ಉಡುಪಿ ಜಿಲ್ಲಾ ಆರ್.ಜಿ.ಪಿ.ಆರ್.ಎಸ್. ಸಂಘಟನೆಯಿಂದ ಬಡ ಮಹಿಳೆಗೆ ‘ಗಾಂಧಿ ಕುಟೀರ’ ಮನೆ ಹಸ್ತಾಂತರ
ಉಡುಪಿ : ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯು ಮಹಾತ್ಮ ಗಾಂಧೀಜಿ ಜನ್ಮ ಶತಾಬ್ದಿ ಪ್ರಯುಕ್ತ ಗಾಂಧಿ-150 ಕಾರ್ಯಕ್ರಮದಡಿ ಅಲೆವೂರು ಗ್ರಾಪಂ ವ್ಯಾಪ್ತಿಯ ಕೊರಂಗ್ರಪಾಡಿ ವಾರ್ಡ್ ಜನತಾ ಕಾಲನಿಯ ಬಡ, ಅಶಕ್ತ ಪರಿಶಿಷ್ಟ ಜಾತಿಯ ನಳಿನಿ ಕುಟುಂಬಕ್ಕೆ ನಿರ್ಮಿಸಿಕೊಟ್ಟ ನೂತನ ಮನೆ ‘ಗಾಂಧಿ ಕುಟೀರ’ ಇದರ ಹಸ್ತಾಂತರ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ನೆರವೇರಿಸಿದರು.
ದಾನಿಗಳ ನೆರವಿನಿಂದ 4.80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 550 ಚದರ ಅಡಿ ವಿಸ್ತ್ರೀರ್ಣದ ನೂತನ ಮನೆಯ ‘ಗಾಂಧಿ ಕುಟೀರ’ ಫಲಕವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅನಾವರಣಗೊಳಿಸಿದರು. ನೂತನ ಮನೆ ಯನ್ನು ಉದ್ಘಾಟಿಸಿದ ಸಿದ್ದರಾಮಯ್ಯ ಇಡೀ ಮನೆಯನ್ನು ವಿಕ್ಷೀಸಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಅವರು ಮನೆಯ ಮಾಲಕಿ ನಳಿನಿ ಅವರಿಗೆ ಗಾಂಧೀಜಿಯ ಭಾವಚಿತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣುನಾಥನ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು.ಆರ್.ಸಭಾಪತಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಜಿ.ಎ.ಬಾವಾ, ಎಂ.ಎ.ಗಫೂರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಡುಪಿ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಮತ್ತಿತರರು ಉಪಸ್ಥಿತರಿದ್ದರು.