ಉಡುಪಿ ಜಿಲ್ಲೆಯಲ್ಲಿ ಬೆ. 7-11 ರ ವರೆಗೆ ಕಟ್ಟಡ ನಿರ್ಮಾಣ ಸಂಬಂಧಿತ ಸಾಮಾಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶ – ರಘುಪತಿ ಭಟ್
ಉಡುಪಿ: ಉಡುಪಿ ಜಿಲ್ಲೆ ಕರೋನಾ ವೈರಸ್ ಹಸಿರು ವಲಯ(green zone) ಸಾಮಿಪ್ಯದಲ್ಲಿದ್ದು, ಈ ಬಗ್ಗೆ ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಇವರು ಮುಂದಿನ ಯೋಜನೆಗಳ ಬಗ್ಗೆ ಹಾಗೂ ಕೆಲವೊಂದು ನಿರ್ಬಂಧಿತ ಚಟುವಟಿಕೆಗಳ ಸಡಿಲಿಕೆಯ ಬಗ್ಗೆ ಜಿಲ್ಲಾಧಿಕಾರಿ ಯವರಾದ ಜಿ. ಜಗದೀಶ್ ರವರಲ್ಲಿ ಸೋಮವಾರ ಚರ್ಚಿಸಿದರು.
ಈ ಸಂದರ್ಭದಲ್ಲಿ ಪ್ರಮುಖವಾಗಿ ಕಟ್ಟಡ ಕಾರ್ಮಿಕರು ಹಾಗೂ ದಿನಗೂಲಿಗಳ ದೈನಂದಿನ ಸಮಸ್ಯೆಯ ಬಗ್ಗೆ ಹಾಗೂ ಅವರ ಆರ್ಥಿಕ ಸಮಸ್ಯೆಯ ಬಗ್ಗೆ ಚರ್ಚಿಸುತ್ತ ಕಟ್ಟಡ ನಿರ್ಮಾಣವನ್ನು ರಾಜ್ಯ ಮಾರ್ಗಸೂಚಿಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾಮಗಾರಿಗಳನ್ನು ನಿರ್ವಹಿಸುವಂತೆ ರಾಜ್ಯ ಸರಕಾರದ ಆದೇಶವಿದ್ದು ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆ 7.00 ರಿಂದ ಬೆಳಿಗ್ಗೆ 11 ಗಂಟೆಯವರೆಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳ ಅಂಗಡಿಯಾದ ಹಾರ್ಡ್ವೇರ್ ಹಾಗೂ ಇತರ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪೂರಕ ಸಾಮಾಗ್ರಿಗಳ ಅಂಗಡಿಯನ್ನು ತೆರೆಯುವ ಬಗ್ಗೆ ತೀರ್ಮಾನಿಸಲಾಯಿತು.
ಕಟ್ಟಡ ನಿರ್ಮಾಣದ ಕೂಲಿ ಕಾರ್ಮಿಕರು ತಮ್ಮ ದೈನಂದಿನ ಕೆಲಸಕ್ಕೆ ತೆರಳುವಾಗ ಬಿಲ್ಡರ್ಸ್ ವತಿಯಿಂದ ನೀಡಿದ ಅಧಿಕೃತ ಗುರುತಿನ ಚೀಟಿ (ಆಧಾರ್ ಕಾರ್ಡ್ ಅಥವಾ ಇನ್ನಿತರ ಗುರುತಿನ ದಾಖಲೆಗಳು) ತಮ್ಮಲ್ಲಿ ಇರಿಸಿಕೊಳ್ಳತಕ್ಕದ್ದು ಎಂಬುದರ ಬಗ್ಗೆ ಬಿಲ್ಡರ್ಸ್ ಅಸೋಶಿಯೇಶನ್ ಅಧ್ಯಕ್ಷರಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರಾದ ಎನ್. ವಿಷ್ಣುವರ್ಧನ್ ಬಿಲ್ಡರ್ ಅಸೋಸಿಯೇಷನ್ ಅಧ್ಯಕ್ಷರಾದ ಜೆರ್ರಿ ವಿನ್ಸೆಂಟ್ ಡಯಾಸ್, ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷರಾದ ಗೋಪಾಲ್ ಭಟ್ ಹಾಗೂ ಇಂಜಿನಿಯರ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಅಮಿತ್ ಅರವಿಂದ್ ಮತ್ತು ಬಿಲ್ಡರ್ಸ್ ಅಸೋಶಿಯೇಶನ್ ಕೋಶಾಧಿಕಾರಿ ಸುಧೀರ್ ಶೆಟ್ಟಿ ಇವರು ಉಪಸ್ಥಿತರಿದ್ದರು.