ಉಡುಪಿ, ಮೇ 08 (ಕರ್ನಾಟಕ ವಾರ್ತೆ):- ಉಡುಪಿ ಜಿಲ್ಲೆಯ 155 ಗ್ರಾಮಪಂಚಾಯತಿಗಳಿಗೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ 29.5.15ರಂದು ಉಡುಪಿಯಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯನ್ನು ಮುಕ್ತ, ಶಾಂತಿ ಮತ್ತು ನ್ಯಾಯಯುತವಾಗಿ ನಡೆಸಿ ಎಂದು ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಅಧಿಕಾರಿಗಳಿಗೆ ಆಯೋಜಿಸಿದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮಪಂಚಾಯಿತಿಗಳಿಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಈಗಾಗಲೇ ಘೋಷಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆ ನಡೆಸಬೇಕಾದ ಹೊಣೆಯರಿತು ಕರ್ತವ್ಯ ನಿರ್ವಹಿಸಿ ಎಂದರು.
ಜಿಲ್ಲಾಧಿಕಾರಿಗಳು 11.5.15ರಂದು ಚುನಾವಣಾ ಅಧಿಸೂಚನೆ ಹೊರಡಿಸುವರು. ಮೇ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಮೇ 19 ನಾಮಪತ್ರ ಪರಿಶೀಲನೆ. ಮೇ 21 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನ. ಮತದಾನ 29ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 7,38,608 ಮತದಾರರಿದ್ದು, ಪುರುಷ ಮತದಾರರು 353190, ಮಹಿಳಾ ಮತದಾರರು 385418. ಸೇವಾ ಮತದಾರರು 367.
ವರ್ಗವಾರು ಮೀಸಲಾತಿ- ಒಟ್ಟು ಸದಸ್ಯ ಸ್ಥಾನಗಳು 2398. ಸಾಮಾನ್ಯ 1161, ಮಹಿಳೆ 1237.
ಅನುಸೂಚಿತ ಜಾತಿಗೆ ಮೀಸಲಿಟ್ಟಿರುವ 186 ಸ್ಥಾನಗಳಲ್ಲಿ 159 ಮಹಿಳೆಗೆ ಮೀಸಲಾಗಿದ್ದರೆ ಉಳಿದ 27 ಸ್ಥಾನಗಳಿಗೆ ಅನುಸೂಚಿತ ಜಾತಿಯ ಮಹಿಳೆ ಮತ್ತು ಪುರುಷರು ಸ್ಪರ್ಧಿಸಬಹುದು.
ಅನುಸೂಚಿತ ಪಂಗಡಕ್ಕೆ ಮೀಸಲಿಟ್ಟಿರುವ 197 ಸ್ಥಾನಗಳಲ್ಲಿ, 166 ಮಹಿಳೆಗೆ ಮೀಸಲಾಗಿದ್ದರೆ ಉಳಿದ 31 ಸ್ಥಾನಗಳಿಗೆ ಅನುಸೂಚಿತ ಪಂಗಡದ ಮಹಿಳೆ ಮತ್ತು ಪುರುಷರು ಸ್ಪರ್ಧಿಸಬಹುದು.
ಹಿಂದುಳಿದ ’ಅ’ ವರ್ಗಕ್ಕೆ ಮೀಸಲಿಟ್ಟಿರುವ 582 ಸ್ಥಾನಗಳಲ್ಲಿ ಮಹಿಳೆಗೆ 323 ಮೀಸಲಾಗಿದ್ದರೆ ಉಳಿದ 259 ಸ್ಥಾನಗಳಿಗೆ ಹಿಂದುಳಿದ ’ಅ’ ವರ್ಗದ ಮಹಿಳೆ ಮತ್ತು ಪುರುಷರು ಸ್ಪರ್ಧಿಸಬಹುದು.
ಹಿಂದುಳಿದ ’ಬ’ ವರ್ಗಕ್ಕೆ ಮೀಸಲಿಟ್ಟಿರುವ 145 ಸ್ಥಾನಗಳಲ್ಲಿ ಮಹಿಳೆಗೆ 79 ಮೀಸಲಾಗಿದ್ದರೆ ಉಳಿದ 66 ಸ್ಥಾನಗಳಿಗೆ ಹಿಂದುಳಿದ ’ಬ’ ವರ್ಗದ ಮಹಿಳೆ ಮತ್ತು ಪುರುಷರು ಸ್ಪರ್ಧಿಸಬಹುದು.
ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿರುವ 1288 ಸ್ಥಾನಗಳಲ್ಲಿ ಮಹಿಳೆಗೆ 510 ಮೀಸಲಾಗಿದ್ದರೆ ಉಳಿದ 778 ಸ್ಥಾನಗಳಿಗೆ ಸಾಮಾನ್ಯ ವರ್ಗದ ಮಹಿಳೆ ಮತ್ತು ಪುರುಷರು ಸ್ಪರ್ಧಿಸಬಹುದು.
155 ಗ್ರಾಮಪಂಚಾಯಿತಿಗಳಲ್ಲಿ ನಡೆಯುವ ಚುನಾವಣೆಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ರಿಟರ್ನಿಂಗ್ ಅಧಿಕಾರಿಗಳ ಸಂಖ್ಯೆ ಕುಂದಾಪರ 62, ಉಡುಪಿ 59, ಕಾರ್ಕಳ 34. ಸಹಾಯಕ ರಿಟರ್ನಿಂಗ್ ಅಧಿಕಾರಿಗಳ ಸಂಖ್ಯೆ 171. ಕುಂದಾಪುರ 67, ಉಡುಪಿ 68, ಕಾರ್ಕಳ 36. ಒಟ್ಟು ಮತಗಟ್ಟೆಗಳು 907. ಮತಗಟ್ಟೆಗೆ ಅತ್ಯವಿರುವ ಒಟ್ಟು ಸಿಬ್ಬಂದಿಗಳು 4989. ಮತಪೆಟ್ಟಿಗೆಗಳನ್ನು ಈಗಾಗಲೇ ಸಜ್ಜು ಮಾಡಲಾಗಿದೆ ಚುನಾವಣೆಗೆ ಅಗತ್ಯವಿರುವ ಸಾಮಗ್ರಿಗಳನ್ನು ತಹಸೀಲ್ದಾರ್ ಹಂತದಲ್ಲೇ ಅನುಮೋದಿನ ದರಪಟ್ಟಿಯಂತೆ ಅವಶ್ಯಕತೆಗನುಗುಣವಾಗಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಹಸೀಲ್ದಾರ್, ಡಿವೈಎಸ್ ಪಿ, ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು. ಫ್ಲೈಯಿಂಗ್ ಸ್ಕ್ವಾಡ್ ಗಳನ್ನು ಸಿದ್ಧವಾಗಿರಿಸಿ. ಯಾವುದೇ ದೂರುಗಳು ಬಂದರೂ ನಿರ್ವಹಿಸಲು ಆಡಳಿತಯಂತ್ರ ಸನ್ನದ್ಧವಾಗಿರಬೇಕೆಂದರು.
ಅಬಕಾರಿ ಇಲಾಖೆ ಪೊಲೀಸ್ ಮತ್ತು ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಚೆಕ್ಪೋಸ್ಟ್ ಗಳನ್ನು ನಿರ್ಮಿಸಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮೇ 10 ರಿಂದ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಮೇ 7ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದು. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಜನಪ್ರತಿನಿಧಿಗಳಿಗೆ ನೀಡಿರುವ ಸರಕಾರಿ ವಾಹನಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿ. ಸ್ಥಳೀಯ ಜನಪ್ರತಿನಿಧಿಗಳಿಗೆ ನೀಡಿರುವ ವಾಹನಗಳನ್ನು ಹಿಂಪಡೆಯಿರಿ.
ಅಧಿಕಾರಿಗಳು ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸಿ, ಪೂರಕ ಮಾಹಿತಿಗಳನ್ನು ನೀಡಿ. ಕಾನೂನು ಉಲ್ಲಂಘಿಸಿದರೆ ಲಿಖಿತ ದೂರನ್ನು ನೀಡಿ. ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಪರಿಶೀಲಿಸಿ ಎಂದರು. ವಾಹನಗಳ ಬೇಡಿಕೆ ಪೂರೈಕೆಗೆ ತಹಸೀಲ್ದಾರರಿಂದ ಬೇಡಿಕೆ ಕ್ರೂಢೀಕರಿಸಿ ಸಲ್ಲಿಸಲು ಸೂಚಿಸಲಾಗಿದೆ. ಮತದಾನದ ದಿನದಂದು ಸಂತೆ, ಜಾತ್ರೆಗಳನ್ನು ನಿರ್ಬಂಧಿಸಲು ಆದೇಶ ಹೊರಡಿಸಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು, ಬಂದೋಬಸ್ತ್ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು. ಒಟ್ಟು 907 ಮತಗಟ್ಟೆಗಳಲ್ಲಿ 131 ಮತಗಟ್ಟೆಗಳನ್ನು ಸೂಕ್ಷ್ಮ, 59 ಮತಗಟ್ಟೆಗಳನ್ನು ಅತಿಸೂಕ್ಷ್ಮ, 54 ಮತಗಟ್ಟೆಗಳನ್ನು ನಕ್ಸಲ್ ಬಾಧಿತ ಎಂದು ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖಾಧಿಕಾರಿಗಳು ನೀಡಿದ ಮಾಹಿತಿಯಂತೆ ಗುರುತಿಸಲಾಗಿದೆ ಎಂದರು. 663 ಮತಗಟ್ಟೆಗಳು ಸಾಮಾನ್ಯ ಎಂದು ಗುರುತಿಸಲಾಗಿದೆ ಎಂದರು. ಸಿಇಒ ಕನಗವಲ್ಲಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಚುನಾವಣಾ ವೀಕ್ಷಕರ ನೇಮಕಾತಿ: ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಕೆ ಎಂ ಆಶಾ ಸಹಕಾರ ಸಂಘಗಳ ಜಂಟಿ ನಿಬಂಧಕರು ಮೈಸೂರು ಪ್ರಾಂತ ಇವರನ್ನು ಚುನಾವಣಾ ವೀಕ್ಷಕರಾಗಿ ನೇಮಕ ಮಾಡಲಾಗಿದೆ.