ಉಡುಪಿ: ಯೋಗದಿಂದ ವಿಶ್ವದಲ್ಲಿ ಶಾಂತಿ ಮೂಡಲಿ ಎಂದು ಮೂಡಬಿದ್ರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಹೇಳಿದ್ದಾರೆ.
ಅವರು ಇಂದು ಸಾಲಿಗ್ರಾಮದ ಡಿವೈನ್ ಪಾರ್ಕ್ ನಲ್ಲಿ , ಆಯುಷ್ ಮಂತ್ರಾಲಯ,ಭಾರತ ಸರ್ಕಾರ ನವದೆಹಲಿ , ಡಿವೈನ್ ಪಾರ್ಕ್ ಟ್ರಸ್ಟ್ (ರಿ.), ಸಾಲಿಗ್ರಾಮ ರವರ ಸಹಯೋಗದಲ್ಲಿ ನಡೆದ ಯೋಗೋತ್ಸವ ಕಾರ್ಯಕ್ರ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದ 177 ರಾಷ್ಟ್ರಗಳು ಭಾರತೀಯ ಯೋಗ ಪದ್ದತಿಗೆ ಬೆಂಬಲ ನೀಡಿದ್ದು, ಅದರಂತೆ ಜೂನ್-21 ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆಯಲ್ಲಿ ಬೆಂಬಲ ವ್ಯಕ್ತವಾಗಿದ್ದು, ವಿಶ್ವದ ಇನ್ನಿತರ ರಾಷ್ಟ್ರಗಳೂ ಸಹ ಯೋಗವನ್ನು ಬೆಂಬಲಿಸಿದಲ್ಲಿ, ಆ ಮೂಲಕ ಇಡೀ ವಿಶ್ವ ಒಂದಾಗಲಿದ್ದು, ಆ ಮೂಲಕ ವಿಶ್ವದಲ್ಲಿ ಶಾಂತಿ ಮೂಡಲಿದೆ, ಜಗತ್ತಿನಲ್ಲಿ ನಡೆಯುತ್ತಿರುವ ಹಿಂಸಾಕೃತ್ಯ, ಕ್ರೌರ್ಯಗಳನ್ನು ತಡೆಯಲು ಯೋಗದಿಂದ ಸಾಧ್ಯವಿದೆ ಎಂದು ಅವರು ಹೇಳಿದರು.
ಯೋಗ ಭಾರತೀಯ ಸಂಸ್ಕøತಿಯ ಒಂದು ಶ್ರೇಷ್ಠ ಸಿದ್ಧಿ ಹಾಗೂ ಕಲೆ, ಇದರಿಂದ ಎಲ್ಲಾ ರೋಗಗಳನ್ನು ತಡೆಯುವ ಶಕ್ತಿ ಎದೆ, ಮನಸ್ಸು ಮತ್ತು ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಾಧ್ಯ, ಯೋಗದಿಂದ ಧೀರ್ಘಾಯುಷ್ಯ ಪಡೆಯಬಹುದು, ಮನಸ್ಸನ್ನು ದೃಢಗೊಳಿಸಲು, ಮಾನಸಿಕ ದ್ವಂದ್ವ, ತೊಳಲಾಟದಿಂದ ಮುಕ್ತಿ ಪಡೆಯಲು ಸಾಧ್ಯ, ಜೀವಾತ್ಮನಿಂದ ಪರಮಾತ್ಮ ನಾಗಲು , ಭಗವಂತನ ಸಾಕ್ಷಾತ್ಕಾರ ಪಡೆಯಲು, ಮುಕ್ತಿ ಹೊಂದಲು ಯೋಗದಿಂದ ಸಾಧ್ಯ.
ನಮ್ಮ ಶರೀರವನ್ನು ಪ್ರಕೃತಿಗೆ ಸರಿಯಾಗಿ ಜೋಡಿಸುವಲ್ಲಿ, ಶರೀರದ ರಹಸ್ಯ ತಿಳಿಯಲು ಯೋಗದಿಂದ ಸಾಧ್ಯ, ಪಾಶ್ಚಾತ್ಯರೂ ಸಹ ಯೋಗದಿಂದ ಆಕರ್ಷಿತರಾಗಿದ್ದು,ಎಲ್ಲ ಭಾರತೀಯರೂ ಸಹ ತಮ್ಮ ಪ್ರಾಚೀನ ಈ ಯೋಗ ಸಂಸ್ಕøತಿಯನ್ನು ಅನುಸರಿಸಬೇಕು, ಜಗತ್ತಿನ ಪ್ರತಿಯೊಬ್ಬ ಮಾನವನೂ ಯಾವುದೇ ವರ್ಣ, ಜಾತಿ ಭೇಧವಿಲ್ಲದೇ ಯೋಗ ಮಾಡಬಹುದಾಗಿದ್ದು, ಯೋಗವು ಜಗತ್ತಿನಾದ್ಯಂತ ಹರಡಿ, ಎಲ್ಲಾ ಜೀವಿಗಳಿಗೂ ಇದರ ಪ್ರಯೋಜನ ದೊರೆಯಲಿ ಎಂದು ಸ್ವಾಮೀಜಿ ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ, ಡಿವೈನ್ ಪಾರ್ಕ್ ನ ಆಡಳಿತ ನಿರ್ದೇಶಕರಾದ ಡಾ. ಚಂದ್ರಶೇಖರ ಉಡುಪ ರವರು , ಯೋಗದ ಪ್ರಯೋಜನಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತು ಯೋಗದಿಂದ ನಿರೋಗ ಎಂಬುದನ್ನು ಪ್ರಚುರಪಡಿಸಲು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಮಂಗಳೂರು ವಿಶ್ವ ವಿದ್ಯಾಲಯದ ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಕೆ. ಕೃಷ್ಣ ಶರ್ಮ ಅಧ್ಯಕ್ಷತೆ ವಹಿಸಿದ್ದರು.
ಮಣಿಪಾಲ ವಿಶ್ವ ವಿದ್ಯಾಲಯದ ಎಸೋಸಿಯೇಟ್ ಡೈರಕ್ಟರ್ ಮತ್ತು ರಿಸರ್ಚ್ ಚೇರ್ ಡಾ.ಜಿ.ಅರುಣ ಮಯ್ಯ, ಹೋಮೊಯೋಪತಿ ವೈದ್ಯರಾದ ಡಾ. ಉತ್ತಮ ಕುಮಾರ್ ಶೆಟ್ಟಿ, ಡಿವೈನ್ ಪಾರ್ಕ್ ನ ಟ್ರಸ್ಟಿಗಳಾದ ಕೆ.ಜಿ. ಕರಿಸಿದ್ದಪ್ಪ ಮತ್ತು ಬಿ.ಎಸ್. ಸೋಮಯಾಜಿ ಉಪಸ್ಥಿತರಿದ್ದರು.
ಸ್ವಾಸ್ಥ್ಯ ಹೆಲ್ತಕೇರ್ ಮತು ರಿಸರ್ಚ್ ನ ಡೈರಕ್ಟರ್ ಡಾ. ಕೆ.ಎ. ವಿವೇಕ ಉಡುಪ ಸ್ವಾಗತಿಸಿ, ನಿರೂಪಿಸಿದರು.