ಉಡುಪಿ: ಲಾಕ್ ಡೌನ್ ಆದೇಶ ಉಲ್ಲಂಘಿಸಿ ವಿವಾಹ ಕಾರ್ಯಕ್ರಮ – ವಧು, ವರ ಸೇರಿದಂತೆ 11 ಮಂದಿಯ ವಿರುದ್ದ ಪ್ರಕರಣ ದಾಖಲು
ಉಡುಪಿ: ದೇಶದಾದ್ಯಂತ ಲಾಕ್ ಡೌನ್ ಆದೇಶದ ಜಾರಿಯಲ್ಲಿದ್ದರೂ ಕೂಡ ಅದನ್ನು ಉಲ್ಲಂಘಿಸಿ ಜಿಲ್ಲಾಡಳಿತದ ಯಾವುದೇ ಅನುಮತಿ ಪಡೆಯದೆ ಅಲೆವೂರು ಗ್ರಾಮದ ದುಗ್ಲಿಪದವು ಎಂಬಲ್ಲಿ ಭಾನುವಾರ ವಿವಾಹ ನಡೆದಿದ್ದು, ವಧು ಸೇರಿ 11 ಮಂದಿಯ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ನೀಡಿದ ದೂರಿನಂತೆ ಮಂಜಿ ನಿವಾಸಿ ಸಲೀಂ @ ಮಂಚಿ ಸಲೀಂ, ದುಗ್ಲಿಪದವು ನಿವಾಸಿ ನಬೀಸಾ, ವರ ಹಸನ್, ಮಂಗಳೂರು ಬೋರುಗುಡ್ಡೆ ನಿವಾಸಿ ವಿವಾಹದ ವಧು ರಮಲತ್, ಕುಂಜಿಬೆಟ್ಟು ನಿವಾಸಿ ಅಬ್ದುಲ್ ಸುಹೇಲ್, ಬಡಗಬೆಟ್ಟು ನಿವಾಸಿ ಅಜರುದ್ದೀನ್, ಮೊಹಮ್ಮದ್ ಅಶ್ರಫ್, ಮಂಚಿಕೆರೆ ನಿವಾಸಿ ಶಾಹಿದ್, ಬಕ್ಕಶ್, ಕುಂಜಿಬೆಟ್ಟು ನಿವಾಸಿ ಮಹಮ್ಮದ್ ಶರೀಫ್, ನೇತಾಜಿನಗರ ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.
ಭಾನುವಾರ ಬೆಳಿಗ್ಗೆ ಉಡುಪಿ ತಹಶೀಲ್ದಾರ್ ಬೆಳಿಗ್ಗೆ ಕಛೇರಿಯಲ್ಲಿ ಕರ್ತವ್ಯದಲ್ಲಿದ್ದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಕೋವಿಡ್- 19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಮಾಡಿರುವ ಆದೇಶವನ್ನು ಉಲ್ಲಂಘಿಸಿ ಉಡುಪಿ ತಾಲೂಕು ಅಲೆವೂರು ಗ್ರಾಮದ ದುಗ್ಲಿಪದವು ಎಂಬಲ್ಲಿನ ನಬೀಸಾ ಎಂಬವರ ಮನೆಯಲ್ಲಿ ಹಸನ್ ಮತ್ತು ರಮ್ಲತ್ ರವರ ವಿವಾಹ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಅದರಂತೆ ಹೋಗಿ ಪರಿಶೀಲನೆ ನಡೆಸಿದಾಗ ಕೋವಿಡ್-19 ಕಾಯಿಲೆ ಬಗ್ಗೆ ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೊಳ್ಳದೇ ವಿವಾಹ ಕಾರ್ಯಕ್ರಮ ನಡೆಯುತ್ತಿರುವುದು ಕಂಡು ಬಂದಿತ್ತು. ಮದುವೆ ಹುಡುಗಿಯಾದ ರಮ್ಲತ್ ರವರು ವಿಧಿಬಧ್ಧವಾದ ಅನುಮತಿಯನ್ನು ಪಡೆಯದೇ ದಕ್ಷಿಣಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ಬಂದಿರುತ್ತಾರೆ.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಸೆಕ್ಷನ್ 144(3) ಜಾರಿ ಮಾಡಿದ್ದರೂ ಕೂಡ ಸುಮಾರು 60 ಕ್ಕೂ ಅಧಿಕ ಮಂದಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ದಾಳಿ ನಡೆಯುತ್ತಿದ್ದಂತೆ ವಿವಾಹ ಕಾರ್ಯಕ್ರಮಕ್ಕೆ ಬಂದವರು ಒಡಿ ಹೋಗಿದ್ದಾರೆ. ವಿವಾಹ ಸ್ಥಳದಲ್ಲಿ ಜನರು ಯಾವುದೇ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ದೂರಿನಲ್ಲಿ ತಿಳಿಸಿದ್ದಾರೆ.
ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ದೂರಿನಂತೆ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ತನಿಖೆ ಮುಂದುವರೆದಿದೆ.