ಉಡುಪಿ ಪತ್ರಕರ್ತರ ಕ್ರಿಕೆಟ್; ಟಿವಿ ಮೀಡಿಯಾ ಎ ತಂಡಕ್ಕೆ ವಿನ್ನರ್ಸ್ ಕಿರೀಟ; ಪತ್ರಿಕಾ ವರದಿಗಾರ ತಂಡ ರನ್ನರ್ಸ್
ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಟಿವಿ ಮೀಡಿಯ- ಎ ತಂಡ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ. ಉಡುಪಿ ಪತ್ರಿಕಾ ವರದಿಗಾರರ ತಂಡ ದ್ವಿತೀಯ ಸ್ಥಾನಕ್ಕೆ ಪಾತ್ರವಾಗಿದೆ.
ಉಡುಪಿ ನಗರದ ಬೀಡಿನಗುಡ್ಡೆ ಮಹಾತ್ಮಾಗಾಂಧಿ ಮೈದಾನದಲ್ಲಿ ನಡೆದ ಸೀಮಿತ ಓವರ್ನ ಕ್ರಿಕೆಟ್ ಪಂದ್ಯಾಟದ ಫೈನಲ್ನಲ್ಲಿ ಟಿವಿ ಮೀಡಿಯಾ ಎ ತಂಡ ಉಡುಪಿ ತಾಲೂಕು ಪತ್ರಿಕಾ ವರದಿಗಾರರ ತಂಡವನ್ನು ಬಗ್ಗು ಬಡಿದು ಕಪ್ ಗೆದ್ದುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ರಾಘವೇಂದ್ರ ನೇತೃತ್ವದ ಪತ್ರಿಕಾ ವರದಿಗಾರರ ತಂಡ ಆರು ಓವರ್ ಗೆ 41 ರನ್ ಮಾಡಿತ್ತು. ಮೊತ್ತವನ್ನು ಬೆನ್ನತ್ತಿದ ಮೀಡಿಯಾ ಎ ಟೀಂ 5.2 ಓವರ್ಗೆ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.
ಮೀಡಿಯಾ ಎ ಟೀಂ ಪರ ಪ್ರಜಾ ಟಿವಿಯ ಜಿಲ್ಲಾ ವರದಿಗಾರ ಇರ್ಷಾದ್, ರಾಜ್ ನ್ಯೂಸ್ ವರದಿಗಾರ ಸಂತೋಷ್, ರಾಜ್ ನ್ಯೂಸ್ ಕ್ಯಾಮೆರಾಮೆನ್ ಶ್ರೇಯಸ್ ಕರಾರುವಕ್ ಬೌಲಿಂಗ್ ಮಾಡಿದ್ದು ತಂಡದ ಬೃಹತ್ ಮೊತ್ತದ ಕನಸಿಗೆ ಮಾರಕವಾದರು. ಮೀಡಿಯಾ ಟೀಂ ಪರ ಬಿಟಿವಿ ಕ್ಯಾಮೆರಾ ಮೆನ್ ಸಂದೀಪ್, ಟಿವಿ5 ಕ್ಯಾಮೆರಾಮೆನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿ ಗೆಲುವನ್ನು ತಂಡಕ್ಕೆ ತಂದುಕೊಟ್ಟರು. ಮೊದಲ ವಿಕೆಟ್ ಪತನದ ನಂತರ ಹೊಡಿಬಡಿ ದಾಂಡಿಗ ಶ್ರೇಯಸ್ ಸಂದೀಪ್ ಜೊತೆ ತಂಡಕ್ಕೆ ಜಯ ತಂದುಕೊಟ್ಟರು.
ಬೆಳಗ್ಗೆ 10 ಗಂಟೆಗೆ ಆರಂಭವಾದ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು ಐದು ತಂಡಗಳು ಪಾಲ್ಗೊಂಡಿದ್ದವು. ಮೊದಲ ಪಂದ್ಯಾಟ ಉಡುಪಿ ಮೀಡಿಯಾ ಬಿ ಮತ್ತು ಉಡುಪಿ ಪತ್ರಿಕಾ ವರದಿಗಾರರ ನಡುವೆ ನಡೆಯಿತು. ಪಂದ್ಯಾಟದಲ್ಲಿ ಮೀಡಿಯಾ ಬಿ ವೀರೋಚಿತ ಸೋಲು ಅನುಭವಿಸಿತು. ಎರಡನೇ ಪಂದ್ಯದಲ್ಲಿ ಕುಂದಾಪುರ ತಂಡವನ್ನು ಉಡುಪಿ ಮೀಡಿಯಾ ಎ ತಂಡ ಸೋಲಿಸಿತು. ಕಾಪು ಪತ್ರಕರ್ತರ ತಂಡವನ್ನು ಉಡುಪಿ ಮೀಡಿಯಾ ಎ ಟೀಂ ಸೋಲಿಸಿ ಫೌನಲ್ಗೆ ಏರಿತ್ತು.
ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಕ್ರಿಕೆಟ್ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೂರು ಮಂದಿ ಗಣ್ಯರು ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿ ಪಂದ್ಯಾಟಕ್ಕೆ ಚಾಲನೆ ನೀಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಕ್ರೀಡಾ ಕಾರ್ಯದರ್ಶಿ ಹರೀಶ್ ಪಾಲೆಚ್ಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ವರ್ಕಾಡಿ ನಿರೂಪಿಸಿದರು