ಉಡುಪಿ: ಬಿಜೆಪಿಯ ಹಿರಿಯ ಮುಂದಾಳು ಸೋಮಶೇಖರ ಭಟ್ ನಿಧನ
ಉಡುಪಿ: ಬಿಜೆಪಿಯ ಹಿರಿಯ ಮುಂದಾಳು ಆರ್ ಎಸ್ ಎಸ್ ಹಿರಿಯ ಮುಖಂಡರಾಗಿದ್ದ ಸೋಮಶೇಖರ ಭಟ್ (89) ಭಾನುವಾರ ನಿಧನರಾದರು.
ಉಡುಪಿ ಪುರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಅವರು ಬಿಜೆಪಿಯ ಹಿರಿಯಾ ನಾಯಕಎಲ್ ಕೆ ಅಡ್ವಾಣಿ ಡಾ. ವಿ ಎಸ್ ಆಚಾರ್ಯ ಮುಂತಾದ ಬಿಜೆಪಿ ಹಿರಿಯ ಮುಖಂಡರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು.
ಕರಾವಳಿ ಬಿಜೆಪಿಯಲ್ಲಿ ಸೋಮಣ್ಣ ಎಂದೇ ಖ್ಯಾತರಾಗಿದ್ದ ಅವರು ಉಡುಪಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 18 ತಿಂಗಳು ಬೆಂಗಳೂರಿನಲ್ಲಿ ಲಾಲಕೃಷ್ಣ ಅಡ್ವಾಣಿಯವರೊಂದಿಗೆ, ಸೆರೆವಾಸವನ್ನು ಅನುಭವಿಸಿದ್ದರು
ರಾಮಮಂದಿರದ ಕರಸೇವೆಯಲ್ಲಿ ಮುಂಚೂಣಿಯಲ್ಲಿದ್ದಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು
ವರುಣ್ ಪೈಪಿಂಗ್ ಸಿಸ್ಟಮ್ ನ ಸ್ಥಾಪಕರಾಗಿರುವ ಇವರು ಪತ್ನಿ ಇಬ್ಬರು ಗಂಡು ಮಕ್ಕಳು, ಒಬ್ಬರು ಮಗಳನ್ನು ಅಗಲಿರುತ್ತಾರೆ.
ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಕಡಿಯಾಳಿ ಇದರ ಸ್ಥಾಪಕ ಸದಸ್ಯರಾದ ಇವರು, ಕುಂಜಿಬೆಟ್ಟು ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ(ರಿ)ದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಉಡುಪಿ ಜಿಲ್ಲೆಯ ಹಿರಿಯ ಕೈಗಾರಿಕೋದ್ಯಮಿ ಇವರು ಕೊಡುಗೈ ದಾನಿಯಾಗಿದ್ದರು.
ನಾಳೆ (ಸೋಮವಾರ) ಬೆಳಿಗ್ಗೆ 8:30 ರಿಂದ11.00 ಗಂಟೆಯ ತನಕ ಎಂ ಸೋಮಶೇಖರ್ ಭಟ್ಟರ ಕಾಡುಬೆಟ್ಟಿನ ನಳಂದ ಸ್ವಗ್ರಹದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ತದನಂತರ ಬೀಡಿನ ಗುಡ್ಡೆಯಲ್ಲಿ ದಹನ ಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ
ಪೇಜಾವರ ಸ್ವಾಮೀಜಿ ಸಂತಾಪ
ಸೋಮಶೇಖರ್ ಭಟ್ ಅವರ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದು , ಅವರ ರಾಷ್ಟ್ರ ನಿಷ್ಠೆ ಮತ್ತು ರಾಮ ನಿಷ್ಠೆ ಅನುಪಮವಾದುದು . ರಾಜಕಾರಣದಲ್ಲಿ ನಿಷ್ಠೆ ಪ್ರಾಮಾಣಿಕತೆಯ ಮೌಲ್ಯವನ್ನು ಪ್ರತಿನಿಧಿಸಿದವರು, ಹಾಗೂ ಸಂಘದ ತತ್ವಗಳಿಗೆ ತಮ್ಮನ್ನು ಅರ್ಪಿಸಿಕೊಂಡವರು . ಅವರ ಆತ್ಮಕ್ಕೆ ಸದ್ಗತಿಯನ್ನು ಅಯೋಧ್ಯೆ ರಾಮನಲ್ಲಿ ಪ್ರಾರ್ಥಿಸುವುದಾಗಿ ಸಂದೇಶದಲ್ಲಿ ತಿಳಿಸಿದ್ದಾರೆ .
ಶಾಸಕ ಯಶ್ ಪಾಲ್ ಸುವರ್ಣ ಸಂತಾಪ
ನನ್ನ ಮಾರ್ಗದರ್ಶಕರೂ, ರಾಜಕೀಯ ಗುರುಗಳಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಟ್ಟಾಳು, ಉಡುಪಿ ಪುರಸಭೆಯ ಮಾಜಿ ಅಧ್ಯಕ್ಷರೂ ಭಾರತೀಯ ಜನತಾ ಪಾರ್ಟಿಯ ಹಿರಿಯ ಮುತ್ಸದ್ಧಿ ಶ್ರೀ ಎಂ. ಸೋಮ ಶೇಖರ್ ಭಟ್ ರವರು ದೈವಾಧೀನರಾಗಿರುವ ಸುದ್ದಿ ತೀವ್ರ ದುಃಖ ತಂದಿದೆ. ರಾಷ್ಟ್ರೀಯವಾದಿ ಚಿಂತನೆಯನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು, ಸಾವಿರಾರು ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿದ್ದ “ಸೋಮಣ್ಣ” ನವರ ವ್ಯಕ್ತಿತ್ವ ನಮಗೆಲ್ಲ ಸದಾ ಪ್ರೇರಣೆಯಾಗಲಿದೆ. ಅಗಲಿದ ಹಿರಿಯ ಚೇತನಕ್ಕೆ ಪರಮಾತ್ಮ ಚಿರಶಾಂತಿ ಕರುಣಿಸಲಿ ಎಂದು ಉಡುಪಿ ಶಾಸಕ ಯಶ ಪಾಲ್ ಸುವರ್ಣ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.