ಉಡುಪಿ: ಮಾಜಿ ಸಂಸದ ಸಜ್ಜನ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅಸ್ತಿತ್ವ ಕಳೆದುಕೊಂಡ ನಾಯಕ ಎಂದು ಹೇಳಿಕೆ ನೀಡಿರುವ ಮಾಜಿ ಶಾಸಕ ಯು ಆರ್ ಸಭಾಪತಿ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ತನ್ನ ಅಸ್ತಿತ್ವ ಏನು ಎನ್ನುವುದನ್ನು ಸ್ಪಷ್ಟ ಪಡಿಸಲಿ ಎಂದು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ ಪ್ರಶ್ನಿಸಿದ್ದಾರೆ.
ಅವರು ಗುರುವಾರ ಉಡುಪಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಮಾಜಿ ಶಾಸಕ ಸಭಾಪತಿಯವರು ಸಜ್ಜನ ರಾಜಕಾರಿಣಿ ಜನರ ಬಗ್ಗೆ ಸದಾ ಚಿಂತಿಸುವ ಜಯಪ್ರಕಾಶ್ ಹೆಗ್ಡೆಯವರ ಕುರಿತು ಕೇವಲವಾಗಿ ಮಾತನಾಡಿರುವುದು ಖಂಡನೀಯ. ಹಲವು ಪಕ್ಷಗಳಿಗೆ ಭೇಟಿ ನೀಡಿ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರದ ಆಸೆಗಾಗಿ ಇತ್ತೀಚೆಗೆ ಸುದ್ದಿಯಲ್ಲಿರುವ ಸಭಾಪತಿ ಹೆಗ್ಡೆಯವರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಸದ್ಯದಲ್ಲಿಯೇ ಜಿಲ್ಲಾ ಕಾಂಗ್ರೆಸ್ ಇದರ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ಆಸೆಯಿಂದ ಪ್ರಚಾರಕ್ಕಾಗಿ ಸುದ್ದಿಯಲ್ಲಿರುವ ಸಭಾಪತಿ ಹಣಕ್ಕಾಗಿ ಕಾಂಗ್ರೆಸ್ ಪಕ್ಷ ನೀಡಿದ ಸೀಟನ್ನು ಬೇರೆಯವರಿಗೆ ಮಾರಿದ ವ್ಯಕ್ತಿ ಹೆಗ್ಡೆಯವರ ಅಸ್ತಿತ್ವದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಸಂಗತಿ.
ಹೆಗ್ಡೆಯವರ ವ್ಯಕ್ತಿತ್ವದ ಬಗ್ಗೆ ಕಾಂಗ್ರೆಸಿನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರೇ ಹೇಳಿದ್ದಾರೆ. ಹೆಗ್ಡೆಯವರು ನಿಜವಾಗಿ ಸಜ್ಜನ ರಾಜಕಾರಣಿ ಹಾಗೂ ಅಂತಹ ವ್ಯಕ್ತಿಗಳು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ ಎಂದು ಹೇಳಿದ್ದಾರೆ. ಅದಕ್ಕೆ ಪೂರಕವೆಂಬಂತೆ ಅವರ ನೂರಾರು ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಪ್ರತಿನಿತ್ಯ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಆದರೆ ಸಭಾಪತಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದಾಗ ಅವರ ಜೊತೆ ಯಾವೋಬ್ಬ ಕಾರ್ಯಕರ್ತ ಕೂಡ ರಾಜೀನಾಮೆ ಸಲ್ಲಿಸಿರಲಿಲ್ಲ ಎನ್ನುವುದನ್ನು ಅವರು ನೆನಪಿನಲ್ಲಿಡಲಿ ಎಂದರು.
ಶನಿವಾರ ನಡೆಯುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಜನರು ಕಾಂಗ್ರೆಸ್ಸನ್ನು ವಿರೋಧಿಸಿ ಬೇರೆ ಪಕ್ಷಕ್ಕೆ ಮತ ನೀಡಬೇಕು ಎಂದು ನಾವು ನಮ್ಮ ಕಾರ್ಯಕರ್ತರ ಮೂಲಕ ಹೇಳಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ನಮ್ಮ ಬೆಂಬಲಿಗರನ್ನು ಅಷ್ಟೊಂದು ಹಣವನ್ನು ಖರ್ಚು ಮಾಡಿ ಚುನಾವಣೆಗೆ ಸ್ಪರ್ಧಿಸುವುದು ಕಷ್ಟದ ಮಾತು ಮುಂದಿನ ದಿನಗಳಲ್ಲಿ ಚುನಾವಣೆಯ ಫಲಿತಾಂಶ ನೋಡಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ ಎಂದರು.
ಕಳೆದ ಜಿಲ್ಲಾಪಂಚಾಯತ್ ಚುನಾವಣೆಯಲ್ಲಿ ಬ್ರಹ್ಮಾವರ ಬ್ಲಾಕಿನ ಮೂರೂ ಜಿಪಂ ಕೂಡ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ತಾಪಂನಲ್ಲಿ 9 ಕ್ಷೇತ್ರಗಳಲ್ಲಿ 7 ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿತ್ತು ಆದರೆ ಈ ಬಾರಿ ಎರಡು ಜಿಪಂ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ ಅಲ್ಲದೆ ಒಂದೆ ಒಂದು ತಾಪಂ ಸ್ಥಾನ ಕಾಂಗ್ರೆಸ್ ಗೆಲ್ಲುವುದು ಕಷ್ಟ ಎಂದರು. ಮಂದಾರ್ತಿಯಲ್ಲಿ ಹೆಗ್ಡೆ ಬೆಂಬಲಿಗ ಉಲ್ಲಾಸ್ ಶೆಟ್ಟಿ ಚುನಾವಣೆಗೆ ನಿಂತಿದ್ದು ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾದರೂ 9(11) ಸಮಸ್ಯೆ, ಅಕ್ರಮ ಸಕ್ರಮ ಸಮಸ್ಯೆ, ಕುಮ್ಕಿ ಜಾಗದ ಸಮಸ್ಯೆಯನ್ನು ಪರಿಹಾರ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಶಾಸಕರು ಅಧಿಕಾರದ ಆರಂಭದಲ್ಲಿ ಅತೀ ಹೆಚ್ಚು ಬಿಪಿಎಲ್ ಕಾರ್ಡ್ ಮಾಡಿದ ಪಂಚಾಯತ್ ಅಧಿಕಾರಿಗೆ ಬಹುಮಾನ ನೀಡುವುದಾಗಿ ಒತ್ತಡ ಹೇರಿ ಕಾರ್ಡುಗಳನ್ನು ವಿತರಿಸಿದರು ಆದರೆ ಇಂದು ಅದೇ ಕಾರ್ಡುಗಳು ರದ್ದಾಗುತ್ತಿವೆ ಆದರೆ ಶಾಸಕರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಉಚ್ಛಾಟಿತ ನಾಯಕರಾದ ಗೋಪಾಲ್ ಬಂಗೇರ, ವಿಕಾಸ್ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ, ವಿನಯ್ ಕಬ್ಯಾಡಿ ಉಪಸ್ಥಿತರಿದ್ದರು.
ಸತ್ಯ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ