Home Mangalorean News Kannada News ಉಡುಪಿ: ಜೆಪಿ ಹೆಗ್ಡೆ ಉಚ್ಛಾಟನೆ ನನ್ನ ಸೋಲಿಗೆ ಕಾರಣ ; ಜಿಪಂ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾ...

ಉಡುಪಿ: ಜೆಪಿ ಹೆಗ್ಡೆ ಉಚ್ಛಾಟನೆ ನನ್ನ ಸೋಲಿಗೆ ಕಾರಣ ; ಜಿಪಂ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾ ಪೂಜಾರಿ

Spread the love

ಉಡುಪಿ: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿದ ಪರಿಣಾಮವಾಗಿ ನಾನು ಜಿಪಂ ಚುನಾವಣೆಯನ್ನು ಸೋಲಲು ಕಾರಣವಾಯಿತು ಎಂದು ಬ್ರಹ್ಮಾವರ ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾ ಪೂಜಾರಿ ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

feb23-2016-mallika-counting

ಕಳೆದ ಜಿಪಂ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಹಾಗೂ ಅವರ ಬೆಂಬಲಿಗರು ತನ್ನ ಗೆಲುವಿಗಾಗಿ ಶ್ರಮವಹಿಸಿದ್ದರು ಆದರೆ ಈ ಬಾರಿ ಪಕ್ಷದ ನಾಯಕರ ಒಳಜಗಳದ ಪರಿಣಾಮ ನಾನು ಬಲಿಪಶುವಾದಂತಾಗಿದೆ ಎಂದು ಗದ್ಗದಿತರಾಗದರು. ತಾನು ಮುಂದೆ ಪಕ್ಷದ ಸಾಮಾನ್ಯ ಕಾರ್ಯಕರ್ತಳಾಗಿ ನನ್ನ ಸೇವೆಯನ್ನು ನಾನು ನೀಡುತ್ತೇನೆ. ಈ ಸೋಲು ನನಗೆ ಅನೀರೀಕ್ಷಿತವಾಗಿದೆ. ಆದರೂ ಜನರ ತೀರ್ಪಿಗೆ ತಲೆಬಾಗುತ್ತೇನೆ ಎಂದರು.

ಇದೇ ವೇಳೆ ಎರಡನೇ ಬಾರಿ ಬಿಜೆಪಿಯಿಂದ ಕುರ್ಕಾಲು ಕ್ಷೇತ್ರದಿಂದ ಮಾಜಿ ಜಿಪಂ ಅಧ್ಯಕ್ಷೆ ಸರಸು ಬಂಗೇರಾ ಅವರ ವಿರುದ್ದ ಜಯಗಳಿಸಿದ ಗೀತಾಂಜಲಿ ಸುವರ್ಣ ಮಾತನಾಡಿ ನನ್ನ ಗೆಲುವು ಕಾಂಗ್ರೆಸ್ ಅಭ್ಯರ್ಥಿಯ ವಿರುದ್ದ ಅಲ್ಲ ಬದಲಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆಯವರ ವಿರುದ್ದವಾಗಿದೆ. ನನ್ನ ಸೋಲಿಗೆ ಸಚಿವ ಹಲವು ರೀತಿಯಲ್ಲಿ ಪ್ರಯತ್ನ ಪಟ್ಟಿದ್ದರು ಆದರೆ ಕ್ಷೇತ್ರದ ಜನತೆ ನನ್ನನ್ನು ಬಹುಮತದಿಂದ ಆರಿಸಿದ್ದಾರೆ. ಕಳೆದ ಅವಧಿಯಲ್ಲಿ ಹೇಗೆ ನಾನು ಪಡುಬಿದ್ರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇನೋ ಅದೇ ರೀತಿಯಲ್ಲಿ ಕುರ್ಕಾಲು ಕ್ಷೇತ್ರವನ್ನು ಕೂಡ ಅಭಿವೃದ್ಧಿ ಮಾಡುತ್ತೇನೆ. ಅಲ್ಲದೆ ಮುಂದಿನ ಎರಡು ವರ್ಷಗಳ ಬಳಿಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು ನನ್ನ ಜಿಲ್ಲಾಪಂಚಾಯತ್ ಕ್ಷೇತ್ರಕ್ಕೆ ಇನ್ನಷ್ಟು ಅಭಿವೃದ್ಧಿಗೆ ತೊಡಗಿಸಿಕೊಳ್ಳುತ್ತೇನೆ ಎಂದರು.

ಉಡುಪಿ ಜಿಲ್ಲಾ ಪಂಚಾಯತಿನ 26 ಸ್ಥಾನಗಳಲ್ಲಿ ಬಿಜೆಪಿ 20 ಸ್ಥಾನಗಳನ್ನು ಪಡೆದಿದ್ದು, ಕಾರ್ಕಳದಲ್ಲಿ 5 ಜಿಪಂ ಸ್ಥಾನಗಳನ್ನು ಕೂಡ ಬಿಜೆಪಿ ಬಾಚಿಕೊಂಡು ಸಂಪೂರ್ಣ ಕಾಂಗ್ರೆಸ್ ಮುಕ್ತ ಮಾಡುವುದರೊಂದಿಗೆ ಶಾಸಕ ಸುನಿಲ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ. ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಯವರ ಕಾಪು ಕ್ಷೇತ್ರದ 7 ಜಿಪಂ ಕ್ಷೇತ್ರದಲ್ಲಿ ಮೂರು ಕಾಂಗ್ರೆಸ್ ಗೆದ್ದುಕೊಂಡಿದ್ದು, ನಾಲ್ಕು ಬಿಜೆಪಿ ಪಾಲಾಗಿದೆ. ಕುಂದಾಪುರದಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬೈಂದೂರಿನಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರವನ್ನು ಗೆದ್ದುಕೊಂಡಿದ್ದು, ಉಡುಪಿಯಲ್ಲಿ ಕಾಂಗ್ರೆಸ್ ಒಂದನ್ನು ಜಯಗಳಿಸಿದರೆ ಬಿಜೆಪಿ ಮೂರು ತನ್ನ ವಶಕ್ಕೆ ಮಾಡಿಕೊಂಡಿದೆ.

ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಉಡುಪಿ ತಾಲೂಕು ಪಂಚಾಯತ್ ನಲ್ಲಿ 41 ಸ್ಥಾನಗಳಲ್ಲಿ ಬಿಜೆಪಿ 27 ಪಡೆದಿದ್ದು ಕಾಂಗ್ರೆಸ್ 14 ಸ್ಥಾನಗಳನ್ನು ಪಡೆದಿದೆ. ಕಾರ್ಕಳದಲ್ಲಿ 20 ಸ್ಥಾನಗಳಲ್ಲಿ ಬಿಜೆಪಿ 19 ಸ್ಥಾನ ಪಡೆದು ಕೇವಲ ಒಂದು ಸ್ಥಾನವನ್ನು ಕಾಂಗ್ರೆಸ್ ಪಡೆಯುವುದರೊಂದಿಗೆ ಹೀನಾಯ ಸೋಲನ್ನು ಅನುಭವಿಸಿದೆ. ಕುಂದಾಪುರ ತಾಲೂಕು ಪಂಚಾಯತಿನಲ್ಲಿ 27 ಸ್ಥಾನ ಬಿಜೆಪಿ ಪಡೆದಿದ್ದು, 10 ಕಾಂಗ್ರೆಸ್ ಗೆದ್ದಿದೆ.

ಜಿಲ್ಲೆಯಲ್ಲಿ ಮೂರು ಮಂದಿ ಕಾಂಗ್ರೆಸ್ ಶಾಸಕರು, ಒರ್ವ ವಿಧಾನಪರಿಷತ್ ಸದಸ್ಯರು ಹಾಗೂ ಸಚಿವರನ್ನು ಉಡುಪಿ ಜಿಲ್ಲೆ ಹೊಂದಿದ್ದು, ಜಿಲ್ಲೆಯ ಹೈಕಮಾಂಡ್ ಆಸ್ಕರ್ ಫೆರ್ನಾಂಡಿಸ್ ಕೂಡ ಇದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಸೋಲನ್ನು ಕಂಡಿದ್ದು, ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಆತ್ಮ ವಿಮರ್ಸೆಯ ಕಾಲವಾಗಿದೆ. ಕಳೆದ ವಿಧಾನ ಪರಿಷತ್ ಚುನಾವಣೆಯ ವೇಳೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರನ್ನು ಪಕ್ಷೇತರರಾಗಿ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು ಎನ್ನುವ ಕಾರಣಕ್ಕಾಗಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಇದರಿಂದ ಆಕ್ರೋಶಗೊಂಡು ಅವರ ಬೆಂಬಲಿಗರು ಹಾಗೂ ಹಲವು ಮಂದಿ ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷಕ್ಕೆ ಬಲವಾದ ಹೊಡೆತವನ್ನೇ ನೀಡಿದ್ದಾರೆ. ಪಕ್ಷದ ನಾಯಕರ ನಡುವಿನ ಆಂತರಿಕ ಭಿನ್ನಮತ ಹಾಗೂ ಜಿಲ್ಲೆಯಲ್ಲಿ ಪ್ರಭಾವಿ ನಾಯಕ ಜಯಪ್ರಕಾಶ್ ಹೆಗ್ಡೆಯವರನ್ನು ಉಚ್ಛಾಟನೆ ಮಾಡಿದುದರ ಪರಿಣಾಮವನ್ನು ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಾಣುವುದರ ಮೂಲಕ ಕಂಡುಕೊಂಡಿದೆ.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಕುರಿತು ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯಿಸಿ ಚುನಾವಣೆಯ ಫಲಿತಾಂಶದ ಕುರಿತು ನಾನು ಪ್ರತಿಕ್ರಿಯಿಸುವುದರ ಬದಲು ಕಾಂಗ್ರೆಸ್ ಪಕ್ಷದ ನಾಯಕರು ಉತ್ತರ ನೀಡುವುದು ಉತ್ತಮ. ಜಿಲ್ಲೆಯಲ್ಲಿ ಜಯಪ್ರಕಾಶ್ ಹೆಗ್ಡೆಯವರ ಸಾಧನೆ ಶೂನ್ಯ ಎಂದು ಕಾರ್ಕಳದಲ್ಲಿ ಒರ್ವ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದರೆ, ಜಯಪ್ರಕಾಶ್ ಹೆಗ್ಡೆಗೆ ಅಸ್ತಿತ್ವ ಇಲ್ಲ ಎಂಬ ಹೇಳಿಕೆಯನ್ನು ಇನ್ನೋರ್ವ ನಾಯಕರು ಕುಂದಾಪುರದಲ್ಲಿ ನೀಡಿದ್ದಾರೆ. ಅವರ ಹೇಳಿಕೆ ಸರಿಯಾದ ಪ್ರತಿಕ್ರಿಯೆಯನ್ನು ಮತದಾರ ನೀಡಿದ್ದಾರೆ ಆದ್ದರಿಂದ ನಾನೇನು ಹೇಳುವುದಿಲ್ಲ. ನಾನು ಎಲ್ಲಿಯೂ ಯಾರ ಬಗ್ಗೆಯೂ ಟೀಕೆ ಮಾಡಲು ಹೋಗಿಲ್ಲ. ನನ್ನ ಕುಟುಂಬದ ಸದಸ್ಯರು ತೀರಿಕೊಂಡ ಪರಿಣಾಮ ನಾನು ಮನೆಯಲ್ಲೇ ಇದ್ದೆ, ಇದನ್ನು ತಿಳಿಕೊಂಡಿರುವ ಕಾಂಗ್ರೆಸ್ ನಾಯಕರು ಅನಾವಶ್ಯಕವಾಗಿ ನನ್ನ ವಿರುದ್ದ ಹೇಳಿಕೆ ನೀಡತೊಡಗಿದ್ದರು. ಇದರಿಂದ ನನ್ನ ಬೆಂಬಲಿಗರು ಬೇಸರಗೊಂಡು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಬೇರೆ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಎಂದು ಹೇಳಿದ್ದಾರೆ ವಿನಹ ನಾನು ಈ ಕುರಿತು ಎಲ್ಲಿಯೂ ಹೇಳಿಕೆ ನೀಡಿಲ್ಲ. ಬ್ರಹ್ಮಾವರದ ಕಾಂಗ್ರೆಸ್ ಅಭ್ಯರ್ಥಿ ನನ್ನ ಬೆಂಬಲಿಗರ ಸಹಾಯದಿಂದ ಹಿಂದಿನ ಜಿಪಂ ಚುನಾವಣೆ ಗೆದ್ದಿದ್ದು ನಿಜ ಈ ಬಾರಿ ಅವರು ಸೋತಿರುವುದರ ಕಾರಣ ಎನು ಎಂದು ಅವರಿಗೆ ತಿಳಿದಿದೆ ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ಒಂದು ವೇಳೆ ನನ್ನನ್ನು ಕಾಂಗ್ರೆಸ್ ಉಚ್ಚಾಟನೆ ಮಾಡದೆ ಇದ್ದದ್ದಿರೆ ಇಂತಹ ಹೀನಾಯ ಫಲಿತಾಂಶ ಜಿಲ್ಲೆಯಲ್ಲಿ ಕಾಂಗ್ರೆಸ್ ನೋಡುತ್ತಿರಲಿಲ್ಲ. ನಾನು ನನ್ನು ಪ್ರತಿಯೊಂದು ನಿರ್ದಾರದ ಸಮಯದಲ್ಲಿ ನನ್ನ ಬೆಂಬಲಿಗರ ಅಭಿಪ್ರಾಯದಂತೆ ಮುಂದುವರೆದಿದ್ದೇನೆ ಮುಂದೆಯೂ ಅದನ್ನೇ ಪಾಲಿಸುತ್ತೇನೆ ಎಂದರು.


Spread the love
1 Comment
Inline Feedbacks
View all comments
Thomas D'Mello
8 years ago

I think it is 100% true that J P Hegde’s ouster has made this difference. Looks like Congress is nearly wiped out in Udupi zilla

wpDiscuz
Exit mobile version