ಉಡುಪಿ : ಜಿಲ್ಲೆಯಲ್ಲಿ ಕೋಟ್ಪಾ ಕಾನೂನು ಕಟ್ಟುನಿಟ್ಟಾಗಿ ಅನುಷ್ಠಾನ: ಎಸ್ ಪಿ ಕೆ. ಅಣ್ಣಾಮಲೈ

Spread the love

ಉಡುಪಿ: ಉಡುಪಿ ಜಿಲ್ಲೆಯನ್ನು ಸಾರ್ವಜನಿಕವಾಗಿ ತಂಬಾಕು ಮುಕ್ತ ವಲಯವನ್ನಾಗಿಸಲು ಕೋಟ್ಪಾ ಕಾನೂನಿನಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು.

cotpa cotpa1

ಅವರು ಭಾನುವಾರ ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ರೋಟರಿ ಕ್ಲಬ್ ಉಡುಪಿ ಮಣಿಪಾಲ ಮತ್ತು ಮಣಿಪಾಲ ಟೌನ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ‘ವಿಶ್ವ ತಂಬಾಕು ರಹಿತ ದಿನ’ 2015 ಕಾರ್ಯಕ್ರಮವನ್ನು ಮಣಿಪಾಲದ ಅನಂತನಗರದ ರೋಟರಿ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

2013 ಕೋಟ್ಪಾ ಕಾನೂನಿನಡಿ ಸಾರ್ವಜನಿಕವಾಗಿ ಧೂಮಪಾನ, ತಂಬಾಕು ನಿಷೇಧ ಮುಕ್ತ ವಲಯವನ್ನಾಗಿಸಲು ದೇಶದ ಐದು ರಾಜ್ಯಗಳು ಮುಂದಾಗಿವೆ. ನಮ್ಮ ರಾಜ್ಯದಲ್ಲಿ ಆಯ್ಕೆಯಾದ ಜಿಲ್ಲೆಗಳಲ್ಲಿ ಉಡುಪಿಯೂ ಒಂದು. ಉಡುಪಿಯಲ್ಲಿ ಕಾನೂನು ಅನುಷ್ಠಾನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಬದ್ಧ ಎಂದರು.

2015ನೇ ಸಾಲಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ 5.34 ಲಕ್ಷ ರೂ.ಗಳನ್ನು ದಂಡ ಕಾನೂನಿನಡಿ ಸಂಗ್ರಹಿಸಿದ್ದು, ಇದು ಕಳೆದ ಸಾಲಿಗಿಂತ 27 ಪಟ್ಟು ಜಾಸ್ತಿ ಎಂದರು.

36 ಕೋಟಿ ಜನಸಂಖ್ಯೆಯ ನಮ್ಮ ದೇಶದಲ್ಲಿ 2020ರೊಳಗೆ %20ರಷ್ಟು, 2025ರೊಳಗೆ %25ರಷ್ಟು ತಂಬಾಕು ಹವ್ಯಾಸವನ್ನು ಕಡಿಮೆ ಮಾಡುವ ಗುರಿ ಇದ್ದು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇತರ ಎಲ್ಲ ಎಲಾಖೆಗಳ ಸಹಕಾರದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿ ಆರೋಗ್ಯಕರ ವಾತಾವರಣ ಕಲ್ಪಿಸುವ ಇಚ್ಚೆ ಸರ್ಕಾರದ್ದು ಎಂದರು.

ಸಮಾರಂಭದಲ್ಲಿ ಕರಪತ್ರ ಬಿಡುಗಡೆ ಮಾಡಿದ ಅಪರ ಜಿಲ್ಲಾಧಿಕಾರಿ ಮಾನವಸಂಪನ್ಮೂಲದ ಸದ್ಬಳಕೆ ಮತ್ತು ಆರೋಗ್ಯಕರ ಸದೃಢ ಸಮಾಜ ನಿರ್ಮಾಣದ ಆದ್ಯತೆ; ಈ ನಿಟ್ಟಿನಲ್ಲಿ ಜನಜಾಗೃತಿ, ಸದಭಿರುಚಿಯ ಹವ್ಯಾಸಗಳ ಕುರಿತು ಅಪರ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ನಾಗಜ್ಯೋತಿ ಕೆ ಎ ಅವರು, ರೋಟರಿ ಕ್ಲಬ್‍ನ ನಿಯೋಜಿತ ಅಧ್ಯಕ್ಷರಾದ ಅಬ್ದುಲ್ ರೆಹಮಾನ್, ರೋಟರಿ ಮಣಿಪಾಲ ಟೌನ್‍ನ ಅಧ್ಯಕ್ಷ ಶೇಷಪ್ಪ ರೈ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ ನಗರಸಭಾಧ್ಯಕ್ಷ ಪಿ. ಯುವರಾಜ್ ಅವರು ಸಾರ್ವಜನಿಕ ಜೀವನದಲ್ಲಿ ತಂಬಾಕು ನಿಷೇಧದ ಅಗತ್ಯವನ್ನು ಪ್ರತಿಪಾದಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ರೋಹಿಣಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ತಂಬಾಕು ನಿಯಂತ್ರಣ ಘಟಕದ ಸಂಯೋಜಕರಾದ ಪ್ರಭಾಕರ, ಡಾ ಪ್ರೇಮಾನಂದ ಅವರು ಪಾಲ್ಗೊಂಡರು. ಕೀಟನಿಯಂತ್ರಣ ಶಾಸ್ತ್ರಜ್ಞೆ ಜೋತ್ಸ್ನಾ ಕೈರನ್ನ ವಂದಿಸಿದರು. ಇಲಾಖೆಯ ಜಿ. ಕೆ. ಭಟ್ ನಿರೂಪಿಸಿದರು.


Spread the love