ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ವರ್ಗಾವಣೆ; ಹೆಬ್ಸಿಬಾ ರಾಣಿ ನೂತನ ಡಿಸಿ
ಉಡುಪಿ : ಕರ್ನಾಟಕ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಹುಬ್ಬಳ್ಳೀ ಧಾರವಾಡ ವಾಹನ ಇಲಾಖೆ ನಿರ್ದೇಶಕಿಯಾಗಿದ್ದ ಹೆಬ್ಸಿಬಾ ರಾಣಿ ಕೊರ್ಲಪತಿ ಅವರನ್ನು ನೇಮಿಸಲಾಗಿದೆ.
ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಜಿಲ್ಲಾ ಪಂಚಾಯಿತಿ ಸಿಇಒ ಆಗಿ 2015 ನವಂಬರ್ 10 ರಂದು ಅಧಿಕಾರ ಸ್ವೀಕರಿಸಿದ್ದರು. 2017.ಫೆ.23 ರಂದು ಉಡುಪಿ ಜಿಲ್ಲಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು.
ಡಿಸಿ ಆದ ಮೇಲೆ ಜಿಲ್ಲೆಯಲ್ಲಿ ಸ್ವಚ್ಛತೆ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅಕ್ರಮ ಮರಳುಗಾರಿಕೆ ಬಗ್ಗೆ ಕಠಿಣ ನಿಲುವು ಹೊಂದಿದ್ದರು.
ವರ್ಗಾವಣೆ ಕುರಿತು ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ಪ್ರಿಯಾಂಕ ಮೇರಿ ಅವರು, ಉಡುಪಿಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಉತ್ತಮವಾಗಿತ್ತು. ಜಿಲ್ಲೆಯ ಎಲ್ಲರಿಂದಲೂ ನನಗೆ ಸಂಪೂರ್ಣ ಸಹಕಾರ ಸಿಕ್ಕಿದೆ. ಸರ್ಕಾರಿ ಸೇವೆಯಲ್ಲಿ ನಾವು ಒತ್ತಡಗಳ ಮಧ್ಯೆಯೇ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅದನ್ನು ಸವಾಲಾಗಿ ಸ್ವೀಕರಿಸಿ ನಾವು ಕೆಲಸ ಮಾಡಬೇಕು. ಆದರೆ ಇಲ್ಲಿ ನನಗೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ’ ಎಂದು ಹೇಳಿದರು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಹಲವಾರು ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ತನಗೆ ಒದಗಿ ಬಂತು ಆದರೆ ಇದೆಲ್ಲಾ ನಮ್ಮ ಸರ್ಕಾರಿ ಸೇವೆಯಲ್ಲಿ ಒಂದು ಭಾಗವಾಗಿದ್ದು ಎಲ್ಲರೂ ಸಹಕಾರ ಪ್ರೋತ್ಸಾಹ ನೀಡಿದ್ದರಿಂದ ಯಶಸ್ವಿಯಾಗಿ ಎಲ್ಲಾ ಸವಾಲುಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ಜಿಲ್ಲೆಗೆ ನೂತನ ಡಿಸಿಯಾಗಿ ಹುಬ್ಬಳ್ಳಿ-ಧಾರವಾಡ ಸ್ಪೆಶಲ್ ಪರ್ಪಸ್ ವೆಹಿಕಲ್( ಎಸ್‌ಪಿವಿ) ಆಡಳಿತ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಫ್ಸಿಬಾ ರಾಣಿ ಕೊರ್ಲಪತಿ ಜಿಲ್ಲೆಗೆ ನೇಮಕಗೊಂಡಿದ್ದಾರೆ. ಆಂಧ್ರ ಮೂಲದ ಇವರು 2011ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ.