Home Mangalorean News Kannada News ಉಡುಪಿ: ಪರಸ್ಪರ ಹೃದಯಗಳನ್ನು ಬೆಸೆಯುವ ಕೆಲಸ ನಡೆಯಬೇಕು.- ಕೇಮಾರು ಸ್ವಾಮಿಜಿ

ಉಡುಪಿ: ಪರಸ್ಪರ ಹೃದಯಗಳನ್ನು ಬೆಸೆಯುವ ಕೆಲಸ ನಡೆಯಬೇಕು.- ಕೇಮಾರು ಸ್ವಾಮಿಜಿ

Spread the love

ಉಡುಪಿ: ನಮ್ಮೊಳಗಿನ ದ್ವೇಷ ಅಸೂಯೆ ತಾರತಮ್ಯ ಮರೆತು ನಾವೆಲ್ಲರೂ ಮನುಜರು ಎಂಬ ಭಾವನೆಯಿಂದ ಬದುಕಿ ಮಾನವೀಯತೆಯನ್ನು ಮೆರೆಯಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಬುದವಾರ ದೆಂದೂರುಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಸರ್ವಧರ್ಮ ಸೌಹಾರ್ದ ಸಮಿತಿ ಕುಂತಳನಗರ – ಮಣಿಪುರ ಹಾಗೂ ಸಂತ ಅಂತೋನಿ ದೇವಾಲಯ ಕುಂತಳನಗರ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಸೌಹಾರ್ದ ಕ್ರಿಸ್‍ಮಸ್ ಆಚರಣೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು.

sarvadharama+Xmas_kuntalnagar 16-12-2015 17-53-53

ಭಾರತ ದೇಶವು 29 ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು, 3000 ಜಾತಿಗಳು, 122 ಅಧಿಕೃತ ಭಾಷೆಗಳು, 10 ಪ್ರಮುಖ ಧರ್ಮಗಳನ್ನು ಹೊಂದಿದ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಾ ಬಂದಿದೆ. ದೇಶದ ಜನರು ವಿವಿಧ ಧರ್ಮವನ್ನು ಪಾಲನೆ ಮಾಡುತ್ತಿದ್ದರೂ ಕೂಡ ಎಲ್ಲಾ ಧರ್ಮಗಳು ಸಾರುವ ಸಂದೇಶ ಒಂದೆ ಅದುವೇ ಶಾಂತಿ ಪ್ರೀತಿ, ದಯೆ, ಕರುಣೆ, ಅಹಿಂಸೆ, ಪರಧರ್ಮ ಸಹಿಷ್ಣುತೆ ಹಾಗೂ ಸೋದರತ್ವ. ಇಂದಿನ ಕಲುಷಿತಗೊಂಡ ಸಮಾಜದಲ್ಲಿ ಪ್ರತಿಯೊಬ್ಬ ಭಾರತೀಯನು ನಾವೆಲ್ಲಾ ಮಾನವರು ಎನ್ನುವುದನ್ನು ಮೊದಲು ಅರಿತುಕೊಂಡು ಸೌಹರ್ದತೆಯಿಂದ ಕೂಡಿದ ಸಮಾಜವನ್ನು ಕಟ್ಟುವ ಕೈಂಕರ್ಯಕ್ಕೆ ಪಣ ತೊಡಬೇಕಾಗಿದೆ. ನಾವೆಲ್ಲಾ ಒಂದೇ ಜಾತಿ, ಒಂದೆ ಮತ, ಒಂದೇ ಕುಲ ಎಂಬ ಧ್ಯೇಯದಂತೆ ನಾವೆಲ್ಲಾ ಮನುಜರು ಎನ್ನುವುದನ್ನು ಮರೆಯದೆ ಬಾಳ ಬೇಕಾಗಿದೆ ಎಂದರು.

ಕೇಮಾರು ಸಾಂದಿಪನಿ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮಿಜಿ ಮಾತನಾಡಿ ವೃತ ಆಚರಣೆಗಳ ನೆಪದಲ್ಲಿ ಇಂದು ಪರಸ್ಪರ ಹೃದಯಗಳನ್ನು ಬೆಸೆಯುವ ಬದಲು ಒಡೆಯುವ ಕೆಲಸಗಳನ್ನು ನಡೆಸಲಾಗುತ್ತದೆ ಇದನ್ನು ತಡೆಯುವ ಕೆಲಸ ಸಮಾಜದ ಪ್ರತಿಯೊಬ್ಬ ವ್ಯಕ್ತಿಯಿಂದ ನಡೆಯಬೇಕು. ಮನುಷ್ಯನಲ್ಲಿ ತಾಳ್ಮೆಯೆಂಬುದು ಇಂದಿನ ದಿನಗಳಲ್ಲಿ ಮರೆಯಾಗುತ್ತಿದ್ದು ಇದರಿಂದ ಅನಾಹುತಗಳು ನಡೆಯಲು ದಾರಿ ಮಾಡಿಕೊಟ್ಟಂತಾಗುತ್ತದೆ ಇದರಿಂದ ಅಶಾಂತಿ ಅನಾಚರಗಳು ಹೆಚ್ಚಾಗುತ್ತವೆ. ಭಾರತ ದೇಶವು ವಿಶೇಷ ಸಂಸ್ಕøತಿ ಮತ್ತು ಆಚಾರ ವಿಚಾರಗಳನ್ನು ಹೊಂದಿದ ದೇಶದ ಅದನ್ನು ಉಳಿಸುವ ಕೆಲಸ ತಾಯಿಯಿಂದ ನಡೆಯಬೇಕಾಗಿದೆ. ತಾಯಿ ತನ್ನ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಒಳ್ಳೆಯ ಚಿಂತನೆಗಳನ್ನು ಬೆಳೆಸಿದಾಗ ಸಮಾಜದಲ್ಲಿ ಸಂಸ್ಕøತಿ ಉಳಿಯುತ್ತದೆ. ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಿ ಸಂಸ್ಕøತಿ ಮತ್ತು ಪರಂಪರೆಯ ಉಳಿಸುವಿಕೆ ನಡೆಯುವುದರೊಂದಿಗೆ ಇಂತಹ ಸಂಘಟನೆಗಳು ಸಮಾಜದಲ್ಲಿರುವ ಬಡವರ ದೀನದಲಿತರ ನೋವಿಗೆ ಸ್ಪಂದಿಸಿ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸುವಲ್ಲಿ ಪ್ರಯತ್ನ ಪಟ್ಟಾಗ ಮಾತ್ರ ನಾವು ಆಚರಿಸಿದ ಕ್ರಿಸ್ಮಸ್ ಅಥವಾ ಇನ್ನಿತರ ಯಾವುದೇ ಹಬ್ಬಗಳಿಗೆ ನಿಜವಾದ ಅರ್ಥ ಲಭಿಸಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸಿವಿಲ್ ಸರ್ವಿಸ್ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಅತ್ಯುತ್ತಮ ಅಂಕಗಳಿಂದ ಉತ್ತೀರ್ಣರಾಗಿ ನಾಗರಿಕ ಸೇವಾ ಪರೀಕ್ಷೆಗೆ ಅಣಿಯಾಗುತ್ತಿರುವ ಮೊಹಮ್ಮದ್ ಆಶಿಲ್‍ಗೆ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಸಿಎಸ್‍ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತ್ಯ ಮಂಗಳೂರು ಇದರ ಧರ್ಮಾಧ್ಯಕ್ಷರಾದ ವಂ ಡಾ ಮೋಹನ್ ಮನೋರಾಜ್, ರೆಹಮಾನಿಯ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಮೂಫರ್ ಹಮೀದ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ದೆಂದೂರು – ಕಲ್ಮಂಜ ಇದರ ಅಧ್ಯಕ್ಷರಾದ ಸಕಾರಾಮ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಲ್ಮಂಜೆ ಇದರ ಪ್ರಧಾನ ಅರ್ಚಕರಾದ ವೇದವ್ಯಾಸ ಉಪಾಧ್ಯಾಯ, ಮೂಡುಬೆಳ್ಳೆ ಸಂತ ಲಾರೆನ್ಸ್ ದೇವಾಲಯದ ಧರ್ಮಗುರುಗಳಾದ ವಂ ಕ್ಲೇಮಂಟ್ ಮಸ್ಕರೇನ್ಹಸ್, ಸರ್ವಧರ್ಮ ಸೌಹಾರ್ದ ಸಮಿತಿ ಕುಂತಳನಗರ – ಮಣಿಪುರ ಅಧ್ಯಕ್ಷರಾದ ವಂ ಡೆನಿಸ್ ಡೆಸಾ, ಸಂಚಾಲಕರಾದ ಜೋಸೇಫ್ ಕುಂದರ್, ಕಾರ್ಯದರ್ಶಿ ವಿಲ್ಫ್ರೇಡ್ ಮೆಂಡೋನ್ಸಾ, ವಂ ಸ್ಯಾಮುವೆಲ್ ಜತ್ತನ್ನ, ರೂಪ್ ಸುಗುಣ ಜತ್ತನ್ನ, ವಲೇರಿಯನ್ ಮಥಾಯಸ್ ಇನ್ನಿತರರು ಉಪಸ್ಥಿತರಿದ್ದರು.
ಸರ್ವಧರ್ಮ ಸೌಹಾರ್ದ ಸಮಿತಿ ಅಧ್ಯಕ್ಷರಾದ ವಂ ಡೆನಿಸ್ ಡೆಸಾ ಸ್ವಾಗತಿಸಿ, ಸಂಚಾಲಕ ಜೋಸೇಫ್ ಕುಂದರ್ ವಂದಿಸಿದರು, ರೋಶನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version