ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಶುಕ್ರವಾರ ಹುತಾತ್ಮ ಹನುಮಂತಪ್ಪ ಕೊಪ್ಪದ್ ಗೌರವಾರ್ಥ ನಡೆದ ಸಾರ್ವಜನಿಕ ಶೃದ್ಧಾಂಜಲಿ ಸಬೆಯನ್ನು ನಗರದ ಚಿತ್ತರಂಜನ್ ಸರ್ಕಲ್ ನಲ್ಲಿ ಆಯೋಜಿಸಲಾಗಿತ್ತು.
ಶೃದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿಯ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ ನಾವು ಇಂದು ಸುರಕ್ಷಿತವಾಗಿದ್ದೇವೆ, ಶತ್ರುಗಳ ಭಯ ಇಲ್ಲದೇ ನೆಮ್ಮದಿಯಿಂದ ಇದ್ದೇವೆ ಎಂದಾದರೇ ಅದಕ್ಕೆ ಕಾರಣ ನಮ್ಮ ದೇಶವನ್ನು ಕಾಯುತ್ತಿರುವ ಸೈನಿಕರು ಇದನ್ನು ನಾನು ನಮ್ಮ ಸುರಕ್ಷತೆ ಮತ್ತು ನೆಮ್ಮದಿಯ ನಡುವೆ ಮರೆತು ಬಿಡಬಾರದು. ಅವರ ಬಗ್ಗೆ ಕೃತಜ್ಞತಾ ಭಾವನೆಯನ್ನು ಸದಾ ಇಟ್ಟುಕೊಳ್ಳಬೇಕು, ಇದು ನಾವು ಅವರಿಗೆ ನೀಡಬಹುದಾದ ಗೌರವ ಎಂದರು.
ಉಡುಪಿ ಶೋಕ ಮಾತಾ ಇಗರ್ಜಿಯ ಧರ್ಮಗುರು ಫಾ, ಫ್ರೆಡ್ರಿಕ್ ಮಸ್ಕರೇನಸ್ ಮಾತನಾಡಿ, ನಮ್ಮ ಬದುಕು ದೇವರ ಉಡುಗೊರೆ, ಅದನ್ನು ನಾವು ಮರಳಿ ದೇವರಿಗೆ ಉಡುಗೊರೆಯಾಗಿ ನೀಡಬೇಕು, ಆದರೇ ಉಡುಗೊರೆ ಕೊಡುವಾಗ ಹೇಗೆ ಕೊಡುತ್ತೇವೆ ಎನ್ನುವುದು ಮುಖ್ಯ. ನಮ್ಮ ಸೈನಿಕರು ತಮ್ಮ ಉಡುಗೊರೆಯನ್ನು ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಮೂಲಕ ಉದಾತ್ತವಾಗಿ ನೀಡುತ್ತಿದ್ದಾರೆ, ಇದು ಇತರರಿಗೂ ತ್ಯಾಗಮಯ ಜೀವನ ನಡೆಸಲು ಮಾದರಿ, ಸ್ಪೂರ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಖ್ಯಾತ ನೇತ್ರತಜ್ಞ ಡಾ.ಕೃಷ್ಣಪ್ರಸಾದ್, ಉದ್ಯಮಿ ವಿಶ್ವನಾಥ ಶೆಣೈ, ಮಾಜಿ ಸೈನಿಕರಾದ ಕರ್ನಲ್ ರಾಮಚಂದ್ರ ರಾವ್, ಗಣೇಶ್ ರಾವ್, ಗಣಪಯ್ಯ, ಮಿಂಗೆಲ್ ಮೆಂಡೊನ್ಸ, ಪರಮಶಿವಯ್ಯ ಅವರು ಹುತಾತ್ಮ ಕೊಪ್ಪದ ಅವರಿಗೆ ಗೌರವ ಸಲ್ಲಿಸಿದರು.
ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಕಾರ್ಯಕ್ರಮ ಸಂಯೋಜಿಸಿದ್ದರು. ರಾಘವೇಂದ್ರ ಕರ್ವಾಲು, ದೀಪಕ್ ಕಾರ್ಯಕ್ರಮ ನಿರೂಪಿಸಿದರು.