ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ- ಎಲ್ಲ ನದಿ ಪಾತ್ರಗಳಲ್ಲೂ ನೆರೆ ಹಾವಳಿ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಆಶ್ಲೇಷ ಮಳೆಯ ಅಬ್ಬರ ಹೆಚ್ಚಾಗಿದ್ದು ಶನಿವಾರವೂ ಕೂಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ.
ಭಾರಿ ಮಳೆಯಿಂದಾಗಿ ಜಿಲ್ಲೆಯ ಹೆಚ್ಚಿನ ನದಿಗಳು ತುಂಬಿದ್ದು. ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಸ್ವರ್ಣ, ಸೀತಾ, ಸೌಪರ್ಣಿಕ ನದಿಯಿಂದಾಗಿ ಜಿಲ್ಲೆಯಲ್ಲಿ ನೆರೆಯಾಗಿದ್ದು ಹಲವು ಮನೆಗಳು ಜಲವೃತಗೊಂಡಿವೆ. ಬೈಕಾಡಿ, ಉಪ್ಪೂರು, ಹಕ್ಲಾಡಿ ,ಹೈಕಾಡಿ ನಾವುಂದ ಬಡಾಕೆರೆ ಮತ್ತಿತರ ನದಿ ಪಾತ್ರದ ಭಾಗಗಳಲ್ಲಿ ನೆರೆಯ ವಾತಾವರಣ ಇದೆ.
ಮಳೆಯೊಂದಿಗೆ ಭಾರಿ ಗಾಳಿಯೂ ಕೂಡ ಬೀಸುತ್ತಿದ್ದು ಜಿಲ್ಲೆಯ ನಾನಾ ಕಡೆಗಳಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು ಮರಗಳು ಉರುಳಿ ಬಿದ್ದು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ
ಹವಾಮಾನ ಇಲಾಖೆ ಉಡುಪಿ ಜಿಲ್ಲೆಯಲ್ಲಿ ಮೂರು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯ ನದಿಗಳು ತುಂಬಿ ಹರಿಯುತ್ತಿದೆ. ಇನ್ನೆರಡು ದಿನ ಮಳೆ ಮುಂದುವರಿದರೆ , ನದಿ ಸಾಲುಗಳಲ್ಲಿ ನೆರೆಯ ವಾತಾವರಣ ಸೃಷ್ಟಿಯಾಗಲಿದೆ.
ಉಡುಪಿ ನಗರದಲ್ಲಿ ಹರಿಯುವ ಸ್ವರ್ಣ, ಸೀತಾ ನದಿ ತುಂಬಿ ಹರಿಯುತ್ತಿದೆ. ಕುಂದಾಪುರ ಬೈಂದೂರು ಕಾರ್ಕಳ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತ ಆಗಿದೆ. ನದಿ ತೀರದಲ್ಲಿ ಮನೆಗಳನ್ನು ಕಟ್ಟಿ ಕೊಂಡವರಲ್ಲಿ ಕೊಂಚ ಆತಂಕ ಸೃಷ್ಟಿಯಾಗಿದೆ.
ನದಿಪಾತ್ರದವರು ಎಚ್ಚರಿಕೆಯಿಂದ ಇರಬೇಕು, ನೀರಿನ ಮಟ್ಟ ಹೆಚ್ಚಾದರೆ ಇತರ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧವಿರಬೇಕು ಎಂದು ಸ್ಥಳೀಯ ಆಡಳಿತಗಳು ಸಂದೇಶ ರವಾನಿಸಿದೆ.
ಅರಬ್ಬಿ ಸಮುದ್ರ ಪ್ರಕ್ಷುಬ್ಧ ವಾಗಿರುವುದರಿಂದ 50ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ. ನಾಡದೋಣಿ ಮೀನುಗಾರಿಕೆಯವರು ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಚಿತ್ರಗಳು: ಚೇತನ್ ಮಟಪಾಡಿ