ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ, ತುಂಬಿದ ನದಿಗಳು
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆ ಬಾರಿ ಅಲ್ಲೊಲ ಕಲ್ಲೊಲವನ್ನೆ ಸೃಷ್ಠಿಸಿದ್ದು, ಭಾರೀ ಗಾಳಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಯಿಂದ ಹೊರಹೋಗುವುದು ಸಹ ಅಸಾಧ್ಯವಾಗಿತ್ತು. ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಳೆ ನೀರು ಹರಿದ ಪರಿಣಾಮ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೊಡವೂರು, ಬೈಲಕೆರೆ, ಕಲ್ಸಂಕ, ರಾಜಾಂಗಣ ಪಾರ್ಕಿಂಗ್ ಇತರೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಗಿದೆ. ಕೃತಕ ನೆರೆಯಿಂದಾಗಿ ಪಕ್ಕದ ಮನೆಗಳು ಹಾಗೂ ಅಂಗಡಿಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಉಡುಪಿ ಶಾಸಕ ರಘುಪತಿ ಭಟ್ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಅಲ್ಲದೆ ಅಪಾಯದಲ್ಲಿರುವ ನಿವಾಸಿಗಳನ್ನು ದೋಣಿಗಳ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಕರೆತರಲಾಯಿತು.
ಪಶ್ಚಿಮ ಘಟ್ಟ ಪ್ರದೇಶದಲ್ಲೂ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ನದಿಗಳಾದ ಸೀತಾ, ಸುವರ್ಣ ಹಾಗೂ ಇತರ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ನದಿ, ತೊರೆಗಳು ತುಂಬಿ ಹರಿಯುತ್ತಿದ್ದು ಹಲವೆಡೆ ತೋಟ, ಕೃಷಿ ಪ್ರದೇಶಕ್ಕೆ ನೀರು ನುಗ್ಗಿದೆ. ಭತ್ತ ಮತ್ತು ಕೃಷಿ ಚಟುವಟಿಕೆಗೆ ಅಡ್ಡಿಯಾಗಿದ್ದು, ಹಲವೆಡೆ ಸಂಚಾರಕ್ಕೆ ತೊಡಕುಂಟಾಗಿದೆ.
ಮಳೆಯಿಂದ ತೊಂದರೆಗೀಡಾದ ಜನರ ರಕ್ಷಣೆಗೆ ಜಿಲ್ಲಾ ಪೋಲಿಸ್ ಇಲಾಖೆ ಕೂಡ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದ್ದು ಕಾರ್ಕಳ, ಅಜೆಕಾರು, ಕಟಪಾಡಿ, ಕಾಪು ಪಡುಬಿದ್ರೆ, ಕುಂದಾಪುರ ಇನ್ನಿತರ ಪ್ರದೇಶಗಳಲ್ಲಿ ನೆರೆಯಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರಿಗೆ ಸ್ವತಃ ಹಿರಿಯ ಪೋಲಿಸ್ ಅಧಿಕಾರಿಗಳು ಮತ್ತು ಇತರ ಸಿಬಂದಿಗಳು ಸ್ಥಳದಲ್ಲಿದ್ದು ಸೂಕ್ತ ನೆರವನ್ನು ನೀಡುತ್ತಿದ್ದಾರೆ.