ಉಡುಪಿ ಬಿಷಪ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ – ದೂರು ದಾಖಲು
ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ವಿರುದ್ದ ಕೆಟ್ಟ ಭಾಷೆಯಲ್ಲಿ ನಿಂದಿಸಿರುವ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಉಡುಪಿ ಜಿಲ್ಲೆಯ ಇಡೀ ಕ್ರೈಸ್ತ ಸಮುದಾಯದ ಅತ್ಯುನ್ನತ ಧಾರ್ಮಿಕ ನಾಯಕರಾಗಿದ್ದು ಅವರಿಗೆ ಮಾಡಿರುವ ಅವಹೇಳನ ಇಡೀ ಕ್ರೈಸ್ತ ಸಮುದಾಯಕ್ಕೆ ಮಾಡಿದ ಅವಮಾನವಾಗಿರುತ್ತದೆ. ಮೋಹನ್ ಸಾಲಿಯಾನ್ ಎಂಬ ವ್ಯಕ್ತಿ ಈಗಾಗಲೇ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಎಲ್ಲಾ ಕಡೆಗಳಲ್ಲಿ ವೈರಲ್ ಆಗುತ್ತಿದ್ದು ಇದರಿಂದ ಶಾಂತಿ ಭಂಗಕ್ಕೆ ಕಾರಣವಾಗುವಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಕ್ರೈಸ್ತ ಸಮುದಾಯವು ಉಡುಪಿ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಶಾಂತಿ ಸೌಹಾರ್ದದಿಂದ ಬಾಳುತ್ತಿದ್ದು ಈ ಸೌಹಾರ್ದತೆಗೆ ಧಕ್ಕೆ ತರುವ ಕೆಲಸವನ್ನು ಕೆಲವೊಂದು ವ್ಯಕ್ತಿಗಳು ನಡೆಸುತ್ತಿರುವುದು ಖೇದಕರ ಎಂದು ತಿಳಿಸಿರುವ ಸಂಘಟನೆ ಈ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಇಡೀ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಒತ್ತಾಯಿಸಿದೆ. ಅಂತೆಯೇ ಇಂತಹ ಘಟನೆಗಳು ಮುಂದುವರೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಿಯೋಗದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ, ಕೋಶಾಧಿಕಾರಿ ಜೆರಾಲ್ಡ್ ಪಿಕೆ ಡಿಸೋಜಾ, ರೊಡ್ರಿಗಸ್, ಸಹಕಾರ್ಯದರ್ಶಿ ಗ್ರೆಗರಿ ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಉಡುಪಿ ವಲಯದ ಮಾಜಿ ಅಧ್ಯಕ್ಷೆ ಮೇರಿ ಡಿಸೋಜಾ, ಹೆನ್ರಿ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.
ಮೋಹನ್ ಸಾಲಿಯಾನ್ ಎಂಬ ವ್ಯಕ್ತಿಯ ವಿರುದ್ದ ಉಡುಪಿಯ ನಗರ ಠಾಣೆ ಹಾಗೂ ಸೆನ್ ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಿಸಲಾಗಿದೆ.