ಉಡುಪಿ: ಇಲ್ಲಿನ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಚಾಲನೆ ಹಾಗೂ ನೂತನ ಭೋಜನ ಶಾಲೆಯ ಉದ್ಘಾಟನೆ ಸೋಮವಾರ ಜರುಗಿತು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಿ ವಿನ್ಸೆಂಟ್ ಡಯಾಸ್ ನೂತನ ಭೋಜನ ಶಾಲೆಯನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಮೌಂಟ್ ರೋಸರಿ ಚರ್ಚಿನ ನೂತನ ಸಹಾಯಕ ಧರ್ಮಗುರು ಹಾಗೂ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂ ಮಹೇಶ್ ಡಿ’ಸೋಜಾ ನೂತನ ಭೋಜನ ಶಾಲೆಯ ಆಶೀರ್ವಚನ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಶಾಲೆಯಲ್ಲಿ ವಿದ್ಯಾರ್ಥಿಗಳು ಒಂದಾಗಿ ಸೇರಿ ಭೋಜನ ಸ್ವೀಕರಿಸುವುದರಿಂದ ನಾವೆಲ್ಲಾ ಒಂದು ಎನ್ನುವ ಮನೋಭಾವನೆ ಹುಟ್ಟು ಹಾಕಿದಂತಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನ ಸಮಿತಿಯ ಕಾರ್ಯದರ್ಶಿ ರಿಚ್ಚಾರ್ಡ್ ಡಾಯಸ್, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಎಡ್ರಿಯನ್ ಸೆರಾವೊ, ಪಾಲನಾ ಸಮಿತಿಯ ಹೆನ್ರಿ ಮಚಾದೊ, ಶಿಕ್ಷಕರುಗಳಾದ ನಾಗರಾಜ್, ಮ್ಯಾಗ್ದಲಿನ್, ಉಮೇಶ್, ವನಿತಾ ಇನ್ನಿತರರು ಉಪಸ್ಥಿತರಿದ್ದರು.