ಉಡುಪಿ:- ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸಾಮಾಜಿಕ ವ್ಯವಸ್ಥೆ ಪೂರಕವಾಗಿರಬೇಕು. ಸಾಮಾಜಿಕ ಹೊಣೆಗಾರಿಕೆ ಮತ್ತು ಮಾಹಿತಿಯುಕ್ತ ಸಮಾಜದಿಂದ ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.
ಅವರಿಂದು ಉಡುಪಿಯ ಐಎಂಎ ಭವನದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಡತನ, ಅನಕ್ಷರತೆ, ಇನ್ನಿತರ ಒತ್ತಡಗಳಿಂದ ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಿದ್ದು, ಇಂತಹವರನ್ನು ಗುರುತಿಸಿ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕಾರ್ಮಿಕ ಇಲಾಖೆ ಮೂಲಕ ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಿದೆ ಎಂದರು.
ಗುಣಮಟ್ಟದ ಶಿಕ್ಷಣ, ಶಾಲಾ ಪರಿಸರ ಮಕ್ಕಳಿಗೆ ಸಹ್ಯವನ್ನಾಗಿಸುವುದು. ಶಾಲೆಗಳು ಮಕ್ಕಳಿಗೆ ಕಲಿಕೆಯ ಆಕರ್ಷಕ ಪರಿಸರ ಹೊಂದಿರಬೇಕೇ ವಿನ: ಮಕ್ಕಳು ಶಾಲೆ ಬಿಟ್ಟುಹೋಗುವಂತಹ ಪರಿಸ್ಥಿತಿ ಇರಬಾರದು. ಎಲ್ಲ ಕರ್ತವ್ಯಗಳು ಆರ್ಥಿಕ ಲಾಭ ನಷ್ಟದಿಂದಾಗದೇ ಮಾನವೀಯ ಸಂಬಂಧಗಳ ದೃಷ್ಟಿಕೋನ ಹೊಂದಿದ್ದರೆ ಸಾಮಾಜಿಕ ಪಿಡುಗುಗಳ ನಿವಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಪ್ರಭಾರ) ಎಸ್ ಶ್ರೀನಿವಾಸ ರಾವ್ ಅವರು,ಬಾಲಕಾರ್ಮಿಕ ಪದ್ದತಿ ವಿರೋಧಿ ದಿನದ ಪ್ರಮಾಣ ವಚನ ಬೋಧಿಸಿದರು.
ಸಾಮಾಜಿಕ ಪರಿವರ್ತನೆಯಿಂದ ಮಾತ್ರ ಅನಿಷ್ಠ ಪದ್ಧತಿಗಳ ನಿರ್ಮೂಲನೆ ಸಾಧ್ಯ. ನಮ್ಮ ಜಿಲ್ಲೆಯಲ್ಲಿ ಕೇವಲ ಬೆರಳೆಣಿಕೆಯಷ್ಟ ಮಾತ್ರ ಇಂತಹ ಘಟನೆಗಳು ವರದಿಯಾಗಿದ್ದು, ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ನಿರಂತರ ಪ್ರಯತ್ನವನ್ನು ಜಿಲ್ಲೆ ಮಾಡುತ್ತಿದೆ ಎಂದರು.
ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸವಿತಾ ಶಿವಾನಂದ ಕೋಟ್ಯಾನ್, ನಗರಸಭೆ ಅಧ್ಯಕ್ಷ ಪಿ. ಯುವರಾಜ್ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಉಡುಪಿ ಜಿಲ್ಲೆಯ ಕಾರ್ಮಿಕ ಅಧಿಕಾರಿ ಹೆಚ್ ಪಿ ಜ್ಞಾನೇಶ್, 2014-15ನೇ ಸಾಲಿನಲ್ಲಿ 14 ಬಾಲಕಾರ್ಮಿಕರು ಪತ್ತೆಯಾಗಿದ್ದು, ಮೂವರನ್ನು ಪೋಷಕರ ವಶಕ್ಕೆ, 11 ಮಕ್ಕಳನ್ನು ಸ್ಫೂರ್ತಿಧಾಮದಲ್ಲಿ ಪುನರ್‍ವಸತಿಗೆ ಏರ್ಪಾಡು ಮಾಡಲಾಗಿದೆ. ಎರಡು ಪ್ರಕರಣ ಸಾಬೀತಾಗಿದ್ದು 20,000 ರೂ. ದಂಡ ವಸೂಲಿ ಮಾಡಲಾಗಿದೆ. ಮಕ್ಕಳಿಗೆ ಪರಿಹಾರವನ್ನು ಕೊಡಿಸಲಾಗಿದೆ ಎಂದರು. ಜಿಲ್ಲೆಯಾದ್ಯಂತ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದೂ ಅವರು ನುಡಿದರು.
ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ಕಾರ್ಮಿಕ ನಿರೀಕ್ಷಕ ರಾಮಮೂರ್ತಿ ಅವರು ಮಾಹಿತಿ ನೀಡಿದರು. ಸ್ಪೂರ್ತಿಧಾಮ ಬೇಳೂರು ಇಲ್ಲಿನ ವಿದ್ಯಾರ್ಥಿಗಳಿಂದ ಬಾಲಕಾರ್ಮಿಕ ಅನಿಷ್ಠ ಪದ್ಧತಿ ನಿರ್ಮೂಲನೆ ಕುರಿತು ಕಾರ್ಯಕ್ರಮ ನಡೆಸಿಕೊಟ್ಟರು.
ಯೋಜನಾ ನಿರ್ದೇಶಕರಾದ ಪ್ರಭಾಕರ ಆಚಾರ್ ಕಾರ್ಯಕ್ರಮ ನಿರೂಪಿಸಿದರು.