ಉಡುಪಿ: ಮೋದಿ ಸರಕಾರದಿಂದ ನಾಗರಿಕ ಹೋರಾಟಗಳ ದಮನ: ಕೋಸೌವೇ ಪ್ರತಿಭಟನೆಯಲ್ಲಿ ಜಿ.ರಾಜಶೇಖರ್

Spread the love

ಉಡುಪಿ: ಕೇಂದ್ರದ ನರೇಂದ್ರ ಮೋದಿ ಸರಕಾರ ನಾಗರಿಕ ಹೋರಾಟಗಳನ್ನು ದಮನಿಸುವ ಕೆಲಸಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿದೆ ಎಂದು ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ್ಯ ಜಿ ರಾಜಶೇಖರ್ ಆರೋಪಿಸಿದ್ದಾರೆ.

komu komu1 komu2 komu3

ಅವರು ಶುಕ್ರವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್ ಎದುರು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ನರೇಂದ್ರ ಮೋದಿ ಸರಕಾರ ಕೇವಲ ಜನಪರವಾಗಿ ಹೋರಾಟ ಮಾಡುತ್ತಿರುವವರನ್ನು ಮಾತ್ರವಲ್ಲ, ಕಾನೂನು ರೀತಿ ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧವೂ ಆಕ್ರಮಣ ಮಾಡು ತ್ತಿದೆ. ಇದಕ್ಕೆ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಗಳ ವಿರುದ್ಧ ವಾದಿಸುತ್ತಿರುವ ಎಸ್‍ಪಿಪಿ ರೋಹಿಣಿ ಸಾಲ್ಯಾನ್ ಮೇಲೆ ತರುತ್ತಿರುವ ಒತ್ತಡವೇ ನಿದರ್ಶನ ಎಂದು ಆರೋಪಿಸಿದರು.

ದೆಹಲಿ ವಿವಿಯ ಆಂಗ್ಲ ಪ್ರಾಧ್ಯಾಪಕ ಸಾಯಿಬಾಬರು ಮಾನವ ಹಕ್ಕುಗಳ ಪರ ಎತ್ತಿರುವ ಧ್ವನಿಯನ್ನು ಅಡಗಿಸಲು ನಕ್ಸಲ್ ಜೊತೆ ಸೇರಿ ಸಂಚು ಹೂಡಿ ರುವುದಾಗಿ ಆರೋಪಿಸಿ ಅವರನ್ನು ಬಂಧಿಸಿರುವ ಕ್ರಮ ಖಂಡನೀಯ. ಒಂದು ವರ್ಷಗಳ ಕಾಲ ಜೈಲಿನಲ್ಲಿಟ್ಟು ಇದೀಗ ಇವರಿಗೆ ತಾತ್ಕಾಲಿಕ ಜಾಮೀನು ನೀಡಿದೆ. ಅದೇ ಹೈಕೋರ್ಟ್ ಜನರ ಸಾವಿಗೆ ಕಾರಣರಾದ ಚಲನಚಿತ್ರ ನಟ ಸಲ್ಮಾನ್ ಖಾನ್‍ಗೆ ಒಂದೇ ದಿನದಲ್ಲೇ ಜಾಮೀನು ನೀಡುತ್ತದೆ. ಇದು ನಮ್ಮ ವ್ಯವಸ್ಥೆಯ ವಿಪರ್ಯಾಸ ಎಂದು ಜಿ. ರಾಜಶೇಖರ್ ಟೀಕಿಸಿದರು.

ವೇದಿಕೆಯ ಉಪಾಧ್ಯಕ್ಷ ಪ್ರೊ ಫಣಿರಾಜ್ ಮಾತನಾಡಿ, ಗುಜರಾತ್ ಹತ್ಯಾ ಕಾಂಡದ ಸಂತ್ರಸ್ಥರ ಪರ ಕಾರ್ಯನಿರ್ವಹಿಸುತ್ತಿರುವ ಟೀಸ್ತಾ ಸೆಟಲ್ವಾಡರಿಗೆ ಸರಕಾರವು ಸಿಬಿಐ ತನಿಖೆ ಮೂಲಕ ಕಿರುಕುಳ ನೀಡುತ್ತಿದ್ದು, ಅವರ ಎಲ್ಲ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗಿದೆ. ಇದರಿಂದ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಹಲವು ಪ್ರಕರಣಗಳ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ನಡೆಸದಂತೆ ಅವರ ಕೈಕಟ್ಟಿ ಹಾಕಲಾಗಿದೆ ಎಂದರು.

ಕೇವಲ ಒಂದೇ ವರ್ಷದಲ್ಲಿ ನರೇಂದ್ರ ಮೋದಿ ಎಂಬ ಸೆಲ್ಫಿ ಸರಕಾರವು ದೇಶದಲ್ಲಿ ತುರ್ತು ಪರಿಸ್ಥಿತಿಗಿಂತ ಕೆಟ್ಟದಾದ ಸ್ಥಿತಿಯನ್ನು ಇಂದು ನಿರ್ಮಿಸಿದೆ. ನಾಗರಿಕ ಹೋರಾಟಗಳನ್ನು ಇಲ್ಲಂದತೆ ಮಾಡುವ ಹುನ್ನಾರವನ್ನು ಸರಕಾರ ನಡೆಸುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡ ಜಯನ್ ಮಲ್ಪೆ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಪ್ರೋ. ಸಿರಿಲ್ ಮಥಾಯಸ್, ಜಮಾಅತೆ ಇಸ್ಲಾಮೀ ಹಿಂದ್‍ನ ಇದ್ರೀಸ್ ಹೂಡೆ, ಹುಸೇನ್ ಕೊಡಿಬೇಂಗ್ರೆ, ಇಫ್ತಿಕಾರ್ ಮೊದಲಾದವರು ಉಪಸ್ಥಿತರಿದ್ದರು.


Spread the love