ಉಡುಪಿ: ತಪ್ಪುಗಳನ್ನು ಯಾರೂ ಬೇಕೆಂದೇ ಮಾಡುವುದಿಲ್ಲ, ಕೆಲವೊಂದು ಸಂದರ್ಭ ನಮ್ಮನ್ನು ತಪ್ಪು ಮಾಡಿಸುತ್ತದೆ. ಜೈಲು ಅಪರಾಧಿಗಳನ್ನು ತಿದ್ದುವ ಜಾಗವಾಗಿದ್ದು, ಸಿಗುವ ಅವಕಾಶಗಳನ್ನು ಉಪಯೋಗಿಸಿ ಒಳ್ಳೆಯವರಾಗಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಪೋಲಿಸ್ ಅಧೀಕ್ಷಕ ಕೆ ಅಣ್ಣಾಮಲೈ ಹೇಳಿದರು.
ಅವರು ಶುಕ್ರವಾರ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಉಡುಪಿ, ಉಡುಪಿ ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಹಿರಿಯಡ್ಕ ಅಂಜಾರಿನ ಜಿಲ್ಲಾ ಕಾರಾಗೃಹದ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದಲಾಗುವುದು ಹೇಗೆ ಎಂಬ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಜೈಲಿನ ಲೈಬ್ರೆರಿಯಲ್ಲಿರುವ ಪುಸ್ತಕಗಳನ್ನು ಓದಬೇಕು. ಕಥೆ-ಕವನಗಳನ್ನು ಬರೆಯುವ ಪ್ರಯತ್ನ ಮಾಡಬೇಕು. ವ್ಯಾಯಮವೂ ಜೀವನಕ್ಕೆ ಮುಖ್ಯ. ಅದು ಒಳಗಿನಿಂದ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಎಂದರು.