ಉಡುಪಿ: 6,500 ಕೋಟಿ ಮೌಲ್ಯದ ಯುಪಿಸಿಎಲ್ ಕಂಪೆನಿಯನ್ನು ಮೋದಿ ಬಲಗೈ ಬಂಟನೆಂದು ಖ್ಯಾತರಾಗಿರುವ ಅದಾನಿ ಗ್ರೂಪ್ ಖರೀದಿ ಮಾಡಿದ್ದು ಮೋದಿ ಸರ್ಕಾರದ ಒಂದು ವರ್ಷದ ಪ್ರಮುಖ ಸಾಧನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಮಂಗಳವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ರಾಜ್ಯ ಸರಕಾರದ ವತಿಯಿಂದ ಜಿಲ್ಲೆಯಲ್ಲಿ ಎರಡು ವರ್ಷದ ಪ್ರಗತಿಯ ಬಗ್ಗೆ ವಿವರಿಸಿ ಮಾತನಾಡಿದರು. ಈ ಹಿಂದಿನ ಯುಪಿಸಿಎಲ್ ಸಂಸ್ಥೆ ತಮ್ಮ ಸಿಎಸ್ಆರ್ ಫಂಡನ್ನು ಸಾರ್ವಜನಿಕರಿಗಾಗಿ ಉಪಯೋಗ ಮಾಡಿಲ್ಲ. ಬದಲಾಗಿ ಸಂಸ್ಥೆಯಿಂದ ತೊಂದರೆಯೇ ಹೆಚ್ಚಾಗಿದೆ. ಅದಾನಿ ಗ್ರೂಪ್ ಇದೀಗ ಎರಡು ಹಾಗೂ ಮೂರನೇ ಹಂತದ ವಿಸ್ತರಣೆಗೆ ಪ್ರಯತ್ನ ಮಾಡುತ್ತದೆ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿ ವಿರೋಧಿಸುತ್ತೇನೆ ಎಂದು ಸಚಿವರು ತಿಳಿಸಿದರು.
ರಾಜ್ಯಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ 165 ಭರವಸೆಗಳ ಪೈಕಿ 100ಕ್ಕೂ ಅಧಿಕ ಭರವಸೆಗಳನ್ನು ಎರಡು ವರ್ಷದಲ್ಲಿ ಈಡೇರಿಸಿದೆ. ಉಡುಪಿ ಜಿಲ್ಲೆ ರಾಜ್ಯದ ಪ್ರತಿಷ್ಠಿತ ಜಿಲ್ಲೆಯಾಗಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಳೆದ ಎರಡು ವರ್ಷದಲ್ಲಿ 1,002 ಕೋಟಿ. ರೂ. ವಿನಿಯೋಗ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಜಿಲ್ಲೆಯ ಎರಡು ವರ್ಷದ ಪ್ರಗತಿಯ ಬಗ್ಗೆ ವಿವರಿಸಿದರು.
ಜಿಲ್ಲೆಯ ರೈತರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ 596 ಕೋ.ರೂ. ವೆಚ್ಚದ ವಾರಾಹಿ ಯೋಜನೆಯ ಪ್ರಥಮ ಹಂತವನ್ನು ಈಗಾಗಲೇ ಮುಖ್ಯಮಂತಿಗಳು ಉದ್ಘಾಟಿಸಿದ್ದಾರೆ. ಜೊತೆಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಮತ್ತು ಕಾರ್ಮಿಕರಿಗೆ ಪಾವತಿಸಲು ಬಾಕಿ ಇದ್ದ ಸಾಲವನ್ನು ತೀರಿಸಲು 12 ಕೋ.ರೂ. ಮಂಜೂರು ಮಾಡಲಾಗಿದೆ. ಬೆಳಪುವಿನಲ್ಲಿ 141.38 ಕೋ.ರೂ. ವೆಚ್ಚದಲ್ಲಿ ಮಂಗಳೂರು ವಿವಿಯ ಅತ್ಯಾಧುನಿಕ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಬರುವ 21 ಗ್ರಾಮಗಳಿಗೆ ಸಂಬಂಧಿದಂತೆ ಪ್ರತಿ ಗ್ರಾ.ಪಂ.ನಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಡೀಮ್ಡ್ ಫಾರೆಸ್ಟ್ ಪಟ್ಟಿಯನ್ನು ಪರಿಷ್ಕರಿಸಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಒಟ್ಟು 70,531 ಎಕರೆ ಜಮೀನನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ಕೈಬಿಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸಿಆರ್ಝೆಡ್ಗೆ ಸಂಬಂಧಿಸಿದಂತೆ ಕೇರಳ-ಗೋವಾ ಮಾದರಿಯಲ್ಲಿ ರೀತಿಯ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಅಂತಿಮ ಅಂಗೀಕಾರಕ್ಕೆ ಬಾಕಿಯಿದೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ 32,638 ಅಂತ್ಯೋದಯ ಕಾರ್ಡ್ ಹಾಗೂ 1,27,373 ಬಿಪಿಎಲ್ ಕಾರ್ಡ್ಗಳನ್ನು ಜಿಲ್ಲೆಯಲ್ಲಿ ವಿತರಿಸಲಾಗಿದೆ.ಪ್ರಾಕೃತಿಕ ವಿಕೋಪ ನಿಧಿಯ ಈ ಸಾಲಿನ ಅನುದಾನದ 6.05 ಕೋಟಿ ರೂ. ನಲ್ಲಿ 123 ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಕಡಲು ಕೊರೆತ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಉಳ್ಳಾಲದಲ್ಲಿ ಆರಂಭವಾಗಿರುವ ಕಾಮಗಾರಿಯಂತೆಯೇ ಜಿಲ್ಲೆಯ ಎರ್ಮಾಳಿನಿಂದ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿಗೆ 168 ಕೋಟಿ ರೂ. ಮಂಜೂರಾಗಿದೆ ಎಂದರು.
ರಾಜ್ಯ ಹೆದ್ದಾರಿ ಸುಧಾರಣೆ ಯೋಜನೆಯಲ್ಲಿ 35.64 ಕಿಮೀ ರಸ್ತೆ ಅಭಿವೃದ್ಧಿ ಹಾಗೂ ರಾಜ್ಯ ಹೆದ್ದಾರಿ ನವೀಕರಣ ಯೋಜನೆಯಲ್ಲಿ 48.44 ಕಿಮೀ ರಸ್ತೆ ನವೀಕರಣ ಮಾಡಲಾಗಿದೆ. ಮೀನುಗಾರಿಕಾ ಇಲಾಖೆಯಿಂದ ಕರಾವಳಿ ಮೀನುಗಾರಿಕೆ ಬಂದರು ಮತ್ತು ಇತರೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ 123 ಕೋಟಿ ಬಿಡುಗಡೆ ಮಾಡಲಾಗಿದೆ. ಮೀನುಗಾರಿಕಾ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್ ಪೂರೈಕೆಗೆ 55 ಕೋಟಿ ರೂ., ಮೀನುಗಾರರ ವಸತಿ ಯೋಜನೆಯಡಿ 370 ಮನೆಗಳನ್ನು ಮಂಜೂರು ಮಾಡಲಾಗಿದೆ. ಹೆಜಮಾಡಿ ಬಂದರು ನಿರ್ಮಾಣ ಯೋಜನೆಗೆ 122.59 ಕೋಟಿ ರೂ. ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದರು.
ನಗರೋತ್ಥಾನ ಯೋಜನೆಯ 2ನೇ ಹಂತದ ವಿವಿಧ ಕಾಮಗಾರಿಗಳಿಗೆ 42.90 ಕೋಟಿ ರೂ. ಬಿಡುಗಡೆಯಾಗಿದ್ದು, ಈವರೆಗೆ 41.10 ಕೋಟಿ. ರೂ. ವೆಚ್ಚದ ಕಾಮಗಾರಿಗಳು ನಡೆದಿವೆ. 40 ಕಾಮಗಾರಿಗಳ ಪೈಕಿ 36 ಕಾಮಗಾರಿಗಳು ಸಂಪೂರ್ಣವಾಗಿದ್ದು, 4 ಕಾಮಗಾರಿಗಳು ಪ್ರಗತಿಯಲ್ಲಿದೆ.
ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಉಡುಪಿ ತಾಲೂಕಿನ ಕಾಪು, ಉಳಿಯಾರುಗೋಳಿ, ಮಲ್ಲಾರು ಗ್ರಾಪಂಗಳನ್ನು ಒಟ್ಟುಗೂಡಿಸಿ ಕಾಪುಪುರಸಭೆಯನ್ನಾಗಿ ಮಾಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಯೋಜನೆಯಡಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಬಿಡುಗಡೆಯಾದ 55.36 ಕೋಟಿ ರೂ. ಅನುದಾನದಲ್ಲಿ 54.19 ಕೋಟಿ ವೆಚ್ಚದಲ್ಲಿ 3,175 ವಿವಿಧ ಕಾಮಗಾರಿಗಳನ್ನು ಮಾಡಲಾಗಿದ್ದು ಶೇ. 97.88 ಸಾಧನೆಯಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯಡಿಯಮ್ಮಿ ಆಯ್ಕೆಯಾದ 30ಗ್ರಾಮಗಳ ವ್ಯಾಪ್ತಿಯಲ್ಲಿ 51.47 ಕಿಮೀ ಉದ್ದದ 200 ರಸ್ತೆಗಳು, 7ಚರಂಡಿ ಕಾಮಗಾರಿಗಳು, 20ಅಂಗನವಾಡಿಗಳು, 14 ಇತರೇ ಕಟ್ಟಡಗಳು ಹಾಗೂ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರದಿಂದ ಜಿಲ್ಲೆಗೆ ಯಾವುದೊಂದು ಯೋಜನೆಯನ್ನು ತಂದಿದ್ದರೆ ಅದನ್ನು ಜನರ ಮುಂದಿಡಲಿ ಅದನ್ನು ಬಿಟ್ಟು ಟೀಕೆ ಮಾಡುವುದರಲ್ಲೇ ಅವರು ಕಾಲ ಕಳೆಯುತ್ತಿದ್ದಾರೆ. ಟೀಕೆ ಮಾಡುವುದರಲ್ಲಿ ನಮ್ಮ ಸಂಸದೆ ಎಕ್ಸ್ಪರ್ಟ್. ಎಂದರು ಜಿಲ್ಲೆಗೆ ರಾಜ್ಯ ಸರ್ಕಾರ ಸೈನ್ಸ್ ಸೆಂಟರ್ ನೀಡಿದೆ. ಕೇಂದ್ರದಿಂದ ಐಐಟಿ ಮಂಜೂರು ಮಾಡಿಸಿಕೊಳ್ಳಬಹುದಿತ್ತು ಎಂದು ರಾಜ್ಯ ಸರ್ಕಾರದ ಸಾಧನೆ ಶೂನ್ಯ ಎಂದು ಆರೋಪಿಸಿದ್ದ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಸೊರಕೆ ಉತ್ತರ ನೀಡಿದ್ದಾರೆ.
ನಗರಾಭಿವೃದ್ಧಿ ಇಲಾಖೆಗೆ ಯುಪಿಎ ಸರ್ಕಾರವಿದ್ದಾಗ 6,400 ಕೋಟಿ ರೂ. ಮಂಜೂರಾಗಿತ್ತು. ಅದರಲ್ಲಿ 350 ಕೋಟಿ ರೂ. ಆಗಲೇ ಇಲಾಖೆಗೆ ಬಂದಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ 3 ಸಾವಿರ ಕೋ.ರೂ. ಮೊತ್ತವನ್ನು ತಡೆಹಿಡಿಯಲಾಗಿದೆ. ಸ್ವಚ್ಛ ಭಾರತ ಅಭಿಯಾನದ 82 ಕೋಟಿ.ರೂ. ಹೊರತುಪಡಿಸಿ ಇತರ ಯಾವುದೇ ಹಣ ಬಂದಿಲ್ಲ ಎಂದು ಸೊರಕೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶವನ್ನು ರೋದನಾ ಸಮಾವೇಶ ಎಂದು ಹೇಳಿದ್ದನ್ನು ಟೀಕಿಸಿದ ಸೊರಕೆ, ಬಿಜೆಪಿಯ ಎರಡನೇ ವರ್ಷದ ಸಮಾವೇಶ ರೋದನಾ ಸಮಾವೇಶವಾಗಿತ್ತು. ಆ ಸಮಾವೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ “ಗಳಗಳನೆ ಅತ್ತು”, ವಿರೋಧ ಪಕ್ಷದವರು ಆಡಳಿತಕ್ಕೆ ತೊಂದರೆ ಮಾಡುತ್ತಾರೆ ಎಂದಿದ್ದರು ಅದೇ ರೋದನಾ ಸಮಾವೇಶ ಹೊರತು ಕಾಂಗ್ರೆಸ್ ಸಮಾವೇಶವಲ್ಲ ಎಂದರು.
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಮುಖಂಡರಾದ ಕೇಶವ ಕೋಟ್ಯಾನ್, ಪ್ರಕಾಶ್ ಕೊಡವೂರು, ಬಿ.ನರಸಿಂಹ ಮೂರ್ತಿ ಉಪಸ್ಥಿತರಿದ್ದರು.