ಉಡುಪಿ:- ಭಾರತದಲ್ಲಿ ತಂಬಾಕಿನ ಬಳಕೆಯ ಶೇ.19ರಷ್ಟು ಸಿಗರೇಟ್ ರೂಪದಲ್ಲಿದ್ದರೆ, ಇದೇ ವೇಳೆ ಬೀಡಿಗಳ ರೂಪದಲ್ಲಿ ಶೇ.53ರಷ್ಟು ಧೂಮಪಾನ ಮಾಡಲಾಗುತ್ತಿದೆ. ಬೀಡಿಗಳು ಸಿಗರೇಟ್ಗಳ ಅಗ್ಗದ ಪರ್ಯಾಯವಾಗಿದೆ. ಜತೆಗೆ ಎರಡೂ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಸಾರ್ವಜನಿಕ ಆರೋಗ್ಯದ ಮೇಲೆ ಬೀಡಿಗಳು ದುಷ್ಪರಿಣಾಮ ಬೀರುತ್ತವೆ.
ಸಾರ್ವಜನಿಕವಾಗಿ ಧೂಮಪಾನ ಮುಕ್ತ ವಲಯವಾಗುವತ್ತ ಹೆಜ್ಜೆ ಇಟ್ಟಿರುವ ಉಡುಪಿಯಲ್ಲಿ ಶುಕ್ರವಾರ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ, ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರು ಬೀಡಿ ಬಳಕೆಯ ಕುರಿತ ಮಿಥ್ಯೆಗಳನ್ನು ಮುರಿದಿದ್ದಾರೆ ಮತ್ತು ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದರು.
ಈ ಉಪಕ್ರಮದ ನೇತೃತ್ವ ವಹಿಸಿರುವ ಡಾ.ವಿಜಯ ಹೆಗ್ಡೆ, ಪೆÇ್ರಫೆಸರ್ ಮತ್ತು ಮುಖ್ಯಸ್ಥರು, ಸಾರ್ವಜನಿಕ ದಂತ ಆರೋಗ್ಯ ಮತ್ತು ಅಧ್ಯಕ್ಷರು, ಟಿಐಐ ಸೆಂಟರ್, ಎ.ಜೆ.ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಮಾತನಾಡಿ, “ಬೀಡಿಗಳು ನೀಡುವ ಟಾರಿನ ಮಟ್ಟವು ಹೆಚ್ಚಿದ್ದು, ಪ್ರತಿ ಬೀಡಿಗೆ 45-50 ಎಂಜಿಯಷ್ಟಿದೆ. ಇದು ಸಿಗೇರೇಟಿಗಿಂತ ಸುಮಾರು ಐದು ಪಟ್ಟಿನಷ್ಟು ಹೆಚ್ಚು. ಅಲ್ಲದೇ ಬೀಡಿಗಳು ಸುಮಾರು ಮೂರು ಪಟ್ಟಿನಷ್ಟು ಹೆಚ್ಚಿನ ಮೊತ್ತದ ಕಾರ್ಬನ್ ಮಾನಾಕ್ಸೈಡ್ ಮತ್ತು ನಿಕೋಟಿನ್ನನ್ನು ಉತ್ಪಾದಿಸುತ್ತವೆ ಎಂದು ಅಧ್ಯಯನ ತಿಳಿಸಿದೆ. ಬೀಡಿಗಳು ಕೇವಲ ಬಳಕೆದಾರರಿಗಷ್ಟೇ ಅಲ್ಲ, ಜತೆಗೆ ಕಾರ್ಮಿಕರಿಗೂ ಹಾನಿಕಾರಕವಾಗಿದೆ. 1970ರ ದಶಕದ ವರದಿಗಳ ಪ್ರಕಾರ ಶೇ.50ರಷ್ಟು ಬೀಡಿ ಕಾರ್ಮಿಕರು ಕ್ಷಯ ಅಥವಾ ಅಸ್ತಮಾದಿಂದ ಸಾವನ್ನಪ್ಪಿದ್ದಾರೆ ಎಂಬುದು ಮಹಾರಾಷ್ಟ್ರದ ಟ್ರೇಡ್ ಯೂನಿಯನ್ ನಾಯಕರ ಕಳಕಳಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸುರೇಂದ್ರ ಚಿಂಬಾಲ್ಕರ್, ಮಾತನಾಡಿ, ಕರ್ನಾಟಕದಲ್ಲಿ ಧೂಮಪಾನಗೈಯುವ ಶೇ.11.9ರಷ್ಟು ವಯಸ್ಕರ ಪೈಕಿ ಶೇ.8.3 ರಷ್ಟು ಮಂದಿ ಬೀಡಿ ಸೇದುತ್ತಾರೆ. “ಬೀಡಿ ಸೇದುವುದು ಶ್ವಾಸಕೋಶಕ್ಕೆ ತ್ರಾಸದಾಯಕ. ಯಾಕೆಂದರೆ, ಅದರಲ್ಲಿ ಬಳಸುವ ತೆಂಡು ಎಲೆಗಳ ನಿಧಾನ ಉರಿಯುವ ಹಾಗೂ ರಂಧ್ರರಹಿತ ಸ್ವಭಾವದಿಂದಾಗಿ ಬೀಡಿ ಉರಿಯುತ್ತಿರಲು ಅದನ್ನು ಆಳವಾಗಿ ಮತ್ತು ಆಗಾಗ್ಗೆ ಸೇದಬೇಕಾಗುತ್ತದೆ” ಎಂದು ಅವರು ವಿವರಿಸಿದರು.
ಸಮಸ್ಯೆಯನ್ನು ವಿವರಿಸಿದ ಡಾ.ಶುಭನ್ ಆಳ್ವ, ಅಧ್ಯಕ್ಷರು-ಎಲೆಕ್ಟ್, ಇಂಡಿಯನ್ ಡೆಂಟಲ್ ಅಸೋಸಿಯೇಶನ್, ಕರ್ನಾಟಕ ರಾಜ್ಯ ಶಾಖೆ ಹಾಗೂ ಉಪಾಧ್ಯಕ್ಷರು, ಟಿಐಐ ಸೆಂಟರ್, ಎ.ಜೆ.ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಈ ಸಮಸ್ಯೆಯನ್ನು ನಿಯಂತ್ರಿಸಲು ತಂಬಾಕು ನಿಯಂತ್ರಣ ಕ್ರಮಗಳು ಜಾರಿಯಲ್ಲಿವೆ. ಈಗ ಸಮೂಹದಲ್ಲಿ ಹೆಚ್ಚಿನ ಜಾಗೃತಿಯ ಅಗತ್ಯವಾಗಿದೆ ಎಂದರು.
ಡಾ.ಜಾನ್ ಕೆನಡಿ, ಸಲಹಾ ಅಧಿಕಾರಿ, ಸಾರ್ವಜನಿಕ ಆರೋಗ್ಯ ಸಂಸ್ಥೆ, ಮಾತನಾಡಿ, “ಕರ್ನಾಟಕದಲ್ಲಿ 2011ನೇ ಇಸವಿಯಲ್ಲಿ ಧೂಮಪಾನ ಸಂಬಂಧಿ ಕಾಯಿಲೆಯ ವೆಚ್ಚವು 702.5 ಕೋಟಿ ರೂ. ಆಗಿತ್ತು. ಇದೇ ವೇಳೆ, ಧೂಮಪಾನೇತರ ತಂಬಾಕು ಸಂಬಂಧಿ ಕಾಯಿಲೆಯ ವೆಚ್ಚ 280.4 ಕೋಟಿ ರೂ. ಆಗಿತ್ತು. ಇದು ಸರ್ಕಾರ ಹಾಗೂ ವೈಯಕ್ತಿಕವಾಗಿ ಈ ಕಾಯಿಲೆಗಳಿಂದಾಗುವ ಹೊರೆಯಾಗಿದೆ” ಎಂದು ಹೇಳುವ ಮೂಲಕ ಅವರು ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರು.