ಉಡುಪಿ :ನಳಿನ್ ಕುಮಾರ್ ಅಭಿನಂದನಾ ಕಾರ್ಯಕ್ರಮದಲ್ಲಿ ಸ್ಪೋಟಗೊಂಡ ಅಸಮಾಧಾನ
ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಅವರ ಉಡುಪಿ ಜಿಲ್ಲೆಯ ಮೊದಲ ಭೇಟಿಯ ವೇಳೆ ಪಕ್ಷದ ನಾಯಕರೊಳಗಿನ ಅಸಮಾಧಾನ ಬಹಿರಂಗವಾಗಿ ಸ್ಪೋಟಗೊಂಡಿದೆ.
ಉಡುಪಿಯ ಕಿದಿಯೂರು ಸಭಾಂಗಣದಲ್ಲಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಿದ್ದು ಜಿಲ್ಲೆಯ ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಗೈರು ಹಾಜರಾಗಿದ್ದಾರೆ.ಶಾಸಕ ಹಾಲಾಡಿಯವರಿಗೆ ಕುರ್ಚಿಯನ್ನು ಖಾಲಿ ಇಟ್ಟು ಬಿಜೆಪಿ ನಾಯಕರು ಕಾಯುತ್ತಿದ್ದಾರೆ.
ಈ ಹಿಂದೆ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುತ್ತೇವೆ ಅಂತ ಹೇಳಿ ಕೊನೆ ಗಳಿಗೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ನೀಡಲಾಗಿತ್ತು.ಆಗ ಮುನಿಸಿಕೊಂಡಿದ್ದ ಹಾಲಾಡಿ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರ ಸ್ಪರ್ದೆ ಮಾಡಿ ಚುನಾವಣೆ ಗೆದ್ದಿದ್ದರು. ಆದ್ರೆ ಕಳೆದ ಬಾರಿ ಮತ್ತೆ ಬಿಜೆಪಿ ಸೇರಿದ್ದ ಹಾಲಾಡಿ ಭಾರೀ ಬಹುಮತದಿಂದ ಗೆದ್ದು ಬಂದಿದ್ದರು. ಈ ಬಾರಿಯಾದರೂ ಸಚಿವ ಸ್ಥಾನ ಸಿಗಬಹುದು ಎಂಬ ಆಶಾಭಾವನೆಯಲ್ಲಿದ್ದರು. ಆದ್ರೆ ಸಚಿವ ಸ್ಥಾನ ಕೈಬಿಟ್ಟ ಹಿನ್ನಲೆಯಲ್ಲಿ ತಮ್ಮ ಅಸಮಾಧಾನವನ್ನು ತೆರೆಮರೆಯಲ್ಲಿ ತೋರಿಸಿದ್ದರು.ಮಾತ್ರವಲ್ಲದೇ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ಅಸಮಾಧಾನವನ್ನು ಇಂದಿನ ಸಭೆಗೆ ಗೈರಾಗುವ ಮೂಲಕ ಹಾಲಾಡಿ ತೋರ್ಪಡೆಸಿದರು.ಆದ್ರೆ ಯಾವುದೇ ಅಸಮಾಧಾನ ಉಡುಪಿ ಜಿಲ್ಲಾ ಬಿಜೆಪಿಯಲ್ಲಿಲ್ಲ ಅಂತ ನಾಯಕರು ಮಾತ್ರ ಬೆಣ್ಣೆಗೆ ತುಪ್ಪ ಸವರುವ ಕೆಲಸ ಮಾಡಿದರು.
ಇಂದಿನ ಅಭಿನಂದನಾ ಸಮಾರಂಭಕ್ಕೆ ಆಗಮಿಸಿ ನಳೀನ್ ಕುಮಾರ್ ಕಟೀಲ್ ಸಹ ಮಾಧ್ಯಮ ವಿನಂತಿಗೆ ಕಿವಿಕೊಡದೇ ಪ್ರಶ್ನೆಗೆ ಗಳಿಗೆ ಉತ್ತರಿಸದೇ ಮುಖ ಸಿಂಡರಿಸಿ ಮುನ್ನಡೆದರು.