ಉಡುಪಿ ನಗರಸಭಾ ಪೌರಯುಕ್ತ ಮಂಜುನಾಥಯ್ಯ ವರ್ಗಾವಣೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಉಡುಪಿ : ಕಳೆದ ಮೂರು ವರ್ಷಗಳಿಂದ ಉಡುಪಿ ನಗರಸಭೆಯಲ್ಲಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಡಿ.ಮಂಜುನಾಥ ಅವರನ್ನು ಕೂಡಲೇ ವರ್ಗಾಯಿಸುವಂತೆ ಆಗ್ರಹಿಸಿ ಉಡುಪಿ ನಗರ ಬಿಜೆಪಿಯ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಶುಕ್ರವಾರ ಕಡಿಯಾಳಿಯಿಂದ ನಗರಸಭೆಯವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿತು.
ಪೌರಾಯುಕ್ತ ಮಂಜುನಾಥಯ್ಯ ಅವರ ನೇತೃತ್ವದಲ್ಲಿ ನಗರಸಭೆಯಲ್ಲಿ ಮಿತಿಮೀರಿದ ಭೃಷ್ಠಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಪೌರಾಯುಕ್ತರ ಅಣಕು ಶವಯಾತ್ರೆಯನ್ನಯ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್ ಅವರು ಉಡುಪಿ ನಗರಸಭೆಯಲ್ಲಿ ಪೌರಯುಕ್ತರಾಗಿ ಕಳೆದ 3 ವರ್ಷಗಳಿಂದ ಸೇವೆ ಮಾಡುತ್ತಿದ್ದು ನಗರಸಭೆಯಲ್ಲಿ ವ್ಯಾಪಕವಾದ ಬೃಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನನ ಪ್ರಮಾಣ ಪತ್ರದಿಂದ ಹಿಡಿದು ಪ್ರತಿಯೊಂದು ಚಿಕ್ಕ ಕೆಲಸಕ್ಕೂ ಕೂಡ ಲಂಚ ನೀಡುವ ಪರಿಸ್ಥಿತಿ ಜನರಿಗೆ ಒದಗಿ ಬಂದಿದೆ. ಪೌರಾಯುಕ್ತರಾಗಿ ಎಲ್ಲಾ ಪಕ್ಷಗಳನ್ನು ಸಮಾನವಾಗಿ ಕಾಣುವ ಬದಲು ಕೇವಲ ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ಅವರು ವರ್ತಿಸುತ್ತಿದ್ದಾರೆ.
ಹಿಂದೆಲ್ಲಾ ಉಡುಪಿ ನಗರಸಭೆಯ ಅಧಿವೇಶನ ನೋಡಲು ಬೇರೆ ನಗರಸಭೆಗಳಿಂದ ಸದಸ್ಯರು ಬರುತ್ತಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಉಡುಪಿ ನಗರಸಭೆಯಲ್ಲಿ ಕೇವಲ ಗದ್ದಲ ಬಿಟ್ಟರೆ ಸಭೆಯೇ ನಡೆಯುತ್ತಿಲ್ಲ ಇದಕ್ಕೆ ಆಡಳಿತ ಪಕ್ಷದವರ ಜೊತೆ ಪೌರಾಯುಕ್ತರ ಜವಾಬ್ದಾರಿ ಕೂಡ ಇದೆ. ಪೌರಾಯುಕ್ತರಿಗೆ ಪೌರಾಡಳಿತ ಇಲಾಖೆಯ ಬಗ್ಗೆ ಸೂಕ್ತ ಜ್ಞಾನದ ಕೊರತೆ ಇದ್ದು ಅವರು ಅವರ ಮಾತೃ ಇಲಾಖೆಯಾಗಿರುವ ಶಿಕ್ಷಣ ಇಲಾಖೆಗೆ ಮರಳುವುದು ಉತ್ತಮ. ಉಡುಪಿ ನಗರಸಭೆಗೆ ಸೂಕ್ತವಾದ ಕರ್ನಾಟಕ ಪೌರಾಡಳೀತ ಸೇವೆ ದರ್ಜೆಯ ಅಧಿಕಾರಿಯನ್ನು ಸರಕಾರ ಒದಗಿಸ ಬೇಕು ಎಂಧು ಆಗ್ರಹಿಸಿದರು.
ಈಗಾಗಲೇ ರಾಜ್ಯದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಶಿಕ್ಷಣ ಇಲಾಖೆಯಿಂದ ಸೇವೆಯಿಂದ ಬೇರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಮರಳೀ ಮಾತೃ ಇಲಾಖೆಗೆ ಕರೆಸಿಕೊಳ್ಳುವ ಕೆಲಸ ಮಾಡುತ್ತಿದ್ದು ಪೌರಾಯುಕ್ತ ಮಂಜುನಾಥಯ್ಯ ಅವರನ್ನು ಕೂಡ ಮಾತೃ ಇಲಾಖೆಗೆ ತರುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಮುಖ್ಯಮಂತ್ರಿಗಳೂ ಮತ್ತು ಶಿಕ್ಷಣ ಸಚಿವರಿಗೆ ಕಾರ್ಡ್ ಚಳುವಳಿ ಕೂಡ ನಡೆಸಲಾಗುವುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ನಗರ ಸಭಾ ಸದಸ್ಯ ಯಶ್ಪಾಲ್ ಸುವರ್ಣ, ಬಿಜೆಪಿ ನಾಯಕರಾದ ಶ್ರೀಶ ನಾಯಕ್, ಪ್ರಭಾಕರ ಪೂಜಾರಿ, ಅಕ್ಷಿತ್ ಶೆಟ್ಟಿ ಹಾಗೂ ಇತರ ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಸ್ಥಳಕ್ಕೆ ಆಗಮಿಸಿದ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.