Home Mangalorean News Kannada News ಉಡುಪಿ ಜಿಲ್ಲಾ ಪೊಲೀಸರ ಕಾರ್ಯಾಚರಣೆ – ಮಾದಕ ವ್ಯಸನದ ವಿರುದ್ಧ ವಾರದಲ್ಲಿ 34 ಪ್ರಕರಣ ದಾಖಲು

ಉಡುಪಿ ಜಿಲ್ಲಾ ಪೊಲೀಸರ ಕಾರ್ಯಾಚರಣೆ – ಮಾದಕ ವ್ಯಸನದ ವಿರುದ್ಧ ವಾರದಲ್ಲಿ 34 ಪ್ರಕರಣ ದಾಖಲು

Spread the love

ಉಡುಪಿ ಜಿಲ್ಲಾ ಪೊಲೀಸರ ಕಾರ್ಯಾಚರಣೆ – ಮಾದಕ ವ್ಯಸನದ ವಿರುದ್ಧ ವಾರದಲ್ಲಿ 34 ಪ್ರಕರಣ ದಾಖಲು

ಉಡುಪಿ : ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿದ್ದು, ಆತಂಕಕಾರಿ ಬೆಳವಣಿಗೆಯಾಗಿ ರೂಪುಗೊಳ್ಳುತ್ತಿದೆ. ಇದನ್ನು ಮಟ್ಟ ಹಾಕುವ ಸಲುವಾಗಿ ಉಡುಪಿ ಜಿಲ್ಲಾ ಪೊಲೀಸರು ಮಣಿಪಾಲ, ಉಡುಪಿ ನಗರ ಸಹಿತ ಜಿಲ್ಲೆಯ ಇತರ ಪ್ರದೇಶಗಳಲ್ಲಿ ಇದರ ವಿರುದ್ಧ ಕಾರ್ಯಾಚರಣೆಯನ್ನು ಕಳೆದ ಒಂದು ವಾರದಿಂದ ಚುರುಕುಗೊಳಿಸಿದ್ದು, ಒಟ್ಟಾರೆಯಾಗಿ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ, 34 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, 34 ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತಾರೆ.

ಮಣಿಪಾಲ ಠಾಣಾ ಪೊಲೀಸರು 10 ಪ್ರಕರಣಗಳನ್ನು, ಸೆನ್ ಅಪರಾಧ ಠಾಣಾ ಪೊಲೀಸರು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ 18 ಪ್ರಕರಣಗಳನ್ನು ಹಾಗೂ ಪಡುಬಿದ್ರಿ ಠಾಣಾ ಪೊಲೀಸರು 2, ಶಿರ್ವಾ ಠಾಣಾ ಪೊಲೀಸರು 4 ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಈ ಪೈಕಿ ಮಣಿಪಾಲ ಪೊಲೀಸರು ದಾಖಲಿಸಿದ 10 ಪ್ರಕರಣಗಳಲ್ಲಿ 5 ಪ್ರಕರಣ ಹಾಗೂ ಸೆನ್ ಅಪರಾಧ ಠಾಣಾ ಪೊಲೀಸರು ದಾಖಲಿಸಿದ 18 ಪ್ರಕರಣಗಳ ಪೈಕಿ 17 ಪ್ರಕರಣ, ಒಟ್ಟಾರೆಯಾಗಿ 34 ಪ್ರಕರಣಗಳಲ್ಲಿ 22 ಪ್ರಕರಣಗಳಲ್ಲಿ ವಿದ್ಯಾರ್ಥಿಗಳೇ ಭಾಗಿಯಾಗಿರುತ್ತಾರೆ.

ಯುವ ಜನಾಂಗವು ಈ ರೀತಿ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಶೋಚನೀಯವಾಗಿದ್ದು, ಪಾಲಕರು / ಪೋಷಕರು ತಮ್ಮ ಮಕ್ಕಳ ಚಲನ ವಲನದ ಬಗ್ಗೆ ನಿಗಾ ಇಡಲು ಕೋರಲಾಗಿದೆ. ಸಾರ್ವಜನಿಕರು ಈ ಬಗ್ಗೆ ಸ್ವಯಂ ಪ್ರೇರಿತರಾಗಿ ಪೊಲೀಸರಿಗೆ ಗುಪ್ತವಾಗಿ ಮಾಹಿತಿ ನೀಡಿ, ಸ್ವಸ್ಥ ಸಮಾಜವನ್ನು ಕಟ್ಟಲು ಸಹಕರಿಸಲು ಜಿಲ್ಲಾ ಪೊಲೀಸ್ ಕರೆ ನೀಡಿದೆ. ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮದ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು, ಹಲವಾರು ಕಾರ್ಯಾಗಾರಗಳನ್ನು ಶಾಲಾ / ಕಾಲೇಜುಗಳಲ್ಲಿ ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿದೆ ಹಾಗೂ ಮುಂದಕ್ಕೂ ಸಹ ನಡೆಸಿಕೊಂಡು ಹೋಗಲಿದೆ. ಮಾದಕ ವ್ಯಸನದ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version