ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಕೊಡವೂರು ಅಧಿಕಾರ ಸ್ವೀಕಾರ
ಉಡುಪಿ: ‘ಚುನಾವಣೆಯ ಸಂದರ್ಭದಲ್ಲಿ ನಾಯಕರೆಲ್ಲ ಒಗ್ಗಟ್ಟಾಗಿ ಕಾರ್ಯಕರ್ತರ ಕೈ ಬಲಪಡಿಸಬೇಕು. ಹಾಗೆಯೇ ಅವರ ಮಾರ್ಗದರ್ಶನದೊಂದಿಗೆ ನಾವೆಲ್ಲರೂ ಅಹೋರಾತ್ರಿ ದುಡಿದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ’ ಎಂದು ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಉಡುಪಿ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಜನಾರ್ದನ ತೋನ್ಸೆ ಅವರಿಂದ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ಹಾಗಾಗಿ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಬಹಳ ಮುಖ್ಯವಾಗಿರುತ್ತದೆ. ಉಡುಪಿ ಸಂಸದೆ ಸಂಪೂರ್ಣ ನಿಷ್ಕ್ರಿಯರಾಗಿದ್ದು, ಅದರ ಲಾಭವನ್ನು ಪಕ್ಷ ಬಳಸಿಕೊಳ್ಳಬೇಕು’ ಎಂದರು.
‘ರಾಜಕೀಯ ಮತ್ತು ಸಮಾಜ ಸೇವೆ ಎಂಬುವುದು ಭಿನ್ನವಾದುದು. ಸಮಾಜ ಸೇವೆಯಿಂದ ಮಾತ್ರ ರಾಜಕೀಯಕ್ಕೆ ಅರ್ಥ ಬರಲು ಸಾಧ್ಯ. ಕಾಂಗ್ರೆಸ್ ಎನ್ನುವುದು ಜನರ ಸಮೂಹ. ವಿರೋಧ ಪಕ್ಷದ ಚಿಂತನೆ ಬಂಡವಾಳ ಶಾಹಿಗಳ ಪರವಾಗಿದ್ದು, ಅವರು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬುಡಕ್ಕೆ ಕೈ ಹಾಕಿದ್ದಾರೆ. ಇದರ ವಿರುದ್ಧ ನಾವು ಸೆಟೆದು ನಿಲ್ಲದಿದ್ದರೆ, ಇಡೀ ದೇಶ ಅವನತಿಯ ಕಡೆಗೆ ಸಾಗಲಿದೆ’ ಎಂದು ಅಭಿಪ್ರಾಯಪಟ್ಟರು.
‘ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಅಭಿಯಾನದಲ್ಲಿ ಹಿಂದುಳಿದಿದ್ದು, ಅದಕ್ಕೆ ವೇಗ ನೀಡುವ ಕೆಲಸ ಆಗಬೇಕಿದೆ. ಅಲ್ಲದೆ, ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆ ಮಾಡುವ ಉದ್ದೇಶದಿಂದ ಜನ ಸಂಪರ್ಕ ಅಭಿಯಾನ, ಸಮಾವೇಶ ಆಯೋಜಿಸಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಚರ್ಚೆ ಮಾಡುತ್ತೇನೆ’ ಎಂದು ತಿಳಿಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ‘ನಮ್ಮ ಕೆಲವು ತಪ್ಪು ಹಾಗೂ ಪಕ್ಷ ಸಂಘಟನೆಯ ಕೊರತೆಯಿಂದಾಗಿ ಹಿಂದಿನ ಕೆಲ ಚುನಾವಣೆಯಲ್ಲಿ ಪಕ್ಷಕ್ಕೆ ಜಿಲ್ಲೆಯಲ್ಲಿ ಸ್ವಲ್ಪ ಹಿನ್ನಡೆಯಾಗಿತ್ತು. ಉಡುಪಿ ಯಾವತ್ತಿಗೂ ಕಾಂಗ್ರೆಸ್ನ ಭದ್ರಕೋಟೆ. ಲೋಕಸಭೆ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸಲು ನಾವು ಹೋರಾಟ ಮಾಡಬೇಕಾಗಿದೆ’ ಎಂದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ.10ಕ್ಕೆ ಜಿಲ್ಲಾ ಮಟ್ಟದ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ದೇಶದ ಸಂವಿಧಾನ, ಪ್ರಜಾಸತ್ತೆ ಉಳಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿದೆ. ಕಾಂಗ್ರೆಸ್ ಭಯೋತ್ಪಾದನೆಯ ಬಲಿಪಶು. ಖಾಲಿಸ್ತಾನ ಭಯೋತ್ಪಾದಕರನ್ನು ಮಟ್ಟಹಾಕಿದ ಪ್ರಧಾನಿ ಇಂದಿರಾಗಾಂಧಿ, ಎಲ್ಟಿಟಿ ನಿವಾರಣೆಗೆ ಯತ್ನಿಸಿದ ರಾಜೀವ್ಗಾಂಧಿ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ ಎಂದರು.
ಮಾಜಿ ಶಾಸಕ ಯು.ಆರ್. ಸಭಾಪತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ, ಗಫೂರ್, ಧರ್ಮಗುರು ವಿಲಿಯಂ ಮಾರ್ಟಿಸ್, ಮುಖಂಡರಾದ ದಿನೇಶ್ ಪುತ್ರನ್, ಮಲ್ಯಾಡಿ ಶಿವರಾಮ ಶೆಟ್ಟಿ, ನಿತ್ಯಾನಂದ ಶೆಟ್ಟಿ, ವರೋನಿಕಾ ಕರ್ನೆಲಿಯೊ, ಪ್ರವೀಣ್ ಕುಮಾರ್ ಶೆಟ್ಟಿ, ಶಂಕರ್ ಕುಂದರ್, ವಿಶ್ವಾಸ್ ಅಮೀನ್, ಕ್ರಿಸ್ಟನ್ ಡಿ’ಆಲ್ಮೇಡಾ, ಸುರೇಶ್ ನಾಯ್ಕ್, ಮನೋಹರ್ ಕರ್ಕೇರ, ಗೀತಾ ವಾಗ್ಳೆ, ಶೇಖರ್ ಮಡಿವಾಳ, ಮಂಜುನಾಥ್ ಪೂಜಾರಿ, ಮುರಳಿ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಎರ್ಮಾಳ್ ಶಶಿಧರ್ ಶೆಟ್ಟಿ, ರೋಶನಿ ಒಲಿ ವೇರಾ ಉಪಸ್ಥಿತರಿದ್ದರು.