Home Mangalorean News Kannada News ಉಡುಪಿ: ಮತದಾನದ ಮಹತ್ವ ಸಾರಿದ ಯಕ್ಷಗಾನ

ಉಡುಪಿ: ಮತದಾನದ ಮಹತ್ವ ಸಾರಿದ ಯಕ್ಷಗಾನ

Spread the love

ಉಡುಪಿ: ಮತದಾನದ ಮಹತ್ವ ಸಾರಿದ ಯಕ್ಷಗಾನ

ಉಡುಪಿ: ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಮಹತ್ವವನ್ನು ಸಾರುವ ಯಕ್ಷಗಾನ ಹಾಗೂ ಚಿತ್ರಕಲಾ ಪ್ರದರ್ಶನ ಗುರುವಾರ ಉಡುಪಿ ನಿರ್ಮಿತಿ ಕೇಂದ್ರದ ಆವರಣದಲ್ಲಿ ನಡೆಯಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪದ್ಧತಿಯಿಂದ ಪ್ರಜಾಡಳಿತ ಜಾರಿಗೆ ಬಂದು, ಜನಪ್ರತಿನಿಧಿಗಳ ಪಾತ್ರ ಹಾಗೂ ಅವರ ಆಯ್ಕೆಯಲ್ಲಿ ಮತದಾರರು ವಹಿಸಬೇಕಾದ ಜಾಗರೂಕತೆ, ಹಣ ಆಮಿಷಕ್ಕೊಳಗಾಗಿ ಮತದಾನ ಮಾಡುವುದರ ಕೆಡುಕುಗಳು, ಚುನಾವಣೆ ಪ್ರಕ್ರಿಯೆಯಲ್ಲಿ ಜನಸಮಾನ್ಯರ ಪಾತ್ರ ಮತ್ತಿತರ ವಿಷಯಗಳ ಬಗ್ಗೆ ಕೋಟ ಕಲಾಪೀಠ ತಂಡದವರು ಯಕ್ಷಗಾನದ ಮೂಲಕ ಬಹಳ ಮನಮೋಹಕವಾಗಿ ನಡೆಸಿದರು. ನಿರ್ಮಿತಿ ಕೇಂದ್ರದ ಬಯಲು ವೇದಿಕೆಯಲ್ಲಿ ನಡೆದ ಈ ಯಕ್ಷಗಾನ ಕಾರ್ಯಕ್ರಮ ನೋಡುಗರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಇದೇ ಸಂದರ್ಭದಲ್ಲಿ ಮತದಾನದ ಮಹತ್ವ ಸಾರುವ ಚಿತ್ರಕಲೆಗಳ ಪ್ರದರ್ಶನವೂ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಚುನಾವಣಾ ವೆಚ್ಚ ನೋಡಲ್ ಅಧಿಕಾರಿ ಸಚಿನ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ನಿರೂಪಿಸಿದರು.


Spread the love

Exit mobile version