ಉಡುಪಿ   ಠಾಣಾಧಿಕಾರಿ ಅನಂತಪದ್ಮನಾಭ ಅವರ ಅಮಾನತು ಆದೇಶ ರದ್ದುಗೊಳಿಸಲು ಶಾಸಕ ಭಟ್ ಆಗ್ರಹ

Spread the love

ಉಡುಪಿ   ಠಾಣಾಧಿಕಾರಿ ಅನಂತಪದ್ಮನಾಭ ಅವರ ಅಮಾನತು ಆದೇಶ ರದ್ದುಗೊಳಿಸಲು ಶಾಸಕ ಭಟ್ ಆಗ್ರಹ

ಉಡುಪಿ : ಯಾವುದೇ ಕಾರಣವಿಲ್ಲದೆ ಸೋಮವಾರ ರಾತ್ರಿ ಉಡುಪಿ ನಗರಠಾಣೆಯ ಠಾಣಾಧಿಕಾರಿಯಾಗಿದ್ದ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿರುವುದು ಖಂಡನೀಯ ಕೂಡಲೇ ಅವರ ಆದೇಶವನ್ನು ವಾಪಾಸು ಪಡೆಯುವಂತೆ ಉಡುಪಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ  ಅವರು ಸೋಮವಾರ ರಾತ್ರಿ ಉಡುಪಿ ನಗರಠಾಣೆಯ ಠಾಣಾಧಿಕಾರಿಯಾಗಿದ್ದ ಅನಂತ ಪದ್ಮನಾಭ ಅವರನ್ನು ಯಾವುದೇ ಕಾರಣವಿಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿದ್ದು ಉಡುಪಿಯ ಶಾಸಕನಾಗಿ ಇದನ್ನು ನಾನು ಖಂಡಿಸುತ್ತೇನೆ. ಒಂದು ವೇಳೆ ಅವರು ಯಾವುದೇ ರೀತಿಯ ಭ್ರಷ್ಠಾಚಾರ ಪ್ರಕರಣದಲ್ಲಿ ಭಾಗವಹಿಸಿ ತಪ್ಪು ಮಾಡಿದ್ದಲ್ಲಿ ಅಮಾನತು ಮಾಡಿದ್ದಲ್ಲಿ ನಾನು ಅದನ್ನು ಒಪ್ಪುತ್ತಿದ್ದೆ.

ಹತ್ತು ದಿನಗಳ ಹಿಂದೆ ಭಿನ್ನ ಕೋಮಿನ ಯುವಕ ಮತ್ತು ಯುವತಿ ನಗರದ ಭುಜಂಗ ಪಾರ್ಕಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದು, ಅಲ್ಲಿದ್ದ ನಾಗರಿಕರು ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಈ ಹಲ್ಲೆಯಲ್ಲಿ ಯುವಕನಿಗೆ ಸ್ವಲ್ಪ ಪೆಟ್ಟಾಗಿದ್ದು, ಬಳಿಕ ಪೊಲೀಸರು ಹುಡುಗಿಯ ಮನೆಯವರನ್ನು ಕರೆಸಿದ್ದು ಹುಡುಗನನ್ನು ಕೂಡ ಕರೆಸಿದ್ದಾರೆ. ಈ ವೇಳೆ ಯಾವುದೇ ಕೇಸು ಕೊಡುವುದಿಲ್ಲ ತನ್ನ ತಪ್ಪಾಗಿದೆ ಎಂದು ಯುವಕ ಕ್ಷಮೆ ಕೇಳಿದ್ದಾನೆ. ಅದರ ಬಳಿಕ ಠಾಣಾಧಿಕಾರಿ ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ನಾಲ್ಕೈದು ದಿವಸದ ಮೇಲೆ ಯುವಕ ಬೇರೆಯವರ ಪ್ರೇರಣೆಯ ಮೇಲೆ ಬಂದು ಎಸ್ಪಿಯವರಲ್ಲಿ ದೂರು ದಾಖಲಿಸಿದ್ದಾನೆ. ಅದರಂತೆ ಸ್ವಾಭಾವಿಕವಾಗಿ ಎಸ್ಪಿಯವರು ಎಫ್ ಐ ಆರ್ ದಾಖಲಿಸಿದ್ದಾರೆ. ನಿನ್ನೆ ಏಕಾಏಕಿ ನಮಗೆ ಯಾರಿಗೂ ತಿಳಿಸಿದೆ ಠಾಣಾಧಿಕಾರಿಯವರನ್ನು ಅಮಾನತು ಮಾಡಿದ್ದಾರೆ. ಅವರು ಉಡುಪಿಯಲ್ಲಿ ಕಳೆದ ಮೂರು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರೇನು ನಮ್ಮ ಸರಕಾರ ಬಂದ ಬಳಿಕ ಸೇವೆಗೆ ಬಂದವರಲ್ಲ. ಅವರು ಎಲ್ಲರೊಂದಿಗೆ ಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದವರು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಕೇಳಿದರೆ ಅವರು ಎಫ್ ಐ ಆರ್ ಮಾಡಿಲ್ಲ ಮತ್ತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂಬುದಾಗಿ ಹೇಳೀದ್ದಾರೆ.

ಎಸ್ಪಿಯವರಿಗೆ ನಾನು ಪ್ರಶ್ನೆ ಕೇಳ ಬಯಸುತ್ತೇನೆ ಒರ್ವ ಎಸ್ ಐ ಅವರು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಿಲ್ಲ ಎಂಬ ಕಾರಣಕ್ಕೆ ಅವರನ್ನು ಅಮಾನತು ಮಾಡುವುದಾದರೆ ಅವರದೇ ಕೈಕೆಳಗೆ ಇರುವ ಇನ್ನ ಎಷ್ಟೋ ಠಾಣೆಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮಾಹಿತಿ ನೀಡುತ್ತೇನೆ ಅವರನ್ನು ಸಹ ಇವರು ಅಮಾನತು ಮಾಡವರೇ ಎಂದು ಪ್ರಶ್ನಿಸಿದರು. ಎರಡು ಧರ್ಮಗಳ ನಡುವೆ ಸೌಹಾರ್ದತೆ ಇರಲಿ ಎಂಬ ಉದ್ದೇಶದಿಂದ ಮಾಡಿದ ಕೆಲಸಕ್ಕೆ ಅಮಾಯಕ ಠಾಣಾಧಿಕಾರಿಯನ್ನು ಅಮಾನತು ಮಾಡಿರುವುದು ಖಂಡನೀಯ. ಒರ್ವ ಜವಾಬ್ದಾರಿಯುತ ಠಾಣಾಧಿಕಾರಿ ಮಾಡಬೇಕಾದ ಕೆಲಸವನ್ನು ಅವರು ಮಾಡಿದ್ದು ಅಂತಹ ಒರ್ವ ಸಭ್ಯ ಅಧಿಕಾರಿಗೆ ಇಂತಹ ಶಿಕ್ಷೆ ನೀಡಿರುವುದನ್ನು ನಾನು ಶಾಸಕನಾಗಿ ಸಹಿಸುವುದಿಲ್ಲ. ಒಂದು ಧರ್ಮದವರ ಒತ್ತಡಕ್ಕೆ ಮಣಿದು ಎಸ್ಪಿಯವರು ಇಂತಹ ನಿರ್ಧಾರ ಕೈಗೊಂಡಿರುವುದು ನನಗೆ ತುಂಬಾ ಬೇಸರವಾಗಿದೆ. ಈ ಘಟನೆಯ ಬಗ್ಗೆ ಈಗಾಗಲೇ ನಾನು ಗೃಹಮಂತ್ರಿ ಮತ್ತು ಪಶ್ಚಿಮ ವಲಯ ಐಜಿಪಿಯವರಿಗೆ ಕೂಡ ಮಾಹಿತಿ ನೀಡಿದ್ದೇನೆ. ಕೂಡಲೇ ಅವರ ಅಮಾನತು ಆದೇಶವನ್ನು ವಾಪಾಸು ಪಡೆದು ಉಡುಪಿಯಲ್ಲೇ ಅವರಿಗೆ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಅನ್ಯ ಕೋಮಿನ ಯುವಕ ಯುವತಿಯರು ಮಾತನಾಡುತಿದ್ದಾಗ ಇನ್ನೊಂದು ಗುಂಪು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಲಾಗಿದೆ ಎಂದು ಉಡುಪಿ ನಗರ ಠಾಣೆ ಉಪ ನಿರೀಕ್ಷಕ, ಇಬ್ಬರು ಹೆಡ್ ಕಾನ್ಸ್ಟೆಬಲ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅಮಾನತುಗೊಳಿಸಿದ್ದರು


Spread the love