Home Mangalorean News Kannada News ಉಡುಪಿ: ಮಲ್ಪೆ- ಪರ್ಕಳ ರಸ್ತೆಯಲ್ಲಿ ಗುಂಡಿ ಆಡಳಿತ ಪ್ರತಿಪಕ್ಷದ ನಡುವೆ ನಗರಸಭೆಯ ಸಭೆಯಲ್ಲಿ ಗದ್ದಲ

ಉಡುಪಿ: ಮಲ್ಪೆ- ಪರ್ಕಳ ರಸ್ತೆಯಲ್ಲಿ ಗುಂಡಿ ಆಡಳಿತ ಪ್ರತಿಪಕ್ಷದ ನಡುವೆ ನಗರಸಭೆಯ ಸಭೆಯಲ್ಲಿ ಗದ್ದಲ

Spread the love

ಉಡುಪಿ: ಮಲ್ಪೆ-ಪರ್ಕಳ ರಸ್ತೆ ಮುಖ್ಯರಸ್ತೆಯಲ್ಲಿ ಹೊಂಡ ಗುಂಡಿಗುಂಡಿಗಳಾಗಿದ್ದು, ಗುಂಡಿಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ನೀಡಿ 20ದಿನಗಳಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯ ಗುಂಡಿ ಮುಚ್ಚುವ ಕೆಲಸ ಆರಂಭಿಸಿಲ್ಲ ಎಂದು ಆರೋಪಿಸಿ ಸೋಮವಾರ ನಡೆದ ನಗರಸಭಾ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ಪ್ರತಿ ಪಕ್ಷದ ಸದಸ್ಯರ ನಡುವೆ ಗದ್ದಲವೇರ್ಪಟ್ಟಿತು.

CMCUdupi_Generalmeeting 31-08-2014 10-49-31

ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ನಗರಸಭೆ ಆಡಳಿತ ಪಕ್ಷದ ಸದಸ್ಯ, ರಮೇಶ್ ಕಾಂಚನ್ ರಸ್ತೆಯಲ್ಲಿ ಹೊಂಡಗಳಾಗಿರುವುದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದೆ. ಕೂಡಲೇ ರಸ್ತೆಗೆ ತೇಪೆ ಹಾಕುವ ಕಾರ್ಯವನ್ನಾದರೂ ಆರಂಭಿಸಬೇಕು ಎಂದು ಆಗ್ರಹಿಸಿದ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಎನ್‍ಎಚ್‍ಎ ಅಧಿಕಾರಿ ಮಂಜುನಾಥ್,  2014ರ ಫೆಬ್ರವರಿಯಲ್ಲಿ ರಸ್ತೆ ಎನ್‍ಎಚ್‍ಎ ಹಸ್ತಾಂತರಗೊಂಡು ಎನ್‍ಎಚ್169ಎ ಎಂದು ಡಿಕ್ಲೇರ್ ಮಾಡಲಾಗಿದೆ. ರಸ್ತೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಆದ್ದರಿಂದ ಡಾಮರೀಕರಣ ಮಾಡಲು ಸಾಧ್ಯವಿಲ್ಲ. ವಾರದಲ್ಲಿ ಹೊಂಡಮುಚ್ಚುವ ಕಾಮಗಾರಿ ನಡೆಸಲಾಗುತ್ತದೆ ಎಂದರು.

ಚರ್ಚೆಯ ವೇಳೆ ನಗರಸಭೆ ಕಮಿಷನರ್ ಮಂಜುನಾಥಯ್ಯ ರಸ್ತೆ ಸರಿ ಮಾಡಬೇಕೆಂದು ಆಗ್ರಹಿಸಿ ಪ್ರತಿನಿತ್ಯ ನೂರಾರು ಕರೆಗಳು ಬರುತ್ತವೆ. ಗುಂಡಿ ಮುಚ್ಚದಿದ್ದರೆ ಮಲ್ಪೆಯಿಂದ ಪರ್ಕಳ ವರೆಗೆ ಅಲ್ಲಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಎಂದು ಬೋರ್ಡ್ ಹಾಕಿ ಪ್ರಾಧಿಕಾರದ ನಂಬರ್ ಹಾಕಬೇಕು ಎಂದರು. ಇದು ವಿರೋಧ ಪಕ್ಷದ ಸದಸ್ಯರನ್ನು ಕೆರಳಿಸಿತು. ಬಿಜೆಪಿ ಸದಸ್ಯರು ನಗರಸಭೆಯ ವ್ಯಾಪ್ತಿಯಲ್ಲಿಯೂ ಹಲವು ರಸ್ತೆಗಳು ಸರಿಯಿಲ್ಲ. ಅಲ್ಲಿಯೂ ನಗರಸಭೆಯ ನಂಬರ್ ಬರೆಯುತ್ತೀರಾ ಎಂದು ಪ್ರಶ್ನಿಸಿದರು. ಹಾಗೆ ಮಾಡಿದರೆ ಅದು ರಾಜಕೀಯಕ್ಕೆ ಕಾರಣವಾಗುತ್ತದೆ. ಕೇಂದ್ರ ಹಾಗೂ ರಾಜ್ಯಎಂದಾಗುತ್ತದೆ ಎಂದರು.

ಇದಕ್ಕೆ ಸ್ಪಷ್ಟಣೆ ನೀಡಿದ ಪೌರಾಯುಕ್ತ  ರಾಜಕೀಯ ಉದ್ದೇಶದಿಂದ ಈ ಮಾತನ್ನು ಹೇಳಿಲ್ಲ. ಇಲ್ಲಿಯ ವರೆಗೆ ರಸ್ತೆ ನಗರಸಭೆಯ ಅಧೀನದಲ್ಲಿತ್ತು. ಇದೀಗ ಹೆದ್ದಾರಿ ಪ್ರಾಧಿಕಾರಕ್ಕೆ ಹೋಗಿದೆ. ಆದರೂ ಜನ ಇನ್ನೂ ನಗರಸಭೆಯೇ ರಸ್ತೆ ರಿಪೇರಿ ಮಾಡಬೇಕು ಎಂದು ತಿಳಿದುಕೊಂಡಿದ್ದಾರೆ. ರಸ್ತೆ ರಿಪೇರಿಯಾಗಬೇಕು ಎಂಬುದಷ್ಟೇ ಉದ್ದೇಶ,  ಪ್ರತಿನಿತ್ಯ ಕರೆಗಳು ಬರುತ್ತಿರುವುದರಿಂದ ಆ ರೀತಿ ಹೇಳಿದೆ ಎಂದರು.

ಮಲ್ಪೆಯಿಂದ ಪರ್ಕಳ ವರೆಗೆ ರಸ್ತೆ ಹಾಳಾಗಿರುವಲ್ಲಿ ವಾರದೊಳಗೆ ಟೆಂಡರ್ ಕರೆದು ಕಾಮಗಾರಿ ಮಾಡಿಸುವುದದಾಗಿ ಎನ್‍ಎಚ್‍ಎ ಅಧಿಕಾರಿ ಸಭೆಯಲ್ಲಿ ತಿಳಿಸಿದರು. ಟೆಂಡರ್ ಪ್ರಕ್ರಿಯೆಗೆ ಕಾಲಾವಕಾಶ ಬೇಕಾಗಿರುವುದು ಒಂದು ವಾರದಲ್ಲಿ ಕಾಮಗಾರಿ ಆರಂಭವಾಗುತ್ತದೆ ಎಂದರು. ಕಾಮಗಾರಿ ಆರಂಭವಾಗದಿದ್ದರೆ ವಾರದ ಬಳಿಕ ಪ್ರತಿಭಟನೆ ನಡೆಸುವುದಾಗಿ ಸದಸ್ಯ ರಮೇಶ್ ಕಾಂಚನ್ ಎಚ್ಚರಿಸಿದರು.

ಚರ್ಚೆಯ ಒಂದು ಹಂತದಲ್ಲಿ ಆಡಳಿತ ಪಕ್ಷದ ಸದಸ್ಯ ರಮೇಶ್ ಕಾಂಚನ್ ಅವರು, ಎನ್‍ಎಚ್‍ಎ ಅಧಿಕಾರಿಯನ್ನು ಕುರಿತು ರಸ್ತೆಯಲ್ಲಿ ಹೊಂಡಬಿದ್ದು, ಪ್ರತಿನಿತ್ಯ ಅಪಘಾತವಾಗುತ್ತಿದ್ದರೂ ನಿವೇನು ನಿದ್ದೆ ಮಾಡ್ತಿದ್ದೀರಾ? ಕಣ್ಣುಕಾಣಿಸುತ್ತಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಆಡಳಿತ ಪಕ್ಷದವರು ಅಧಿಕಾರಿಯನ್ನು ಸಭೆಗೆ ಕರೆದು ಈ ರೀತಿಯೆಲ್ಲ ಅವಮಾನ ಮಾಡುವುದು ಸರಿಯಲ್ಲ ಎಂದರು. ಕೊನೆಗೆ ಬೇರೆ ವಿಚಾರ ಪ್ರಸ್ತಾಪವಾಗಿ ಇದು ತಣ್ಣಗಾಯಿತು.

ಕಲ್ಸಂಕ ರಸ್ತೆಯಲ್ಲಿ ವಾಸ್ತವ್ಯದ ಮನೆಯಲ್ಲಿ 3 ಮದುವೆ ಹಾಲ್‍ಗಳಿದ್ದು, ಪಾರ್ಕಿಂಕ್ ವ್ಯವಸ್ಥೆಯಿಲ್ಲದೆ ಸಮಾರಂಭ ನಡೆಯುವಾಗ ಅಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಅಪಘಾತಗಳು ಉಂಟಾಗುತ್ತಿವೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಪಕ್ಷದ ಸದಸ್ಯ ಶಶಿರಾಜ್ ಕುಂದರ್ ಆಗ್ರಹಿಸಿದರು.  ಉತ್ತರಿಸಿದ ಕಮಿಷನರ್ ಈ ಬಗ್ಗೆ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ನೋಟಿಸ್ ನೀಡಲಾಗಿದೆ ಎಂದರು.

ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷೆ ಅಮೃತಾಕೃಷ್ಣಮೂರ್ತಿ, ಕಮಿಷನರ್ ಡಿ.ಮಂಜುನಾಥಯ್ಯ, ವಿರೋಧ ಪಕ್ಷದ ನಾಯಕ ಡಾ. ಎಂ. ಆರ್.ಪೈ ಉಪಸ್ಥಿತರಿದ್ದರು.


Spread the love

Exit mobile version