ಉಡುಪಿ: ಸಾಲು ಮರದ ತಿಮ್ಮಕ್ಕನಿಗೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಹುಟ್ಟಿಕೊಂಡ ನೆರಳು ನೆರವು ಸಮಾನ ಮನಸ್ಕ ಪರಿಸರ ಪ್ರೇಮಿ ಯುವಕರ ತಂಡ ಈಗ ನಮ್ಮ ಮನೆ – ನಮ್ಮ ಮರ ಮತ್ತು ನಮ್ಮ ಶಾಲೆ – ನಮ್ಮ ಮರ ಅನ್ನೊ ಹೊಸ ಅಭಿಯಾನವನ್ನು ಜಾರಿಗೆ ತರಲು ಹೊರಟಿದ್ದಾರೆ.
ಈ ಕುರಿತು ತಂಡದ ಸದಸ್ಯ ಅವಿನಾಶ್ ಕಾಮತ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜಿಲ್ಲೆಯ ಯಾವುದೇ ಕಡೆ ಮನೆಗಳಲ್ಲಿ ಜಾಗವಿದ್ದಲ್ಲಿ ತಮ್ಮ ತಂಡದ ದೂರವಾಣಿ ಸಂಖ್ಯೆ ಕರೆ ಮಾಡಿದಲ್ಲಿ ತಂಡದ ಸದಸ್ಯರು ತಮ್ಮ ಅನೂಕೂಲಕ್ಕೆ ತಕ್ಕಂತೆ ಬಂದು ಒಂದು ಗಿಡವನ್ನು ನೆಟ್ಟು, ಫೋಟೊವನ್ನು ಕ್ಲಿಕ್ಕಿಸಿ ಅದರ ಒಂದು ಪ್ರತಿಯನ್ನು ಮನೆಯವರಿಗೆ ಹಾಗೂ ಒಂದು ಪ್ರತಿಯನ್ನು ತಂಡದ ದಾಖಲೆಗೆ ಇಡಲಾಗುವುದು. ಗಿಡವನ್ನು ನೆಟ್ಟ ದಾಖಲೆಗಾಗಿ ಮನೆಯ ಬಾಗಿಲಿಗೆ ಒಂದು ಸ್ಟಿಕ್ಕರ್ ಅಂಟಿಸಲಾಗುತ್ತದೆ ಅಲ್ಲದೆ ಮನೆಯವರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕೂಡ ದಾಖಲಿಸಿ ಮನೆಯವರು 2 ವರ್ಷಗಳ ಕಾಲ ನೆಟ್ಟ ಗಿಡವನ್ನು ಪೋಷಿಸುತ್ತೇವೆ ಎಂಬ ವಾಗ್ದಾನದ ಮೇಲೆ ಗಿಡವನ್ನು ನೆಡಲಾಗುತ್ತದೆ ಎಂದರು.
ತಂಡದಿಂದ ಅಶ್ವಥ, ಆಲ, ರೆಂಜ, ಸುರಗಿ, ಅಶೋಕ, ಬಡ್ಡುಪುಳಿ, ಹಾಲೆಮರ, ಹೊಂಗೆ, ಕಹಿಬೇವು, ಹೊಳೆದಾಸವಳ, ಚಿಕ್ಕು, ಮಾವು, ಹಲಸು, ಗೇರು, ಚೆರಿ, ಬಟರ್‍ಫ್ರುಟ್ ಇತ್ಯಾದಿಗಳನ್ನು ನೆಡುತ್ತಿದ್ದು, ಇದಕ್ಕೆ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.
ಮನೆಗಳಲ್ಲಿ ಗಿಡ ನೆಡುವಂತೆಯೆ ಶಾಲೆಗಳಲ್ಲಿ ಕೂಡ ಒಂದು ಮರ ನೆಡುವುದು. ಅವಕಾಶ ಇದ್ದಲ್ಲಿ ಶಾಲೆಯವರು ಮನಸು ಮಾಡಿದ್ದಲ್ಲಿ ಸಾಲು ಸಾಲು ಮರಗಳನ್ನು ನೆಡಲು ಕೂಡ ಚಿಂತನೆ ನಡೆಸಲಾಗಿದೆ.
ಅಭಿಯಾನವನ್ನು ಡಿಸೆಂಬರ್ ಮೂರರಂದು ಚಿಟ್ಪಾಡಿಯ ಶ್ರೀನಿವಾಸ ನಗರದಲ್ಲಿ ಉದ್ಯಮಿ ಚಂದ್ರಮೋಹನ್ ಅವರ ಬೆನಕ ಮನೆಯ ಅಂಗಳದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಲಾಗುತ್ತದೆ. ಈ ಅಭಿಯಾನ ಉಡುಪಿಯಿಂದ ಆರಂಭವಾಗಿ ರಾಜ್ಯದುದ್ದಕ್ಕೂ ಹಬ್ಬಿಸುವ ಅಪೇಕ್ಷೆ ತಂಡಕ್ಕಿದ್ದು, ಉಡುಪಿಯ ಜನರು ಮನಸ್ಸು ಮಾಡಿದ್ದಲ್ಲಿ ಅಭಿಯಾನ ಯಶಸ್ಸು ಕಾಣುತ್ತದೆ ಎಂದರು.
ಸಾರ್ವಜನಿಕರು ತಮ್ಮ ಮನೆಗಳಲ್ಲಿ ಗಿಡ ನೆಡಲು ಅಪೇಕ್ಷಿಯಿದ್ದಲ್ಲಿ 9986220255 ಸಂಖ್ಯೆಗೆ ಕರೆ ಮಾಡಲು ಅವಕಾಶವಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಉರಗ ತಜ್ಞ ಗುರುರಾಜ ಸನೀಲ್, ಎಮ್ ಜಿ ಎಮ್ ಕಾಲೇಜಿನ ಮಂಜುನಾಥ ಕಾಮತ್ ಉಪಸ್ಥಿತರಿದ್ದರು.
Being nature lover it’s most liking thing to me! It’s a step towards our bright.. Beautiful.. And healthy world.. All the best. Evry one should join this organization. Especially youths! Thanks to sharing with us!