ಉಡುಪಿ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಅದ್ದೂರಿ ಪದಗ್ರಹಣ
ಉಡುಪಿ: ಉಡುಪಿ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಹಾಗೂ ಪದಗ್ರಹಣ ಕಾರ್ಯಕ್ರಮ ನಗರದ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ದೀಪಬೆಳಗಿಸುವುದರೊಂದಿಗೆ ಉದ್ಘಾಟನೆ ಮಾಡಿದರು
ಬಳಿಕ ಮಾತನಾಡಿದ ಅವಧೂತ ವಿನಯ್ ಗುರೂಜಿ ಫೇಸ್ ಬುಕ್ ಮತ್ತು ವಾಟ್ಸಾಪ್ ನಿಂದ ಯುವಕರು ಆದಷ್ಟು ಬೇಗ ಬ್ರೇಕಪ್ ಆಗಿ ಆ ಸಮಯದಲ್ಲಿ ದೇಶದ ಬಗ್ಗೆ, ನಿಮ್ಮ ತಂದೆ-ತಾಯಿಗಳ ಬಗ್ಗೆ ಚಿಂತೆ ಮಾಡಿ ಎಂದು ಕರೆ ನೀಡಿದರು.
ವಿದ್ಯಾಭ್ಯಾಸ ಮಾಡಿ, ವಿದೇಶಕ್ಕೆ ಹಾರುವುದನ್ನು ಕಡಿಮೆ ಮಾಡಿ. ದೇಶದಲ್ಲಿಯೇ ಇದ್ದು ಕೆಫೆ ಕಾಫಿ ಡೇಯ ಸಿದ್ಧಾರ್ಥ್ ರೀತಿಯ ಸಾಧನೆ ಮಾಡಿ ದೇಶದ ನಾಗರಿಕರಾಗಿ ಬದಕುಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಮುಖದ ಸೌಂದರ್ಯ ಸೌಂದರ್ಯವೇ ಅಲ್ಲ. ವ್ಯಕ್ತಿತ್ವವೇ ನಿಜವಾದ ಸೌಂದರ್ಯ ಆಗಬೇಕು ಎಂದರು.
ವಿದ್ಯಾರ್ಥಿಗಳು ವ್ಯಾಲೆಂಟೈನ್ ಡೇ ಹೇಗೇ ಆಚರಣೆ ಮಾಡುತ್ತೀರೋ ಅದರಂತೆ ವಾಲೆಂಟಿಯರ್ ಆಗಿ ಗಿಡ ನೆಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಲ್ಲದೆ ಅಗತ್ಯವಿದ್ದಾಗ ರಕ್ತದಾನ ಮಾಡುವ ಒಳ್ಳೆಯ ಗುಣ ಮೈಗೂಡಿಸಬೇಕು. ಮನೆಯವರ ಕಷ್ಟಕ್ಕೆ ಆಧಾರವಾಗಿ ದೇಶಕ್ಕೆ ಬೆನ್ನೆಲುಬು ಆಗಬೇಕು ಎಂದು ಹೇಳಿದರು.
ಇದರ ಜೊತೆಯಲ್ಲಿ ದೇಶದ ನದಿಗಳ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು ದೇಹಕ್ಕೆ ನರಗಳೆಷ್ಟು ಮುಖ್ಯವೋ, ನದಿಗಳು ನಮಗೆ ಮುಖ್ಯ ಎಂದು ಹೇಳಿದರು.
ಬಳಿಕ 2019-20 ಸಾಲಿನ ಉಡುಪಿ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಘೋಷಣೆ ಹಾಗೂ ಪದಗ್ರಹಣ ಜರುಗಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ತುಳು ಚಿತ್ರ ನಟ ಅರ್ಜುನ್ ಕಾಪಿಕಾಡ್ ಹಾಗೂ ಇತರರು ಉಪಸ್ಥಿತರಿದ್ದರು.