ಉಡುಪಿ ಜಿಲ್ಲೆಯ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಆರಂಭ
ಉಡುಪಿ: ಸುಮಾರು ಒಂದುವರೆ ವರ್ಷದ ದೀರ್ಘ ವಿರಾಮದ ಬಳಿಕ, ಹಲವಾರು ಪ್ರತಿಭಟನೆ, ಇನ್ನಿತರ ಸಮಸ್ಯೆಗಳನ್ನು ನಿವಾರಿಸಿಕೊಂಡು ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಸಿಆರ್ ಝಡ್ ವ್ಯಾಪ್ತಿಯಲ್ಲಿ ಶುಕ್ರವಾರದಿಂದ ಮರಳುಗಾರಿಕೆ ಪ್ರಾರಂಭಗೊಂಡಿದ್ದು, ಜಿಲ್ಲೆಯ ಜನತೆ ಸ್ವಲ್ಪ ಉಸಿರುಬಿಡುವಂತಾಗಿದೆ.
ಉಡುಪಿ ತಾಲೂಕಿನ ಪಡುತೋನ್ಸೆ ಭಾಗದಲ್ಲಿ ಶುಕ್ರವಾರದಿಂದ ಮರಳುಗಾರಿಕೆ ಆರಂಭಗೊಂಡಿದ್ದು, ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಮರಳುಗಾರಿಕೆ ನಡೆಸಲು ಪರವಾನಿಗೆ ಪಡೆದಿರುವವರು ಮರಳುಗಾರಿಕೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ಸಂಪೂರ್ಣ ಲಕ್ಷಣ ಕಾಣುತ್ತಿದೆ.
ಎರಡು ದಿನಗಳ ಹಿಂದೆ ಉಡುಪಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ಬೃಹತ್ ಮಟ್ಟದ ಪ್ರತಿಭಟನೆ ನಡೆದಿದ್ದು, ಈ ವೇಳೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅರ್ಜಿ ಸಲ್ಲಿಸಿದ 168 ಮಂದಿಯ ಅರ್ಜಿಯಲ್ಲಿ 134 ಮಂದಿಗೆ ಈಗಾಗಲೇ ಪರವಾನಿಗೆ ನೀಡಲಾಗಿದ್ದು ಉಳಿದವರ ಅರ್ಜಿಗಳನ್ನು ಸೆ.2 ರಂದು ಜರುಗುವ ಮರಳು ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರತಿಭಟನಾಕಾರರಿಗೆ ಸಮಾಧಾನಪಡಿಸಿದ್ದರು.
ಉಡುಪಿ ಜಿಲ್ಲೆಯಿಂದ ತೆಗೆಯುವ ಮರಳನ್ನು ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಬೇರೆ ಜಿಲ್ಲೆ ಹೋಗದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ನೀಡಿದ್ದರು. ಅಲ್ಲದೆ ಜಿಲ್ಲೆಯ ಹೊರಗೆ ಮರಳು ಸಾಗಾಟ ತಡೆಯುವ ಸಲುವಾಗಿ ಪೋಲಿಸ್, ಅಬಕಾರಿ, ಅರಣ್ಯ ಇಲಾಖೆಯೊಂದಿಗೆ ಪಿಡಿಒ, ವಿಎ ಎಲ್ಲರಿಗೂ ಅಧಿಕಾರ ಕಲ್ಪಿಸಲಾಗಿದೆ ಎಂದು ಹೇಳಿದ್ದರು.
ಮರಳನ್ನು ಸಾಗಿಸಲು 407 ಮತ್ತು ಟಿಪ್ಪರ್ ವಾಹನಗಳಿಗೆ ಮಾತ್ರ ಅವಕಾಶವಿದ್ದು, ದೊಡ್ಡ ಗಾತ್ರದ ಲಾರಿಗಳನ್ನು ಬಳಸುವುದಕ್ಕೆ ನಿಷೇಧವಿದೆ. ಒಟ್ಟು 134 ಪರವಾನಿಗೆಯಲ್ಲಿ ಉಡುಪಿ ತಾಲೂಕಿಗೆ 110, ಕುಂದಾಪುರ ತಾಲೂಕಿಗೆ 24 ಪರವಾನಿಗೆ ನೀಡಲಾಗಿದೆ.
ಒಟ್ಟಾರೆ ವಿರೋಧ ಪಕ್ಷಗಳ ಪ್ರತಿಭಟನೆ, ಬಡವರು ಮರಳಿಗಾಗಿ ಪಟ್ಟ ಪರದಾಟದ ಬಳಿಕವಾದರೂ ಮತ್ತೆ ಮರಳುಗಾರಿಕೆ ಆರಂಭಗೊಂಡಿರುವುದಕ್ಕೆ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.