ಉಡುಪಿ: ಮಾನವ ಹಕ್ಕುಗಳ ಬಗ್ಗೆ ಶಾಲಾ ಮಟ್ಟದಲ್ಲಿಯೇ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಹುಟ್ಟಿನಿಂದಲೇ ಹಕ್ಕುಗಳು ಬರುವುದರಿಂದ ಶಾಲೆಯಿಂದಲೇ ಅರಿವು ಮೂಡಿಸಿದರೆ ಗೌರವದ ಜೀವನ ನಡೆಸಲು ಸಾಧ್ಯವಾಗುತ್ತದೆ. ಶೋಷಣೆಗೆ ಒಳಗಾದವರು ತಮ್ಮ ಹಕ್ಕುಗಳನ್ನು ಪಡೆಯಲು ಏನು ಮಾಡಬೇಕು ಎನ್ನುವುದನ್ನು ಅರಿಯಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಹೇಳಿದರು.
ಉಡುಪಿ ಜಿಲ್ಲಾ ಭಾರತೀಯ ಮಾನವ ಹಕ್ಕುಗಳ ಸಮಿತಿ ವತಿಯಿಂದ ಶುಕ್ರವಾರ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ `ಮಾನವ ಹಕ್ಕುಗಳ ಮಾಹಿತಿ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರ ವಿದ್ಯಾಭ್ಯಾಸದಲ್ಲಿ ದ.ಕ. ಉಡುಪಿ ಜಿಲ್ಲೆಗಳು ರಾಜ್ಯದಲ್ಲೇ ಮೊದಲ ಸ್ಥಾನವನ್ನು ಪಡೆದಿದೆ. ಆದರೆ ಜಿಲ್ಲೆಯನ್ನು ಕೋಮುಗಲಭೆಗಳೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ವಿದ್ಯಾವಂತರಾದ ಮೇಲೆ ಎಲ್ಲರೂ ಒಟ್ಟಾಗಿ ಬಾಳುವ ವಾತಾವರಣ ನಿರ್ಮಾಣ ಮಾಡಬೇಕು. ವಿದ್ಯೆ ಕಡಿಮೆಯಿದ್ದಾಗ ಅಲ್ಲಿ, ಮೂಢನಂಬಿಕೆ ಕಂದಾಚಾರಗಳು ಕಾಣಿಸಿಕೊಳ್ಳುತ್ತದೆ. ಆದರೆ ವಿದ್ಯಾವಂತರಲ್ಲಿ ಅಂತಹ ಗುಣಗಳು ಕಾಣಿಸಬಾರದು ಎಂದರು.
ಮಹಿಳೆಯವರು, ಮಕ್ಕಳು, ಅಂಗವಿಕಲರು, ಲಿಂಗತ್ವ ಅಲ್ಪಸಖ್ಯಾಂತರು ಎಲ್ಲರಿಗೂ ಮಾನವ ಹಕ್ಕುಗಳಿವೆ. ಆದರೆ ಅವುಗಳು ಪಾಲನೆಯಾಗುತ್ತಿದೆಯೇ ಎಂಬುದು ಪ್ರಶ್ನೆಯಾಗಿದೆ. ಶೇ. 50ರಷ್ಟು ಹೆಣ್ಮಕ್ಕಳಿಗೆ ಸಾಮಾಜಿಕ ನ್ಯಾಯ ಇನ್ನೂ ಸಿಕ್ಕಿಲ್ಲ. ಎರಡನೇ ದೆರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತಿದೆ. ಶಿಕ್ಷಣ ಹಕ್ಕಿನಿಂದ ಕೆಲವೊಂದು ಮಕ್ಕಳನ್ನು ಹೆತ್ತವರೇ ದೂರ ಮಾಡುತ್ತಿದ್ದಾರೆ.ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಶೇ.3ರಷ್ಟು ಮೀಸಲಾತಿಯಿದೆ. ಆದರೆ ಎಷ್ಟು ಜನ ಅದರಿಂದ ಪ್ರಯೋಜನ ಪಡೆದಿದ್ದಾರೆ ಎಂದು ಪ್ರಶ್ನಿಸಿದರು.
ಭಾರತೀಯ ಮಾನವ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಇನ್ನಾ ಅಧ್ಯಕ್ಷತೆ ವಹಿಸಿದ್ದರು.
ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಸಂತೋಷ್ ಕುಮಾರ್, ಉಡುಪಿ ತಹಶೀಲ್ದಾರ್ ಗುರುಪ್ರಸಾದ್, ಭಾರತೀಯ ಮಾನವ ಹಕ್ಕುಗಳ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ರಾಬರ್ಟ್ ಡಿ’ಸೋಜಾ, ರಾಜ್ಯಾಧ್ಯಕ್ಷ ಶ್ರೀನಿವಾಸ ಗೌಡ, ಲಯನ್ಸ್ ಜಿಲ್ಲಾ ಗವರ್ನರ್ ಶ್ರೀಧರ ಶೇಣವ, ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಕಣಿವೆ, ಹಾಸನ ಜಿಲ್ಲಾಧ್ಯಕ್ಷ ಜಿ.ಎನ್. ದಯಾನಂದ, ಪದಾಧಿಕಾರಿಗಳಾದ ಜಯಕರ ಶೆಟ್ಟಿ ಇಂದ್ರಾಳಿ, ಬಿ.ಜಿ. ಲಕ್ಷ್ಮೀಕಾಂತ ಬೆಸ್ಕೂರ್, ರತ್ನಾಕರ ಇಂದ್ರಾಳಿ, ಮನೋಹರ ಶೆಟ್ಟಿ ತೋನ್ಸೆ, ಚಂದ್ರಿಕಾ ಶೆಟ್ಟಿ ಉಪಸ್ಥಿತರಿದ್ದರು.