ಅಲ್ಲದೇ ಚಿತ್ತರಂಜನ್ ಸರ್ಕಲ್ನಲ್ಲಿ ಸದಾ ಜನದಟ್ಟಣೆ ಇರುವುದರಿಂದ ಸಭೆ/ ಕಾರ್ಯಕ್ರಮ/ ಪ್ರತಿಭಟನೆ ಸಮಯ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಮಸ್ಯೆ ತಲೆದೂರಿ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

ಈಗಾಗಲೇ ಉಡುಪಿ ಮಣಿಪಾಲದಲ್ಲಿರುವ ಜಿಲ್ಲಾ ಕಚೇರಿ ಸಂಕೀರ್ಣ ಕಟ್ಟಡದ ಹೊರ ಆವರಣದಲ್ಲಿ ಸತ್ಯಾಗ್ರಹ ಕಟ್ಟೆಯನ್ನು ಉಪಯೋಗಿಸಲು ಸಾರ್ವಜನಿಕರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಅವಕಾಶವಿರುವುದರಿಂದ, ಉಡುಪಿ ತಾಲೂಕು ಚಿತ್ತರಂಜನ್ ಸರ್ಕಲ್ನಲ್ಲಿ ಸಾರ್ವಜನಿಕ ಹಿತದೃಷ್ಟಿ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು, ಸಂಘಸಂಸ್ಥೆಗಳು ಯಾವುದೇ ಪ್ರತಿಭಟನೆ, ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸುವುದನ್ನು ಶಾಶ್ವತವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.


Spread the love

Exit mobile version