ಉಡುಪಿ ಜಿಲ್ಲೆಯ ಮೊದಲ ಕೋವಿಡ್-19 ಸೋಂಕಿತ ಯುವಕ ಆಸ್ಪತ್ರೆಯಿಂದ ಬಿಡುಗಡೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೋವಿಡ್-19 ಸೋಂಕಿತ ಯುವಕ ಸಂಪೂರ್ಣ ಗುಣಮುಖವಾಗಿದ್ದು ಏಪ್ರಿಲ್ 11ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ ಚಂದ್ರ ಸೂಡ ಅವರು ಮಾರ್ಚ್ 18ರಂದು ದುಬೈನಿಂದ ಉಡುಪಿಗೆ ಆಗಮಿಸಿದ್ದ 34 ವರ್ಷದ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಮಾರ್ಚ್ 23 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಈತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ ಆತನಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಈತನಿಗೆ ಬಳಿಕ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ನಿರಂತರ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆಯ ಬಳಿಕ ಇದೀಗ ಈ ಯುವಕ ಗುಣಮುಖನಾಗಿದ್ದು ಈತನ ಗಂಟಲು ದ್ರವದ ಮಾದರಿಯನ್ನು ಮತ್ತೆ ಎರಡು ಬಾರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಸೋಂಕು ಇಲ್ಲದೆ ಇರುವುದು ಖಚಿತವಾದ ಹಿನ್ನಲೆಯಲ್ಲಿ ಶನಿವಾರ ರಾತ್ರಿ 9.30ಕ್ಕೆ ಯುವಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದವರು 14 ದಿನ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.