Home Mangalorean News Kannada News ಉಡುಪಿ ನಗರಸಭೆಗೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 500 ಕೋಟಿಗೂ ಮಿಕ್ಕಿ ಅನುದಾನ : ಪ್ರಮೋದ್ ಮಧ್ವರಾಜ್

ಉಡುಪಿ ನಗರಸಭೆಗೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 500 ಕೋಟಿಗೂ ಮಿಕ್ಕಿ ಅನುದಾನ : ಪ್ರಮೋದ್ ಮಧ್ವರಾಜ್

Spread the love

ಉಡುಪಿ ನಗರಸಭೆಗೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 500 ಕೋಟಿಗೂ ಮಿಕ್ಕಿ ಅನುದಾನ : ಪ್ರಮೋದ್ ಮಧ್ವರಾಜ್

ಉಡುಪಿ : ರಾಜ್ಯ ಸರಕಾರದ ವಿವಿಧ ಯೋಜನೆಗಳಿಂದ ಉಡುಪಿ ನಗರಸಭೆಗೆ 500 ಕೋಟಿ ರೂಪಾಯಿಗೂ ಮಿಕ್ಕಿ ಅನುದಾನ ಕಳೆದ ಕಾಂಗ್ರೆಸ್ ಪಕ್ಷದ ಆಡಳಿತದ ಐದು ವರ್ಷದಲ್ಲಿ ಮಂಜೂರಾಗಿದೆ. ನಗರಸಭಾ ವ್ಯಾಪ್ತಿಯ ವಿವಿಧ ಇಲಾಖೆಗಳಿಂದ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೂರಾರು ಕೋಟಿ ರಾಪಾಯಿಯ ಯೋಜನೆಗಳು ಉಡುಪಿ ನಗರದಲ್ಲಿ ಅನುಷ್ಠಾನಗೊಂಡಿವೆ ಎಂದು ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.

ಕೊಳ, ವಡಭಾಂಡೇಶ್ವರ, ಮಲ್ಪೆ ಸೆಂಟ್ರಲ್, ಸುಬ್ರಹ್ಮಣ್ಯ ನಗರ, ಕೊಡಂಕೂರು, ಗೋಪಾಲಪುರ ಮೊದಲಾದ ವಾರ್ಡ್ಗಳಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಅನುದಾನ ತರಲು ಅವಿರತ ಶ್ರಮವಹಿಸಿದ್ದೇನೆ. ಅನುದಾನದಲ್ಲಿ ಹಲವು ಕಾಮಗಾರಿಗಳು, ರಸ್ತೆ, ಸೇತುವೆ, ಕುಡಿಯುವ ನೀರು, ಉದ್ಯಾನವನ ಮೊದಲಾದ ಯೋಜನೆಗಳು ಅನುಷ್ಠಾನಗೊಂಡಿವೆ. ನಗರೋತ್ಥಾನದ 35 ಕೋಟಿ ರೂಪಾಯಿಯ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಮುಗಿದು ನಿರ್ಮಾಣ ಹಂತದಲ್ಲಿದ್ದು ನನ್ನ ಐದು ವರ್ಷದ ಶಾಸಕತನದ ಅವಧಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ ಆಶ್ವಾಸನೆಯಂತೆ 24 ಗಂಟೆ ನಿರಂತರ ವಿದ್ಯುತ್(ತಾಂತ್ರಿಕ ತೊಂದರೆ ಹೊರತುಪಡಿಸಿ) ನೀಡುವಲ್ಲಿ ಯಶಸ್ವಿಯಾಗಿದ್ದೇನೆ.

ಇನ್ನೊಂದು ಶಾಶ್ವತ ಕುಡಿಯುವ ನೀರಿನ ಯೋಜನೆ ವರಾಹಿ ಕುಡಿಯುವ ನೀರು ಹಾಗೂ ಒಳಚರಂಡಿ ಜಾಲ ಪುನಶ್ಚೇತನಕ್ಕೆ 338 ಕೋಟಿ ರೂಪಾಯಿ ಮಂಜೂರಾಗಿದ್ದು ಈಗಾಗಲೇ 3 ಪ್ಯಾಕೆಜ್ಗಳಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಪ್ರಥಮ ಹಾಗೂ 3ನೇ ಹಂತದ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರ ಇರುವುದರಿಂದ ಬಿಡುಗಡೆಗೊಂಡ ಅನುದಾನಗಳ ಕಾಮಗಾರಿಗಳು ಸಾಂಗವಾಗಿ ನೆರವೇರಲು ಹಾಗೂ ಅನುಷ್ಠಾನಗೊಳ್ಳಲು ಉಡುಪಿ ನಗರಸಭೆಯಲ್ಲಿ ಇನ್ನೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಒಗ್ಗಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆಕೊಟ್ಟರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ಪ್ರಖ್ಯಾತ್ ಶೆಟ್ಟಿ, ಅಮೃತ್ ಶೆಣೈ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾದವ, ಉಪಾಧ್ಯಕ್ಷರಾದ ಸಂಧ್ಯಾ ತಿಲಕ್ರಾಜ್, ಗಣೇಶ್ ನೆರ್ಗಿ, ನಾರಾಯಣ್ ಕುಂದರ್, ಶೇಖರ್ ಜಿ. ಕೋಟ್ಯಾನ್, ಜನಾರ್ದನ ಭಂಡಾರ್ಕರ್, ಯುವರಾಜ್, ಜಾನಕಿ ಗಣಪತಿ ಶೆಟ್ಟಿಗಾರ್, ಜಯಾನಂದ, ಲಿರಿಲ್, ಕೇಶವ ಎಂ. ಕೋಟ್ಯಾನ್, ಪ್ರಶಾಂತ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.


Spread the love

Exit mobile version