ಉಡುಪಿ ಜಿಲ್ಲೆಯಾದ್ಯಂತ ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿಫೆಸ್ತ್ ಆಚರಣೆ
ಉಡುಪಿ: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿಫೆಸ್ತ್ ಅಥವ ತೆನೆ ಹಬ್ಬವನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಭಕ್ತಿಭಾವದಿಂದ ಗುರುವಾರ ಆಚರಿಸಿದರು.
ಬೆಳ್ಳಂಬೆಳಗ್ಗೆ ಎದ್ದು ಚರ್ಚುಗಳಿಗೆ ತೆರಳಿದ ಪುಟ್ಟ ಮಕ್ಕಳು ಕನ್ಯಾಮರಿಯಮ್ಮನವರ ಮೂರ್ತಿಗೆ ಹೂಗಳನ್ನ ಸಮರ್ಪಿಸಿದ ಬಳಿಕ ಚರ್ಚಿನ ಧರ್ಮಗುರುಗಳು ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಆಶೀರ್ವದಿಸಿ ರಾಜ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪವಿತ್ರ ಬಲಿಪೂಜೆಯಲ್ಲಿ ಧರ್ಮಗುರುಗಳು ಕುಟುಂಬ ಜೀವನ, ಹೆಣ್ಣು ಮಗುವಿನ ರಕ್ಷಣೆ ಹಾಗೂ ಪ್ರಕೃತಿಯ ಮೇಲಿನ ಅಸಮತೋಲನ ಕುರಿತು ಪ್ರವಚನ ನೀಡಿದರು.
ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆಯನ್ನು ನೀಡಿ ಹರಿಸಿದರು. ಇದೇ ವೇಳೆ ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ಸಹ ವಿತರಿಸಲಾಯಿತು. ಸಾಸ್ತಾನ ಸಂತ ಅಂತೋನಿ ಚರ್ಚಿನಲ್ಲಿ ನಡೆದ ಆಚರಣೆಯಲ್ಲಿ ಚರ್ಚಿನ ಮಹಿಳಾ ಸಂಘಟನೆಯ ಸದಸ್ಯರು ಸೇರಿದ ಭಕ್ತಾದಿಗಳಿಗೆ ಹೊಸ ತೆನೆಯನ್ನು ಬೆರೆಸಿದ ಸಿಹಿ ಪಾಯಸವನ್ನು ಹಂಚಿ ಹಬ್ಬದ ಸಂಭ್ರಮವನ್ನು ಸಂಭ್ರಮಿಸಿದರು.
ಚರ್ಚಿನಿಂದ ಭಕ್ತಿಯಿಂದ ಕೊಂಡು ಬಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ ಹೊಸ ಭತ್ತದ ತೆನೆಗಳನ್ನು ಕುಟುಂಬದ ಸದಸ್ಯರೊಂದಿಗೆ ಪಾಯಸ ಅಥವಾ ಹಾಲಿನೊಂದಿಗೆ ಸೇವಿಸಿದರು. ಅಲ್ಲದೆ ಮನೆಗಳಲ್ಲಿ ಸಂಪೂರ್ಣ ಸಸ್ಯಹಾರದ ಭೋಜವನ್ನು ತಯಾರಿಸಿ ಕುಟುಂಬದ ಸದಸ್ಯರು ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಸೇವಿಸಿದರು. ಹಬ್ಬದ ಅಡಿಗೆಯಲ್ಲಿ ಬೆಸ ಸಂಖ್ಯೆ ತರಕಾರಿಯ ಪಲ್ಯಗಳನ್ನು ತಯಾರಿಸುವುದು ಹಬ್ಬದ ಇನ್ನೊಂದು ವಿಶೇಷ. ಉಡುಪಿ, ಶಿರ್ವ, ಪಡುಬಿದ್ರೆ ಪರಿಸರದಲ್ಲಿ ಸಂಪೂರ್ಣ ಸಸ್ಯಹಾರವನ್ನು ಮಾಡಿದರೆ, ಕಲ್ಯಾಣಪುರದಿಂದ ಬೈಂದೂರಿನವರೆಗೆ ಇರುವ ಕ್ರೈಸ್ತ ಭಾಂಧವರು ಸಸ್ಯಹಾರದೊಂದಿಗೆ ತಾಜಾ ಹೊಳೆ ಮೀನಿನ ಅಡುಗೆಯನ್ನು ಕೂಡ ಸವಿದರು.
ತರಕಾರಿಗಳಲ್ಲಿ ಪ್ರಮುಖವಾಗಿ ಕೆಸುವಿನ ದಂಟು, ಬೆಂಡೆ, ಹೀರೆ, ಪಡವಲ, ಅಲಸಂಡೆ, ಹರಿವೆ ದಂಟು, ಪತ್ರೊಡೆ ಇನ್ನಿತರ ತರಕಾರಿ ಖಾದ್ಯಗಳನ್ನು ಹೆಚ್ಚಾಗಿ ಉಪಯೋಗಿಸುವುದು ಹಬ್ಬದ ವಿಶೇಷ.
ಸಾಸ್ತಾನ ಸಂತ ಅಂತೋನಿಯವರ ಚರ್ಚಿನಲ್ಲಿ ನಡೆದ ಪವಿತ್ರ ಬಲಿಪೂಜೆಯಲ್ಲಿ ವಿಶೇಷ ಪ್ರವಚನ ನೀಡಿದ ಚರ್ಚಿನ ಧರ್ಮಗುರು ವಂ ವಾಲ್ಟರ್ ಮೆಂಡೊನ್ಸಾ ಅವರು ಪ್ರಕ್ರತಿಯ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ವಿವರಿಸಿ ಇಂದು ಮಾನವನು ಪ್ಲಾಸ್ಟಿಕ್ ಉಪಯೋಗವನ್ನು ಹೆಚ್ಚು ಮಾಡುತ್ತಿದ್ದು ಇದರಿಂದ ಪರಿಸರವನ್ನು ಹೆಚ್ಚು ಹೆಚ್ಚು ಮಲಿನಗೊಳಿಸುತ್ತಿದ್ದಾನೆ. ಇದರಿಂದ ಪ್ರಾಕೃತಿಕ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತಿದ್ದು ಮುಂದಿನ ಪೀಳಿಗೆ ಕೆಟ್ಟ ಸಂದೇಶವನ್ನು ರವಾನಿಸುತ್ತಿದ್ದೇವೆ. ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಮರೆತು ಪ್ಲಾಸ್ಟಿಕ್ ಸಂಸ್ಕøತಿಯ ದಾಸನಾಗುತ್ತಿದ್ದು ಇದರಿಂದ ಹೊರಬರಬೇಕಾದ ಅನಿವಾರ್ಯತೆ ಇದೆ ಎಂದರು.
ಮೊಂತಿ ಹಬ್ಬದ ಪ್ರಯುಕ್ತ ಜಿಲ್ಲೆಯ ವಿವಿಧ ಚರ್ಚುಗಳಲ್ಲಿ ಹಬ್ಬದ ವಿಶೇಷ ಬಲಿಪೂಜೆಗಳು ಜರುಗಿದವು. ಉಡುಪಿ ಜಿಲ್ಲೆಯ ನೂತನ ಸಂತ ಲಾರೆನ್ಸರ ಮೈನರ್ ಬಾಸಿಲಿಕಾದಲ್ಲಿ ರೆಕ್ಟರ್ ವಂ ಜಾರ್ಜ್ ಡಿ’ಸೋಜಾರ ನೇತ್ರತ್ವದಲ್ಲಿ ಹೊಸ ತೆನೆಯ ಆಶೀರ್ವಚನ ಜರುಗಿತು. ಸಹಾಯಕ ಧರ್ಮಗುರುಗಳಾದ ವಂ ವಿಜಯ್ ಡಿ’ಸೋಜಾ ಹಾಗೂ ಆರ್ಚಿ ಡಿ’ಸಿಲ್ವಾ ಉಪಸ್ಥಿತರಿದ್ದರು. ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‍ನಲ್ಲಿ ರೆಕ್ಟರ್ ವಂ ಸ್ಟ್ಯಾನಿ ಬಿ ಲೋಬೊ ಅವರು ಹೊಸ ತೆನೆಯನ್ನು ಆಶೀರ್ವಚಿಸಿ ಹಬ್ಬದ ಸಂದೇಶ ನೀಡಿದರು. ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಪ್ರಧಾನ ಧರ್ಮಗುರು ವಂ ಫ್ರೆಡ್ ಮಸ್ಕರೇನ್ಹಸ್ ಅವರು ಹಬ್ಬದ ಸಂದೇಶ ನೀಡಿದರು. ಕುಂದಾಪುರ ಹೊಲಿ ರೋಸರಿ ಇಗರ್ಜಿಯಲ್ಲಿ ಪ್ರಧಾನ ಧರ್ಮಗುರು ವಂ ಅನಿಲ್ ಡಿ’ಸೋಜಾ ಹೊಸ ತೆನೆಯ ಆಶೀರ್ವಚನ ನಡೆಸಿದರೆ, ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ವಂ ಸ್ಟ್ಯಾನಿ ತಾವ್ರೊ ಅವರು ಹೊಸ ಭತ್ತದ ಆಶೀರ್ವಚನ ನೆರವೇರಿಸಿದರು. ಪ್ರತಿ ವರ್ಷ ಹಳ್ಳಿಗಳಲ್ಲಿ ಇರುವ ಚರ್ಚುಗಳಿಗೆ ತೆರಳಿ ಹಬ್ಬದ ಆಚರಣೆಯನ್ನು ಮಾಡುತ್ತಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಪ್ರಸ್ತುತ ವರುಷ ಮ್ಯಾಂಗಲೋರೊ ಕ್ರಿಕೆಟ್ ಕ್ಲಬ್ ಕತಾರ್ ಇವರುಗಳ ಅಹ್ವಾನ ಮೇರೆಗೆ ಕತಾರ್‍ನಲ್ಲಿ ಹಬ್ಬದ ಆಚರಣೆಗೆ ತೆರಳಿದ್ದಾರೆ.
ಅಲ್ಲದೆ ಜಿಲ್ಲೆಯ ಇತರ ಪ್ರಮುಖ ಚರ್ಚುಗಳಾದ ಸಂತ ತೋಮಸ್ ಸೀರಿಯನ್ ಚರ್ಚು ಸಾಸ್ತಾನ, ಎಸ್ ಎಮ ಎಸ್ ಚರ್ಚು ಬ್ರಹ್ಮಾವರ, ಬಾರ್ಕೂರು, ಬಸ್ರೂರು, ಬ್ರಹ್ಮಾವರ ಇನ್ನಿತರ ಕಡೆಗಳಲ್ಲಿ ಸಹ ಹಬ್ಬದ ಆಚರಣೆ ನಡೆಯಿತು.