Home Mangalorean News Kannada News ಉಡುಪಿ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬ ಆಚರಣೆಗೆ ಸಕಲ ಸಿದ್ಧತೆ

ಉಡುಪಿ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬ ಆಚರಣೆಗೆ ಸಕಲ ಸಿದ್ಧತೆ

Spread the love

ಉಡುಪಿ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬ ಆಚರಣೆಗೆ ಸಕಲ ಸಿದ್ಧತೆ

ಉಡುಪಿ: ಗಣೇಶ ಚತುರ್ಥಿ ಹಬ್ಬಕ್ಕೆ ಎರಡೇ ದಿನ ಬಾಕಿ ಉಳಿದಿವೆ. ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆಗೆ ಎಲ್ಲ ಮನೆಗಳವರೂ ಭರದ ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಆಕರ್ಷಕ ಗಣೇಶನ ಮೂರ್ತಿಗಳೂ ಸಿದ್ಧಗೊಳ್ಳುತ್ತಿವೆ.
ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು (ಚೌತಿ) ಗಣೇಶ ಚತುರ್ಥಿಯೆಂದು ಆಚರಿಸಲಾಗುತ್ತದೆ. ಇದು ಬರೀ ಚತುರ್ಥಿಯಲ್ಲ, ಮಹಾ ಚತುರ್ಥಿಯೆಂದೇ ಪರಿಗಣಿಸಲ್ಪಟ್ಟಿದೆ.

ಗಣೇಶ ಚತುರ್ಥಿ ಬರುತ್ತಿದೆ ಎಂದರೆ ಒಂದು ಸಂಭ್ರಮವೆಂದೇ ಹೇಳಬಹುದು. ಅದರಲ್ಲೂ ಮೂರ್ತಿ ತಯಾರಕರು ಒಂದು ತಿಂಗಳ ಮುಂಚೆಯೇ ಮೂರ್ತಿ ತಯಾರಿಸಲು ಆರಂಭಿಸುತ್ತಾರೆ. ಈ ಹಬ್ಬವನ್ನು ಆಚರಿಸುವ ಮನೆಗಳಲ್ಲಿಯೂ ತಿಂಗಳ ಮುಂಚೆಯೇ ಹಬ್ಬದ ತಯಾರಿಗಾಗಿ ಎಲ್ಲ ರೀತಿಯ ಸಿದ್ಧತೆಯಲ್ಲಿ ತೊಡಗುತ್ತಾರೆ.

ಗಣೇಶ ಹಬ್ಬಕ್ಕೆ ಮುಖ್ಯವಾಗಿ ಮೂರ್ತಿ ತಯಾರಕರ ಪಾತ್ರ ಬಹು ದೊಡ್ಡದು. ಅಂದಿನಿಂದ ಇಂದಿನವರೆಗೂ ಅವರ ಕ್ರಿಯಾಶೀಲತೆಗೆ ಮೆಚ್ಚಲೇ ಬೇಕಾಗಿದೆ. ತಯಾರಿಸಲ್ಪಡುವ ಮೂರ್ತಿಗಳಿಗೆ ಬೇಕಾಗುವ ಮಣ್ಣು ತಂದುಕೊಳ್ಳುವುದು, ಅದನ್ನು ಹದಗೊಳಿಸುವುದು, ನಂತರ ಸುಮಾರು ದಿನಗಳ ಕಾಲ ಮಣ್ಣನ್ನು ನೀರಿನಲ್ಲಿ ನೆನೆ ಇಡುವುದು ಇತ್ಯಾದಿ ಕೆಲಸಗಳು ಆದ ನಂತರ ಮೂರ್ತಿ ತಯಾರಿಸಲು ಆರಂಭಿಸುವುದು. ಉತ್ತಮ, ಗಟ್ಟಿ ಮತ್ತು ನುಣುಪಾಗಿರುವ ಮೂರ್ತಿ ತಯಾರಿಸಲು ಉತ್ತಮ ಮಣ್ಣಿನ ಅವಶ್ಯಕತೆ ಮುಖ್ಯವಾಗಿರುತ್ತದೆ.

ಉಡುಪಿ ಕಡಿಯಾಳಿಯ ವಿನಾಯಕ ಕಾಮತ್ ಪ್ರತಿ ವರ್ಷದ ಗಣೇಶ ಚತುರ್ಥಿಗೆ ಸುಮಾರು 200 ಕ್ಕೂ ಅಧಿಕ ಮೂರ್ತಿ ತಯಾರಿಸುತ್ತಾರೆ. ಇವರೊಂದಿಗೆ ಇವರ ಪುತ್ರ ವೈಭವ್ ಕಾಮತ್ ಕೂಡ ಮೂರ್ತಿ ತಯಾರಿಕೆ ಕಾಮಗಾರಿಯಲ್ಲಿ ಕೈಜೋಡಿಸುತ್ತಾರೆ.

ಗಣೇಶ ಮೂರ್ತಿಗಳಿಗೆ ಬಳಿಯುವ ಬಣ್ಣ ನೈಸರ್ಗಿಕವಾಗಿರಬೇಕು ಮತ್ತು ಮೂರ್ತಿಗಳನ್ನು ನೀರಿನಲ್ಲಿ ಕರಗುವ ಮಣ್ಣಿನಿಂದಲೇ ತಯಾರಿಸಬೇಕು ಎಂಬ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದನ್ವಯ ಇತ್ತೀಚಿನ ವರ್ಷಗಳಲ್ಲಿ ಎಲ್ಲೆಡೆ ಮಣ್ಣಿನ ಮೂರ್ತಿ ತಯಾರಿಸಿ ನೈಸರ್ಗಿಕ ಬಣ್ಣ ಬಳಿಯಲಾಗುತ್ತದೆ.

ಈ ಬಾರಿಯೂ ಜಿಲ್ಲೆಯ 453 ಕಡೆಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ವಿವಿಧ ಸಂಘಸಂಸ್ಥೆಗಳು ಸಜ್ಜಾಗಿದ್ದು ಇದಕ್ಕೆ ಬೇಕಾದ ಎಲ್ಲಾ ಪೂರ್ವ ತಯಾರಿಗಳು ನಡೆಯುತ್ತಿವೆ.

ಗಣೇಶೋತ್ಸವ ಹಬ್ಬವನ್ನು ಬಹುತೇಕರು ವಿಜೃಂಭಣೆಯಿಂದಲೇ ಆಚರಿಸುತ್ತಾರೆ. ಕಾರಣ ಸಕಲ ವಿಘ್ನಗಳನ್ನು ನಿವಾರಿಸುವ ಗಣೇಶನಿಗೆ ಎಲ್ಲಿಲ್ಲದ ಮಹತ್ವ ನೀಡುತ್ತಿದ್ದಾರೆ. ಇದರಿಂದಾಗಿಯೇ ಹಬ್ಬದಲ್ಲಿ ಪ್ರತಿಯೊಂದು ಕುಟುಂಬವು ಸಕ್ರೀಯವಾಗಿ ಪಾಲ್ಗೊಳ್ಳುತ್ತಿರುವುದು ಹಿಂದಿನಿಂದಲೂ ನಡೆದುಕೊಂಡ ಬಂದ ವಾಡಿಕೆಯಾಗಿದೆ.

ಮನೆ ಮನೆಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕೆಲವರು ಮೂರು ದಿನ, ಐದು ದಿನ, ಒಂಭತ್ತು ದಿನ ಅಥವಾ ಹನ್ನೊಂದು ದಿನಗಳ ಕಾಲ ಮನೆಯಲ್ಲಿಯೇ ಪ್ರತಿಷ್ಠಾಪನೆ ಮಾಡುತ್ತಾರೆ. ನಂತರ ಅದನ್ನು ವಿಸರ್ಜನೆ ಮಾಡುತ್ತಾರೆ.

ಗಣೇಶ ಹಬ್ಬ ಮುಗಿಯುವರೆಗೆ ನಾನಾ ತಹರೇವಾರಿ ತಿಂಡಿಗಳನ್ನು ಮಾಡುತ್ತಾರೆ. ಇದಲ್ಲದೇ ವಿಶೇಷವಾದ ಪೂಜೆಯನ್ನು ಕೂಡ ಸಲ್ಲಿಸುತ್ತಾರೆ. ಗಣಪತಿಯ ಮೂರ್ತಿ ಮುಂದುಗಡೆ ಹಣ್ಣು ಹಂಪಲುಗಳನ್ನು ಇಟ್ಟಿರುತ್ತಾರೆ. ಇದರಿಂದಾಗಿ ಈ ಹಬ್ಬವು ಬಹಳಷ್ಟು ವೈಭವದಿಂದ ಕೂಡಿದೆ ಎನ್ನಬಹುದು.


Spread the love

Exit mobile version