ಉಡುಪಿ ನಗರಕ್ಕೆ ನೀರಿನ ಬರ- ಟ್ಯಾಂಕರ್ ಮೂಲಕ ನೀರು ನೀಡಲು ಜಿಲ್ಲಾಧಿಕಾರಿಗೆ ಶಾಸಕ ಭಟ್ ಆಗ್ರಹ
ಉಡುಪಿ: ಉಡುಪಿ ನಗರದಾದ್ಯಂತ ನೀರಿನ ಸಮಸ್ಯೆಯಿಂದ ಜನರು ತತ್ತರಿಸಿ ಹೋಗಿದ್ದು ಅಧಿಕಾರಿಗಳು ಪರಸ್ಪರ ಗೂಬೆ ಕೂರಿಸುವ ಕೆಲಸವನ್ನು ಮಾಡಿಕೊಳ್ಳುವುದರಲ್ಲೆ ಮಗ್ನರಾಗಿದ್ದಾರೆ. ಸ್ವರ್ಣಾ ನದಿಯಲ್ಲಿ ಹೂಳೆತ್ತದೆ ನೀರು ಕಡಿಮೆಯಾಗಿದ್ದು ಕನಿಷ್ಠ ಪಕ್ಷ ಜಿಲ್ಲಾಧಿಕಾರಿಗಳು ಟ್ಯಾಂಕರ್ ಮೂಲಕ ಜನರಿಗೆ ನೀರು ಸರಬರಾಜು ಮಾಡುವಂತೆ ಉಡುಪಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುಡಿಯುವ ನೀರಿಗೆ ಸಂಬಂಧಿಸಿ ಸಭೆ ಕರೆಯುವಂತೆ 10 ಬಾರಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ. 3 ದಿನಕ್ಕೊಮ್ಮೆ ನೀರು ಸರಬರಾಜು ಮಾಡಿದ ಕಾರಣ ಎತ್ತರಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಯಾಗಿಲ್ಲ.
ಹೀಗಾಗಿ ಟ್ಯಾಂಕರ್ನಲ್ಲಿ ನೀರು ಕೊಡುವಂತೆ ಆಗ್ರಹಿಸಿದ್ದೆವು. ಆದರೆ ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಯತ್ತ ಕೈತೋರಿಸುತ್ತಾರೆ. ಜಿಲ್ಲಾಧಿಕಾರಿ ನಗರಸಭೆಯತ್ತ ಕೈ ತೋರಿಸುತ್ತಿದ್ದಾರೆ. ನೀರಿನ ಸಮಸ್ಯೆ ಪರಿಹಾರಕ್ಕೆ ಯಾರೂ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಎರಡು ತಿಂಗಳ ಹಿಂದೆಯೇ ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಆಗಿದ್ದರೂ ಜಿಲ್ಲಾಧಿಕಾರಿ ಅನುಮತಿ ಬಾಕಿ ಇದೆ. ಮೇ 8ರಿಂದಲೇ ಟ್ಯಾಂಕರ್ ನೀರು ಸರಬರಾಜು ಪ್ರಾರಂಭಿಸಬೇಕು ಎಂದು ಶಾಸಕರು ಆಗ್ರಹಿಸಿದರು.
ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದೆ ಅಸಹಾಯಕರಾಗಿದ್ದೇವೆ. ಬಜೆ ಅಣೆಕಟ್ಟೆಯ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಮುನ್ನ ನದಿಯಲ್ಲಿ ನೀರು ಇರುವಾಗಲೇ ಗುಂಡಿಗಳ ನೀರನ್ನು ಪಂಪ್ ಮಾಡಿ ಹಾಯಿಸಿದ್ದರೆ, ಈ ಸಮಸ್ಯೆ ಬರುತ್ತಿರಲಿಲ್ಲ. ಸಮರ್ಪಕವಾದ ನಿರ್ವಹಣೆ ಇಲ್ಲದೇ ಈ ಸಮಸ್ಯೆ ಎದುರಾಗಿದೆ. ಸ್ವರ್ಣಾ ನದಿಯಲ್ಲಿ ಶೀರೂರು, ಮಾಣಾೈ, ಭಂಡಾರಿಬೆಟ್ಟು, ಪುತ್ತಿಗೆ ಸೇತುವೆ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಒಟ್ಟು ಬೃಹತ್ ಗಾತ್ರದ ಗುಂಡಿಗಳಿವೆ. ಆದರೆ ಈ ಅವುಗಳ ನಡುವೆ ನೀರಿನ ಸಂಪರ್ಕವಿಲ್ಲ. ಈಗ ನೀರನ್ನು ಪಂಪ್ ಮಾಡಿ ಬಜೆ ಅಣೆಕಟ್ಟೆಗೆ ಹರಿಸುವುದು ಕಷ್ಟಸಾಧ್ಯ. ಈಗ ಭಂಡಾರಿ ಬೆಟ್ಟುವಿನಲ್ಲಿ ನೀರನ್ನು ಪಂಪ್ ಮಾಡಲಾಗುತ್ತಿದೆ. ಎಲ್ಲ ಹೊಂಡಗಳಿಂದ ನೀರನ್ನು ಸರಿಯಾಗಿ ಬಜೆ ಅಣೆಕಟ್ಟೆಗೆ ಹಾಯಿಸಿದರೆ ಇನ್ನೂ 25ದಿನಗಳಿಗೆ ಆಗುವಷ್ಟು ನೀರಿದೆ ಎಂದರು.
ಬೇಸಗೆ ಮಳೆ ಬಾರದೇ ಸಮಸ್ಯೆಯಾಗಿದೆ. ಮುಂಗಾರು ಪೂರ್ವ ಮಳೆಯೂ ಸುರಿಯದಿದ್ದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಆದ್ದರಿಂದ ಮಳೆಗಾಗಿ ದೇವರ ಮೊರೆ ಹೋಗುವುದಕ್ಕೆ ತೀರ್ಮಾನಿಸಲಾಗಿದೆ ಎಂದ ಶಾಸಕರು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮೇ 10ರಂದು ಸಂಜೆ 6ಕ್ಕೆ ಮಳೆಗಾಗಿ ಪ್ರಾರ್ಥಿಸಿ ಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಪರ್ಜನ್ಯ ಜಪ ಹಮ್ಮಿಕೊಳ್ಳಲಾಗಿದೆ. ಎಲ್ಲ ನಗರಸಭಾ ಸದಸ್ಯರು ಭಾಗವಹಿಸಲಿದ್ದಾರೆ. ನಗರದ ವಿವಿಧ ಚರ್ಚ್, ಮಸೀದಿಗಳಲ್ಲಿಯೂ ಪ್ರಾರ್ಥನೆ ಸಲ್ಲಿಸುವಂತೆ ವಿನಂತಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಮಂಜುನಾಥ ಮಣಿಪಾಲ, ಗಿರೀಶ್ ಅಂಚನ್, ಗಿರಿಧರ ಆಚಾರ್ಯ, ಬಾಲಕೃಷ್ಣ ಶೆಟ್ಟಿ ಇದ್ದರು.