Home Mangalorean News Kannada News ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ 2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ಸಂಸದ ಸಸಿಕಾಂತ್ ಸೆಂಥಿಲ್...

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ 2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ಸಂಸದ ಸಸಿಕಾಂತ್ ಸೆಂಥಿಲ್ ಆಯ್ಕೆ

Spread the love

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ 2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ಸಂಸದ ಸಸಿಕಾಂತ್ ಸೆಂಥಿಲ್ ಆಯ್ಕೆ

ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ 2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ಸಂಸದ ಸಸಿಕಾಂತ್ ಸೆಂಥಿಲ್, ‘ಸೇವಾ ರತ್ನ’ ಪ್ರಶಸ್ತಿಗೆ ಕಾರ್ಕಳದ ಉದ್ಯಮಿ ಕೆ.ಎಸ್.ನಿಸಾರ್ ಅಹ್ಮದ್ ಮತ್ತು ಚೊಚ್ಚಲ ‘ಸೌಹಾರ್ದ ರತ್ನ’ ಪ್ರಶಸ್ತ್ತಿಗೆ ಉಡುಪಿಯ ಧರ್ಮಗುರು ಫಾ. ವಿಲಿಯಮ್ ಮಾರ್ಟಿಸ್ ಆಯ್ಕೆಯಾಗಿದ್ದಾರೆ.

ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರೀಸ್ ಹೂಡೆ ಈ ವಿಷಯ ಪ್ರಕಟಿಸಿದರು.

ಒಕ್ಕೂಟವು ವಿವಿಧ ಸಮುದಾಯಗಳ ಮಧ್ಯೆ ಮಧುರ ಸಂಬಂಧವನ್ನು ಬೆಸೆಯುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಹಾಗೂ ಸಕಾರಾತ್ಮಕ ಕೆಲಸಗಳನ್ನು ಪ್ರೋತ್ಸಾಹಿಸುವ ಕೆಲಸಗಳೊಂದಿಗೆ ಸಾಮುದಾಯಿಕ ಸೇವಾ ಚಟುವಟಿಕೆಗಳಲ್ಲಿ ನಿರತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ, ಮಾನವೀಯ ಮೌಲ್ಯಗಳಿಗಾಗಿ ಶ್ರಮಿಸಿದವರಿಗಾಗಿ ಪ್ರಶಸ್ತಿಗಳನ್ನು ನೀಡುತ್ತಿದೆ ಎಂದರು.

ನ.10ರಂದು ಸಂಜೆ 6ಗಂಟೆಗೆ ಉಡುಪಿಯ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಮ್ನಲ್ಲಿ ನಡೆಯಲಿರುವ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಸಾಧಕರಾದ ಸಾಹಿತಿ ಡಾ.ಗಣನಾಥ ಎಕ್ಕಾರ್, ಉಡುಪಿ ಜಿಪಂ ಮಾಜಿ ಅಧ್ಯಕ್ಷೆ ಸರಸು ಡಿ.ಬಂಗೇರ, ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಸರಳಾ ಕಾಂಚನ್, ದಲಿತ ನಾಯಕ ಅಣ್ಣಪ್ಪನಕ್ರೆ ಹಾಗೂ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ಹಸೈನಾರ್ ಕೋಡಿ ಕುಂದಾಪುರ ಅವರನ್ನು ಸನ್ಮಾನಿಸಲಾಗುವುದು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮುಖ್ಯ ಭಾಷಣ ಮಾಡಲಿದ್ದಾರೆ. ಯೆನೆಪೋಯ ವಿವಿ ಕುಲಪತಿ ಅಬ್ದುಲ್ಲಾ ಕುಂಞಿ ಸಮಾವೇಶವನ್ನು ಉದ್ಘಾಟಿಸಲಿರುವುರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸಿನ್ ಮಲ್ಪೆ ಅಭಿನಂದನಾ ಭಾಷಣ ಮಾಡಲಿದ್ದಾರೆ. ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಶರ್ಫುದ್ದೀನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮತ್ತು ಜಯಪ್ರಕಾಶ ಹೆಗ್ಡೆ ಮುಖ್ಯ ಅತಿಥಿಗಳಾಗಿರುವರು.

ಗೌರವ ಅತಿಥಿಗಳಾಗಿ ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಕರ್ನಾಟಕ ಅಲೈಡ್ ಹೆಲ್ತ್ ಕೌನ್ಸಿಲ್ ಅಧ್ಯಕ್ಷ ಯು.ಟಿ.ಇಫ್ತಿಕಾರ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಉದ್ಯಮಿ ಅಫ್ರೋಝ್ ಅಸ್ಸಾದಿ ದುಬೈ, ಸಹ ಬಾಳ್ವೆಯ ಅಧ್ಯಕ್ಷ ಕೆ.ಫಣಿರಾಜ್, ದಸಂಸ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ತರ್, ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷ ಗ್ರೇಸಿ ಕೊಯಲೋ, ಕುಂದಾಪುರದ ಕೋಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಫಿರ್ದೌಸ್ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್, ಕೋಶಾಧಿಕಾರಿ ಶೇಕ್ ಸೈಯದ್ ಫರೀದ್, ಉಪಾಧ್ಯಕ್ಷ ಸಲಾವುದ್ದೀನ್ ಅಬ್ದುಲ್ಲಾ, ಜಿಲ್ಲಾ ಸಮಿತಿ ಸದಸ್ಯ ಟಿ.ಎಂ.ಜಫರುಲ್ಲಾ, ಸಮಾವೇಶದ ಸಹ ಸಂಚಾಲಕ ಇಕ್ಬಾಲ್ ಮನ್ನಾ, ಅಬ್ದುಲ್ ಅಝೀಝ್ ಉದ್ಯಾವರ ಉಪಸ್ಥಿತರಿದ್ದರು.

ವಿವಿಧ ಪ್ರಶಸ್ತಿ ಪುರಸ್ಕೃತರುಗಳ ಪರಿಚಯ

ಸಸಿಕಾಂತ್ ಸೆಂಥಿಲ್: ತಮಿಳುನಾಡಿನ ದಲಿತ ಕುಟುಂಬದಲ್ಲಿ ಜನಿಸಿ, ಇಂಜಿನಿಯರಿಂಗ್ ಪದವೀಧರರಾಗಿ, ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ದೇಶಕ್ಕೆ 9ನೇ ರ್ಯಾಂಕ್ ಪಡೆದು, ಬಳಿಕ ಕರ್ನಾಟಕದ ಬಳ್ಳಾರಿ, ರಾಯಚೂರು, ಮತ್ತು ಮಂಗಳೂರಿನಲ್ಲಿ ಕ್ರಮವಾಗಿ ಸಹಾಯಕ ಕಮಿಷನರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆಗಳಿಸಿದವರು. ದ.ಕ. ಜಿಲ್ಲಾಧಿಕಾರಿಯಾಗಿದ್ದಾಗ, ದೇಶದಲ್ಲಿ ನಶಿಸುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಬೇಸತ್ತು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ರಕ್ಷಣೆಗಾಗಿ ತನ್ನ ಎರಡು ದಶಕಗಳ ಸೇವಾವಧಿ ಉಳಿದಿರುವಾಗಲೇ ಹುದ್ದೆಗೆ ರಾಜೀನಾಮೆ ಕೊಟ್ಟು ಕೋಮುವಾದದ ವಿರುದ್ಧ ಮತ್ತು ಮಾನವೀಯ ಮೌಲ್ಯಗಳ ಪರ ಜಾಗೃತಿ ಮೂಡಿಸಿದರು. ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ 5.72 ಲಕ್ಷ ಮತಗಳ ಭಾರಿ ಅಂತರದಿಂದ ಗೆದ್ದು ಸಂಸದರಾದರು.

ಶೇಖ್ ನಿಸಾರ್ ಅಹ್ಮದ್: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರಾಗಿದ್ದು, ‘ದುಬೈಯ ನ್ಯಾಶ್ ಇಂಜಿನಿಯರಿಂಗ್’ ಹಾಗೂ ಅಬುಧಾಬಿಯ ‘ಸೂಪರ್ ಇಂಜಿನಿಯರಿಂಗ್ ಇಂಡಸ್ಟ್ರಿ’ ಮತ್ತು ‘ಸೂಪರ್ ಇಂಜಿನಿಯರಿಂಗ್ ಸರ್ವಿಸ್’ ಸಂಸ್ಥೆಗಳ ಮಾಲಕರು. 1975ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ಅಬುಧಾಬಿಗೆ ಹೋಗಿ, ಹಾರ್ಡ್ವೇರ್ ಕಂಪೆನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ಕ್ರಮೇಣ ಕೇವಲ ನಾಲ್ಕು ಮಂದಿ ನೌಕರರನ್ನಿಟ್ಟುಕೊಂಡು ಆರಂಭಿಸಿದ ಸಣ್ಣ ಉದ್ಯಮವನ್ನು, ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮಗಳ ಮೂಲಕ ಇಂದು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದಲ್ಲದೆ ಆ ಸಂಸ್ಥೆಯನ್ನು ದುಬೈಯ ಪ್ರತಿಷ್ಠಿತ ಉದ್ಯಮ ಸಂಸ್ಥೆಯಾಗಿ ಬೆಳೆಸಿದವರು.

ವಿದೇಶದಲ್ಲಿದ್ದರೂ ಸದಾ ತನ್ನೂರ ಬಡವರು ಮತ್ತು ಅಸಹಾಯಕ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬರುತ್ತಿದ್ದಾರೆ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕಾರ್ಕಳದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು, ನಿರಾಶ್ರಿತರಿಗೆ ಆಶ್ರಯ ಒದಗಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ವೃದ್ಧಾಶ್ರಮವೊಂದನ್ನು ನಡೆಸುತ್ತಿದ್ದು, ಬಡವರಿಗೆ ಮನೆ ನಿರ್ಮಾಣ, ವೈದ್ಯಕೀಯ ವೆಚ್ಚ, ಬಡ ಹೆಣ್ಮಕ್ಕಳ ವಿವಾಹ, ಅನಾಥ ಮಕ್ಕಳಿಗೆ ನೆರವು, ಆರ್ಥಿಕವಾಗಿ ದುರ್ಬಲರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಇತ್ಯಾದಿಗಳ ಜೊತೆಗೆ ವಿವಿಧ ಸಮಾಜ ಕಲ್ಯಾಣ ಚಟುವಟಿಕೆಗಳು, ಸಾಮಾಜಿಕ ಸಂಸ್ಥೆ ಗಳು ಹಾಗೂ ಸಾಮಾಜಿಕ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಫಾ.ವಿಲಿಯಮ್ ಮಾರ್ಟಿಸ್: ಎಲ್ಐಸಿ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ಕ್ರಮೇಣ ಅಧ್ಯಾತ್ಮದ ಕಡೆಗೆ ಒಲವು ತೋರಿ ಧಾರ್ಮಿಕ ಶಿಕ್ಷಣ-ತರಬೇತಿ ಪಡೆದು ಕ್ರೈಸ್ತ ಧರ್ಮಗುರುಗಳಾಗಿ ದೀಕ್ಷೆ ಪಡೆದವರು.

ಧರ್ಮ ಗುರುಗಳಾಗಿರುವಾಗಲೇ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸಿ ಕೋಮುವಾದದ ವಿರುದ್ಧ ಮತ್ತು ಸಾಮಾಜಿಕ ಸೌಹಾರ್ದತೆಯ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡಿದವರು. ದಲಿತರು, ಅಲ್ಪಸಂಖ್ಯಾತರು, ಮತ್ತು ಹಿಂದುಳಿದ ವರ್ಗ ಗಳ ಸಂಘಟನೆಗಳಲ್ಲಿ ತೊಡಗಿಸಿಕೊಂಡು ದುರ್ಬಲ ಪರವಾಗಿ ಧ್ವನಿಯೆತ್ತಿದವರು. ತನ್ನ ಇಳಿ ವಯಸ್ಸಿನಲ್ಲೂ ವಿಶ್ರಾಂತಿ ಪಡೆಯದೆ ವಿವಿಧೆಡೆಗೆ ಸಂಚರಿಸಿ ಧಾರ್ಮಿಕ ಮತ್ತು ಸಾಮಾಜಿಕ ಸೌಹಾರ್ದತೆಗಾಗಿ ಶ್ರಮಿಸುತ್ತಿದ್ದಾರೆ.


Spread the love

Exit mobile version