ಉಡುಪಿ ಜಿಲ್ಲೆಯನ್ನು ಶೈಕ್ಷಣಿಕವಾಗಿ ಪ್ರಥಮ ಸ್ಥಾನಿಯಾಗಿಸುವ ಪಣ ತೊಡೋಣ : ಯಶ್ಪಾಲ್ ಸುವರ್ಣ
ಉಡುಪಿ ಜಿಲ್ಲೆಯ ಸರಕಾರಿ ಶಾಲೆಯ ಶಿಕ್ಷಕರು ಹಲವು ಸಮಸ್ಯೆ ಸವಾಲುಗಳ ನಡುವೆಯೂ ತಮ್ಮ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿಶೇಷ ಮುತುವರ್ಜಿವಹಿಸಿ ಕಾರ್ಯೋನ್ಮುಖವಾಗಿ ಸೇವೆ ಸಲ್ಲಿಸುತ್ತಿದ್ದು, ಈ ಬಾರಿ ಮತ್ತೊಮ್ಮೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಉಡುಪಿ ಜಿಲ್ಲೆಯನ್ನು ರಾಜ್ಯದಲ್ಲಿಯೇ ಪ್ರಥಮ ಸ್ಥಾನಿಯಾಗಿಸುವ ಪಣತೊಡುವಂತೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಕರೆ ನೀಡಿದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಡುಪಿ ಇದರ ಸಭಾಂಗಣದಲ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಪರೀಕ್ಷಾ ಪೂರ್ವ ತಯಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ ಮಾತನಾಡಿ ಜಿಲ್ಲೆಯ ಸರ್ಕಾರಿ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಅಡಿಪಾಯವಾಗಿರುವ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಸಂಕಲ್ಪ ಮಾಡಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಸಮನ್ವಯ ಸಾಧಿಸುವ ಮೂಲಕ ಸರಕಾರಿ ಶಾಲೆಯಲ್ಲಿ ಉತ್ತಮ ಫಲಿತಾಂಶಕ್ಕೆ ಒತ್ತು ನೀಡುವಂತೆ ಶಿಕ್ಷಕರಿಗೆ ಪ್ರೇರಣೆಯ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರುಗಳಾದ ಶ್ರೀ ಮಾರುತಿ, ಶ್ರೀ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಯಲ್ಲಮ್ಮ, ಶ್ರೀಮತಿ ಶಬನಾ ಅಂಜುಮ್, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ವರ್ಗೀಸ್, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ನಿರುಪಮಾ ಪ್ರಸಾದ್ ಶೆಟ್ಟಿ, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಇಂದಿರಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಸುಮಾ ಎಸ್. ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀ ದಯಾನಂದ ಡಿ. ನಿರೂಪಿಸಿ ವಂದಿಸಿದರು.