Home Mangalorean News Kannada News ಉಡುಪಿ: ಯುಪಿಸಿಎಲ್ ವಿಸ್ತರಣೆ ಸಮಸ್ಯೆ ; ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ – ವಿನಯ್...

ಉಡುಪಿ: ಯುಪಿಸಿಎಲ್ ವಿಸ್ತರಣೆ ಸಮಸ್ಯೆ ; ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ – ವಿನಯ್ ಕುಮಾರ್ ಸೊರಕೆ

Spread the love

ಉಡುಪಿ: ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದ ವಿಸ್ತರಣೆಯಿಂದ ಆಗುವ ಸಾಧಕ ಭಾಧಕಗಳ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಂದಿನ ಕ್ರಮದ ಕುರಿತು ಚರ್ಚಿಸಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಪು ಕ್ಷೇತ್ರದ ಶಾಸಕ ಶ್ರೀ ವಿನಯ ಕುಮಾರ್ ಸೊರಕೆ ಹೇಳಿದರು.

vinay-sorake-pressmeet-11-02-2016 (2)

ಅವರು ಶುಕ್ರವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನೆಗೆ ತಮ್ಮದೆನೂ ತಕರಾರಿಲ್ಲ ಆದರೆ ಇಲ್ಲಿನ ಪರಿಸರಕ್ಕೆ ಹಾನಿಯುಂಟಾದರೆ ಅಂತಹ ಯೋಜನೆಯ ವಿರುದ್ಧ ಪ್ರತಿಭಟಸಲು ತಾನು ಸದಾ ಸಿದ್ದ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಗುವುದಿಲ್ಲ ಎಂಬ ಆರೋಪ ಇತ್ತು ಅದನ್ನು ಸುಳ್ಳು ಮಾಡಿ ಸಿದ್ದರಾಮಯ್ಯ ನೇತ್ರತ್ವದಲ್ಲಿ ಹೂಡಿಕೆದಾರರ ಸಮಾವೇಶದ ಮೂಲಕ ಕೋಟ್ಯಾಂತರ ಮೊತ್ತದ ಹೂಡಿಕೆ ರಾಜ್ಯದಲ್ಲಿ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಂತೆ ಆದಾನಿಯವರು ಕೂಡ ಯುಪಿಸಿಎಲ್ ವಿಸ್ತರಣೆಗೆ ಹೆಚ್ಚಿನ ಮೊತ್ತದ ಹೂಡಕೆ ರಾಜ್ಯದಲ್ಲಿ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ ಅವರಿಗೆ ಎಲ್ಲಾ ವಿಷಯದಲ್ಲಿ ಇನ್ನೂ ಕೂಡ ಒಪ್ಪಿಗೆ ಸಿಕ್ಕಿಲ್ಲ ಹೂಡಿಕೆಗೆ ಸ್ಥಳಾವಕಾಶ ನೀಡುವ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಇಲ್ಲಿನ ಬಾವಿಗಳ ನೀರು ಕಲುಷಿತಗೊಂಡಿದ್ದು ಕೃಷಿ ಸಂಪೂರ್ಣ ನಾಶವಾಗಿದೆ. ಇಲ್ಲಿ ಕಾರ್ಯಚರಿಸುತ್ತಿರುವ ಕಂಪೆನಿ ಇದುವರೆಗೆ ಸ್ಥಳೀಯರಿಗೆ ಯಾವುದೇ ರೀತಿಯ ಉದ್ಯೋಗವನ್ನು ನೀಡಿಲ್ಲ.ಅಂದಿನ ಮುಖ್ಯಮಂತ್ರಿ ಯಡ್ಯೂರಪ್ಪ ಅವರ ಕಾಲದಲ್ಲಿ ಮೀನುಗಾರರಿಗೆ ನೀಡಬೇಕಾಗಿದ್ದ ಪರಿಹಾರ ಕೂಡ ಇನ್ನೂ ನೀಡಿಲ್ಲ. ಈ ಬಗ್ಗೆ ಇಂಧನ ಸಚಿವರ ನೇತೃತ್ವದಲ್ಲಿ ಇಲ್ಲಿನ ಮುಖಂಡರ ಸಭೆಯನ್ನು ಕರೆಯಲು ಈಗಾಗಲೇ ಮುಖ್ಯಮಂತ್ರಿಗಳ ಬಳಿ ವಿನಂತಿಸಿದ್ದೇನೆ ಅದರಂತೆ ಸದ್ಯದಲ್ಲಿಯೇ ಸಭೆಯನ್ನು ಕರೆಯಲಿದ್ದು, ಇಲ್ಲಿನ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಿದ್ದೇನೆ. ಅಲ್ಲದೆ ಕಂಪೆನಿ ವ್ಯಾಪ್ತಿಯ ಗ್ರಾಮಪಂಚಾಯತ್‍ಗಳಿಗೆ ನೀಡಬೇಕಾದ ಸಿಎಸ್‍ಆರ್ ಫಂಡ್ ನೀಡದೆ ಕಂಪೆನಿ ಸತಾಯಿಸಿದ್ದು ನಮ್ಮ ಹೋರಾಟದ ಫಲವಾಗಿ ಕೆಲವೊಂದ ಪಂಚಾಯತ್‍ಗಳಿಗೆ ಈಗಾಗಲೇ ಕಂಪೆನಿ ಅದನ್ನು ನೀಡಲು ನಿರ್ಧರಿಸಿದೆ. ಭೂಮಿ ಕಳೆದು ಕೊಂಡ ರೈತರಿಗೆ ಅತಿ ಹೆಚ್ಚು ಮೊತ್ತವಾದ ರೂ 40000 ವರೆಗಿನ ಪರಿಹಾರವನ್ನು ನೀಡುವಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಅದರಲ್ಲಿ ಯಶಸ್ಸನ್ನು ಕಂಡುಕೊಂಡಿದ್ದೇವೆ.

ನಾವು ಕಾಂಗ್ರೆಸ್ ಪಕ್ಷದವರಾಗಿ ನಮ್ಮ ಹೋರಾಟದ ನಿಲುವನ್ನು ಜನರ ಮುಂದೆ ಇರಿಸಿದ್ದೇವೆ ಆದರೆ ಸದಾ ಮೋದಿಯವರ ಪಕ್ಕದಲ್ಲೆ ಆಪ್ತರಾಗಿರುವ ಆದಾನಿಯವರಿಗೆ ಈ ಭಾಗದ ಬಿಜೆಪಿ ನಾಯಕರು ಹಾಗೂ ಸಂಸದರು ಕೂಡ ಇಲ್ಲಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡುವ ಅಗತ್ಯವಿದೆ ಆದರೆ ಅವರೆಲ್ಲರೂ ಈ ವಿಚಾರದಲ್ಲಿ ಮೌನವಾಗಿದ್ದಾರೆ. ದೊಡ್ಡ ಉದ್ದಿಮೆಗಳಿಂದ ಇಲ್ಲಿನ ಭಾಗದ ಜನರಿಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಎಂಬ ನಿಟ್ಟಿನಲ್ಲಿ ಕಿರು ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ ಎಂದರು.
ಪಡುಬಿದ್ರೆ ಭಾಗದ ಸುಜ್ಲಾನ್ ಕಂಪೆನಿ ಹೆಚ್ಚಿನ ಭೂಸ್ವಾಧಿನಕ್ಕಾಗಿ ಮುಂಬೈನ ಪತ್ರಿಕೆಯೊಂದರಲ್ಲಿ ಜಾಹೀರಾತು ಪ್ರಕಟಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ ಬಗ್ಗೆ ಮಾಹಿತಿ ದೊರಕಿದೆ ಅದರ ಕುರಿತು ಸರಿಯಾಗಿ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿಲ್ಲ ಎಂಬ ಆರೋಪದ ಬಗ್ಗೆ ಉತ್ತರಿಸಿದ ಸಚಿವರು ಆಯಾಯ ಕ್ಷೇತ್ರ ಮಟ್ಟದಲ್ಲಿ ಎಲ್ಲರೊಂದಿಗೆ ಚರ್ಚಿಸಿ ಸರ್ವಸಮ್ಮತ ಅಭ್ಯರ್ಥಿಗೆ ಟಿಕೇಟ್ ನೀಡಲಾಗಿದೆ ಅಲ್ಲದೆ ಎಲ್ಲಾ ಸಮುದಾಯದವರಿಗೂ ಕೂಡ ಪ್ರಾತಿನಿಧ್ಯ ನೀಡಲು ಪ್ರಯತ್ನಿಸಲಾಗಿದೆ. ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರಿಗೆ ಕೂಡ ಅವಕಾಶ ನೀಡಿದ್ದು, ಮುಂದಿನ ದಿನಗಳಲ್ಲಿ ಇತರ ಹುದ್ದೆಗಳಿಗೆ ಕೂಡ ಮುಸ್ಲಿಂ ಸಮುದಾಯವನ್ನು ಪರಿಗಣಿಸಲಾಗುವುದು ಎಂದರು.
ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಈಗಾಗಲೇ ಒಳ್ಳೆಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದ್ದು, ಜನರಿಂದ ಉತ್ತಮ ಬೆಂಬಲ ದೊರೆತಿದೆ. ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಉತ್ತಮ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಲಭಿಸಲಿದೆ. ಕೆಲವೊಂದು ಭಾಗಗಳಲ್ಲಿ ಚುನಾವಣಾ ಬಹಿಷ್ಕಾರದ ಮಾತುಗಳು ಕೇಳಿ ಬಂದಿದ್ದು ಅಂತಹ ಪ್ರದೇಶಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಅವರ ಬೇಡಿಕೆಗಳನ್ನು ಪ್ರಥಮ ಆದ್ಯತೆಯಾಗಿರಿಸಿಕೊಂಡು ಪರಿಹರಿಸಲು ಪ್ರಯತ್ನಿಸಲಾಗುವುದು ಅಲ್ಲದೆ ಜನರಿಗೆ ಮತದಾನ ಬಹಿಷ್ಕಾರವನ್ನು ಕೈಬಿಡುವಂತೆ ಮನವರಿಕೆ ಮಾಡಲಾಗುವುದು ಎಂದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯಸರಕಾರ ಜನರ ಅಭಿವೃದ್ಧಿಗಾಗಿ ಹಲವಾರು ಹೊಸ ಹೊಸ ಯೋಜನೆಗಳನ್ನು ಅಳವಡಿಸಿದ್ದು, ಜಿಲ್ಲೆಯಲ್ಲಿ ಅವುಗಳನ್ನು ಸಂಪೂರ್ಣ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಸಕ್ಕರೆ ಕಾರ್ಖಾನೆ ಮೊದಲ ಹಂತದ ಬಾಕಿ ಪಾವತಿ, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ವಾರಾಹಿ ನೀರಾವರಿಗೆ ಚಾಲನೆ, ಲೋಕೊಪಯೋಗಿ, ಜಿಪಂ ರಸ್ತೆಗಳ ಅಭಿವೃದ್ದಿ, ಜನರ ಅನುಕೂಲತೆಗೆ ತಕ್ಕಂತೆ ಕಂದಾಯ, ಪಿಂಚಣಿ ಅದಾಲತ್ ಇನ್ನಿತರ ಹಲವಾರು ಜನಪಯೋಗಿ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬೆಳಪು ಗಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಮಹಾಬಲ ಕುಂದರ್, ನರಸಿಂಹ ಮೂತಿ, ಕಾಪು ದಿವಾಕರ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Spread the love

Exit mobile version