ಉಡುಪಿ: ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ `ಎರಡು ಶೂನ್ಯ ಸಂಪಾದನೆ’ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.ವರು
ಅವರು ಸೋಮವಾರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಸರ್ಕಾರದ ಎರಡು ವರುಷದ ಸಾಧನೆಯನ್ನು ತಿಳಿಸಲು ಸರ್ವೋಯ ಸಮಾವೇಶ ಮಾಡಿದ್ದು, ಸಮಾವೇಶದಲ್ಲಿ ಅಭಿವೃದ್ಧಿಗೆ ಪೂರಕವಾಗಿ ಮಾತನಾಡುವ ಬದಲು ರಾಜಕೀಯ ಮಾತನಾಡಿದ್ದಾರೆ. ಸರ್ಕಾರದ ಯಾವುದೇ ಇಲಾಖೆಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸರ್ಕಾರ ನೀಡಿರುವ ಜಾಹೀರಾತಿನಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಈ ಯೋಜನೆಯಿಂದ ಎಷ್ಟು ಜನರಿಗೆ ಲಾಭವಾಗಿದೆ. ಅನ್ನವನ್ನೇ ಊಟಮಾಡದ ಉತ್ತರ ಕರ್ನಾಟಕ ಭಾಗಗಳಿಗೆ ಅನ್ನಭಾಗ್ಯದ ಮೂಲಕ ಉಚಿತವಾಗಿ 30ಕೆಜಿ ಅಕ್ಕಿ ನೀಡುತ್ತಿದ್ದಾರೆ. ಒಂದು ಅಭಿಪ್ರಾಯದ ಪ್ರಕಾರದ ` ನಮ್ಮ ರಾಜ್ಯದ ಅನ್ನಭಾಗ್ಯದ ಅಕ್ಕಿ ಪಕ್ಕದ ರಾಜ್ಯದ ಅಮ್ಮನ ಇಡ್ಲಿಗೆ ಹೋಗುತ್ತದೆ’ ಎಂದು ತಿಳಿಸಿದರು.
ಕ್ಷೀರ ಭಾಗ್ಯದ ಮೂಲಕ ಕೆಎಂಎಫ್ನಲ್ಲಿ ಮಾರಾಟವಾಗದೇ ಉಳಿದಿರುವ ಹಾಲಿನ ಪುಡಿಯನ್ನು ನೀಡಲಾಗುತ್ತದೆ. ಶಾದಿಭಾಗ್ಯ ಯೋಜನೆಯ ಫಲಾನುಭವಿಗಳ ಬಗ್ಗೆ ಅಂಕಿ ಅಂಶವನ್ನು ನೀಡಬೇಕು ಎಂದು ಆಗ್ರಹಿಸಿದರು.ಬಿಜೆಪಿ ಸರ್ಕಾರ ಇದ್ದಾಗ ಮಾಡಿದ ಯೋಜನೆಯನ್ನು ನಿಲ್ಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ವರ್ಷಕ್ಕೆ 2.5 ಲಕ್ಷದಿಂದ 3 ಲಕ್ಷದ ವರೆಗೆ ನೀಡುತ್ತಿದ್ದ ಭಾಗ್ಯ ಲಕ್ಷ್ಮೀ ಬಾಂಡ್ ಇದೀಗ 1 ಲಕ್ಷ ಮಕ್ಕಳಿಗೆ ಮಾತ್ರ ನೀಡಲಾಗುತ್ತಿದೆ.
ಅಹಿಂದಾ ಸರ್ಕಾರ ಎಂದು ಹೇಳಿಕೊಂಡು ಬಂದ ಸಿದ್ದರಾಮಯ್ಯ ಸರ್ಕಾರ ಅಹಿಂದಾ ವರ್ಗಕ್ಕೆ ಏನು ಕೊಟ್ಟಿದೆ. 2 ವರ್ಷದಲ್ಲಿ ಅಹಿಂದಾ ವರ್ಗದಲ್ಲಿ ಏನು ಸುಧಾರಣೆಯಾಗಿದೆ. ಅಹಿಂದಾ ಓಟ್ಬ್ಯಾಂಕ್ಗಾಗಿ ಮಾಡಿದ್ದಾ ಅಥವಾ ಅಭಿವೃದ್ಧಿಗಾಗಿ ಮಾಡಿದ್ದಾ ಎಂದು ಶೋಭಾ ಪ್ರಶ್ನಿಸಿದರು
ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಪ್ರವಾಸ ಹೋಗುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೂ ಆಹ್ವಾನ ನೀಡಿದ್ದರು. ಆದರೆ ಸಿದ್ಧರಾಮಯ್ಯ ಅವರು ಬಿಜೆಪಿ-ಕಾಂಗ್ರೆಸ್ ಎಂದು ತೆಗೆದುಕೊಂಡು ಪ್ರಧಾನಿ ಜೊತೆ ಹೋಗಿಲ್ಲ. ಈ ರೀತಿಯಾದರೆ ರಾಜ್ಯದ ಅಭಿವೃದ್ಧಿ ಕುಂಠಿತವಾಗಲಿದೆ. ರಾಜ್ಯ ಸರ್ಕಾರದ ತಪ್ಪು ನಿರ್ಧಾರದಿಂದ ರಾಜ್ಯಕ್ಕೆ ಉದ್ಯಮಗಳು- ಬಂಡವಾಳ ಹರಿದು ಬರುತ್ತಿಲ್ಲ ಎಂದರು.
ಮೊದಲ ಬಾರಿಗೆ ಬಿಜೆಪಿ ಗ್ರಾ.ಪಂ. ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ.ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೂ ರಾಜ್ಯ ನಾಯಕರು ಪ್ರವಾಸ ಮಾಡುತಿದ್ದಾರೆ. ಇದು ಮುಂದಿನ ವಿಧಾನ ಸನಾ ಚುನಾವಣೆಗೆ ಬುನಾದಿಯಾಗಲಿದೆ. ಅಧ್ಯಕ್ಷರ ಅವಧಿ 5 ವರ್ಷ ಎಂದು ಘೋಷಣೆಯಾಗಿರುವುದರಿಂದ ಅಭಿವೃದ್ಧಿಗೆ ಅವಕಾಶ ಹೆಚ್ಚಿದೆ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮೇ 20ರಂದು ಸಂಸದ ಯಡಿಯೂರಪ್ಪ ಬೈಂದೂರು ಹಾಗೂ ಕುಂದಾಪುರಕ್ಕೆ ಭೇಟಿ ನೀಡಲಿದ್ದಾರೆ. ಮೇ 22ರಂದು ಕೇಂದ್ರ ಸಚಿವ ಸದಾನಂದ ಗೌಡರು ಉಡುಪಿಗೆ ಭೇಟಿ ನೀಡಲಿದ್ದಾರೆ ಎಂದರು.
ಶೇ .50 ಮಹಿಳಾ ಮೀಸಲಾತಿಯೂ ಮಹಿಳೆಯರಿಗೆ ಒಂದು ಅವಕಾಶವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ 155 ಗ್ರಾಪಂಗಳ ಪೈಕಿ 120 ಗ್ರಾಪಂಗಳಲ್ಲಿ ಬಿಜೆಪಿ ಪರ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಮೊದಲ ಬಾರಿಗೆ ಬೆಳಪುವಿನಲ್ಲಿ ಬಿಜೆಪಿ ಎಲ್ಲಾ 11 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿದೆ ಎಂದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಮುಖಂಡರಾದ ಯಶ್ಪಾಲ್ ಸುವರ್ಣ, ಮಟ್ಟಾರು ರತ್ನಾಕರ ಹೆಗ್ಡೆ, ಗೀತಾಂಜಲಿ ಸುವರ್ಣ, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.